ಸ್ವಯಂಘೋಷಿತ ದೇವಮಾನವ ಬಾಬಾ ರಾಂಪಾಲ್ ಅಪರಾಧಿ: ಕೋರ್ಟ್ ತೀರ್ಪು

Update: 2018-10-11 13:22 GMT

ಹೊಸದಿಲ್ಲಿ,ಅ.11: ಹರ್ಯಾಣದ ಹಿಸ್ಸಾರ್ ನ್ಯಾಯಾಲಯವು ಸ್ವಯಂಘೋಷಿತ ದೇವಮಾನವ ರಾಂಪಾಲ್ನನ್ನು ಎರಡು ಕೊಲೆ ಪ್ರಕರಣಗಲ್ಲಿ ದೋಷಿಯೆಂದು ಗುರುವಾರ ತೀರ್ಪು ನೀಡಿದೆ. ತೀರ್ಪಿನ ಹಿನ್ನೆಲೆಯಲ್ಲಿ ಹಿಸ್ಸಾರ್ ಜಿಲ್ಲೆಯಲ್ಲಿ ಕಟ್ಟೆಚ್ಚರವನ್ನು ಘೋಷಿಸಲಾಗಿದ್ದು,ನಿಷೇಧಾಜ್ಞೆಯನ್ನು ಜಾರಿಗೊಳಿಸಲಾಗಿದೆ. ನ್ಯಾಯಾಲಯವು ಅ.16 ಮತ್ತು 17ರಂದು ಶಿಕ್ಷೆಯ ಪ್ರಮಾಣವನ್ನು ಪ್ರಕಟಿಸಲಿದೆ.

 2014,ನ.19ರಂದು ಹಿಸ್ಸಾರ್‌ನ ಬರ್ವಾಲಾದಲ್ಲಿಯ ರಾಂಪಾಲ್ನ ಸತ್ಲೋಕ್ ಆಶ್ರಮದಲ್ಲಿ ನಾಲ್ವರು ಮಹಿಳೆಯರು ಮತ್ತು ಒಂದು ಮಗುವಿನ ಶವಗಳು ಪತ್ತೆಯಾದ ಬಳಿಕ ಆತ ಮತ್ತು ಆತನ 27 ಅನುಯಾಯಿಗಳ ವಿರುದ್ಧ ಕೊಲೆ ಮತ್ತು ಅಕ್ರಮ ದಿಗ್ಬಂಧನ ಪ್ರಕರಣಗಳನ್ನು ದಾಖಲಿಸಲಾಗಿತ್ತು.

 ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಯ್ದುಕೊಳ್ಳಲು ಸಾಕಷ್ಟು ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದ್ದು,ಸುಮಾರು 2,000 ಪೊಲೀಸರನ್ನು ನಿಯೋಜಿಸಲಾಗಿದೆ ಎಂದು ಹರ್ಯಾಣ ಅಧಿಕಾರಿಗಳು ತಿಳಿಸಿದ್ದಾರೆ.

2014ರಲ್ಲಿ ರಾಂಪಾಲ್ನ 12 ಎಕರೆ ವಿಸ್ತೀರ್ಣದ ಆಶ್ರಮಕ್ಕೆ ದಾಳಿ ನಡೆಸಿದ ಪೊಲೀಸರು ಆತನನ್ನು ಬಂಧಿಸಿದ್ದರು. ಪೊಲೀಸ್ ದಾಳಿ ಸಂದರ್ಭ ಕಲ್ಲುಗಳು,ಲಾಠಿಗಳು ಮತ್ತು ಗನ್‌ಗಳಿಂದ ಸಜ್ಜಿತರಾಗಿದ್ದ ಆತನ ಅನುಯಾಯಿಗಳು ಸಂಘರ್ಷಕ್ಕಿಳಿದಿದ್ದರು. ದಿನವಿಡೀ ನಡೆದ ಪೊಲೀಸ್ ಮುತ್ತಿಗೆಯ ಸಂದರ್ಭದಲ್ಲಿ ರಾಂಪಾಲ್ ತನ್ನ ಅನುಯಾಯಿಗಳನ್ನು ಮಾನವ ಗುರಾಣಿಗಳಂತೆ ಬಳಸಿಕೊಂಡಿದ್ದ. ಸಂಘರ್ಷದಲ್ಲಿ ಆರು ಜನರು ಮೃತಪಟ್ಟು,ಇತರ ನೂರಾರು ಜನರು ಗಾಯಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News