ದಿನಕ್ಕೊಂದು ಅಪರಾಧ ನಡೆಸಲು ನಿರುದ್ಯೋಗಿಗಳನ್ನು ನೇಮಿಸಿ ಅವರಿಗೆ ರೂ.15000 ವೇತನ ನೀಡುತ್ತಿದ್ದ ಮಹಾಚೋರ

Update: 2018-10-11 10:24 GMT

ಜೈಪುರ್,ಅ.11 : ಇಲ್ಲಿನ 21 ವರ್ಷದ ಯುವಕನೊಬ್ಬ ಪ್ರತಿ ದಿನ ಮೋಟಾರ್ ಸೈಕಲ್, ಚಿನ್ನದ ಸರ ಹಾಗೂ ಮೊಬೈಲ್ ಫೋನ್ ಕಳ್ಳತನ ಮಾಡುವ ಕೆಲಸಕ್ಕೆಂದು ಆರು ಮಂದಿ ನಿರುದ್ಯೋಗಿ ಯುವಕರನ್ನು ಮಾಸಿಕ ರೂ. 15,000 ವೇತನಕ್ಕೆ ನೇಮಿಸಿ, ಪ್ರತಿ ದಿನ ಒಂದು ಅಪರಾಧ ನಡೆಸಬೇಕು ಇಲ್ಲವೇ ಆ ದಿನದ ವೇತನ ಕಡಿತ ಮಾಡಲಾಗುವುದು ಎಂಬ ಷರತ್ತನ್ನೂವಿಧಿಸಿದ್ದ. ಈ ಕಳ್ಳರ ಜಾಲದ ರೂವಾರಿ ಸೇರಿದಂತೆ ಏಳು ಮಂದಿಯನ್ನು ಪೊಲೀಸರು ಬಂಧಿಸಿದ್ದು  ಅವರಿಂದ ಒಟ್ಟು 33 ಮೊಬೈಲ್ ಫೋನುಗಳು, ಒಂದು ಲ್ಯಾಪ್‍ಟಾಪ್, ಎರಡು ಚಿನ್ನದಸರ ಹಾಗೂ ನಾಲ್ಕು ಮೋಟಾರ್ ಸೈಕಲ್‍ಗಳನ್ನು ವಶಪಡಿಸಿಕೊಳ್ಳಲಾಗಿದೆ. ಸರಗಳ್ಳತನ ಹಾಗೂ ಮೊಬೈಲ್ ಕಳ್ಳತನ ಮಾಡಲು ಈ ಕಳ್ಳರ ತಂಡವು ಕದ್ದ ಮೋಟಾರ್ ಸೈಕಲ್‍ಗಳನ್ನೇಬಳಸುತ್ತಿದ್ದು ಕದ್ದ ಮಾಲುಗಳನ್ನು ಗ್ಯಾಂಗ್  ಲೀಡರ್ ಆಶಿಷ್ ಮೀನಾಗೆ ಅವರು ನೀಡುತ್ತಿದ್ದರೆನ್ನಲಾಗಿದ್ದು ಆತ ಅವುಗಳನ್ನು ಮಾರಾಟ ಮಾಡಿ ಗಣ ಗಳಿಸುತ್ತಿದ್ದ.

ನಗರದ ಜವಾಹರ್ ಸರ್ಕಲ್ ಪ್ರದೇಶ, ಶಿವದಾಸಪುರ, ಖೋ ನಗೊರಿಯಾನ್, ಸನಗನೇರ್ ಹಾಗೂ ಇತರೆಡೆಗಳಲ್ಲಿ ಇತ್ತೀಚೆಗೆ ಮೊಬೈಲ್ ಫೋನ್ ಮತ್ತು ಸರಗಳ್ಳತನ ಪ್ರಕರಣಗಳುಹೆಚ್ಚಾಗುತ್ತಿರುವುದರಿಂದ ಜಾಗೃತಗೊಂಡ ವಿಶೇಷ ಪೊಲೀಸ್ ತಂಡ ಸೀಸಿಟಿವಿಗಳನ್ನು ಪರಿಶೀಲಿಸಿ ಕಳ್ಳರ ತಂಡ ಪ್ರತಾಪ್ ನಗರದ ಬಾಡಿಗೆ ಮನೆಯೊಂದರಲ್ಲಿ ಆಡಗಿಕೊಂಡಿದೆ ಎಂದುತಿಳಿದು ಅಲ್ಲಿ ದಾಳಿ ನಡೆಸಿ ಅವರನ್ನು ಬಂಧಿಸಿದೆ.

ಎಲ್ಲಾ ಆರೋಪಿಗಳು ಅನಕ್ಷರಸ್ಥರೂ, ನಿರುದ್ಯೋಗಿಗಳೂ ಆಗಿದ್ದು ಅವರಿಗೆ ಹಣದ ಆಮಿಷ ತೋರಿಸಿ ಅಪರಾಧಕ್ಕೆ ಆಶಿಷ್ ಪ್ರೇರೇಪಿಸಿದ್ದನೆಂದು ಆರೋಪಿಸಲಾಗಿದೆ. ಜುಲೈ ತಿಂಗಳಲ್ಲಿ ಅವರೆಲ್ಲರನ್ನೂ ಕಳ್ಳತನಕ್ಕಾಗಿ ಆಶಿಷ್ ನೇಮಿಸಿದ್ದು ಅವರು ಕನಿಷ್ಠ 36 ಅಪರಾಧಗಳನ್ನು ಇಲ್ಲಿಯ ತನಕ ನಡೆಸಿದ್ದಾರೆಂದು ಪೊಲೀಸರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News