ಗಂಗೆಗೆ ಹಾರವಾದ ಅಗರ್ವಾಲ್

Update: 2018-10-11 18:43 GMT

ಗಾಂಧೀಜಿಯ 150ನೇ ಹುಟ್ಟುಹಬ್ಬದ ಸಂದರ್ಭ ಇದು. ಮೊನ್ನೆಯಷ್ಟೇ ಗಾಂಧಿ ಜಯಂತಿಯ ದಿನ ಮೋದಿ ನೇತೃತ್ವದಲ್ಲಿ ರಸ್ತೆ ಗುಡಿಸುವ ಪ್ರಹಸನ ನಡೆಯಿತು. ಸ್ವತಃ ಮೋದಿಯವರೇ ಕಸಗುಡಿಸುವವರಂತೆ ನಟಿಸಿ, ಸ್ವಚ್ಛತೆಯ ಬಗ್ಗೆ ಜಾಗೃತಿ ಮೂಡಿಸಿದರು. ಆದರೆ ಗಾಂಧೀಜಿಯ ಸ್ವಚ್ಛತಾ ಆಂದೋಲನವನ್ನೂ, ಅವರ ಉಪವಾಸವನ್ನೂ ಅಣಕಿಸುವಂತಹ ದುರಂತವೊಂದು ಗುರುವಾರ ಸಂಭವಿಸಿದೆ. ಗಂಗಾನದಿಯ ಉಳಿವಿಗಾಗಿ ಆಮರಣ ಉಪವಾಸ ಸತ್ಯಾಗ್ರಹ ಮಾಡುತ್ತಿದ್ದ ಹೋರಾಟಗಾರ ಜಿ.ಡಿ. ಅಗರ್ವಾಲ್ ಇಂದು ಉಪವಾಸದ ಕಾರಣದಿಂದ ಮೃತಪಟ್ಟಿದ್ದಾರೆ. ಅವರು ಜೂನ್ 22ರಿಂದ ಅನಿರ್ದಿಷ್ಟಾವಧಿ ಉಪವಾಸ ಮುಷ್ಕರ ನಡೆಸುತ್ತಿದ್ದರು. ಸ್ವತಃ ಮಹಾತ್ಮಾ ಗಾಂಧೀಜಿಯವರೇ ಇಂದು ದೇಶಕ್ಕಾಗಿ ಉಪವಾಸ ಕೂತಿದ್ದರೆ ಅವರ ಸ್ಥಿತಿ ಏನಾಗಬಹುದಿತ್ತು ಎನ್ನುವುದನ್ನು ಅಗರ್ವಾಲ್ ಸಾವು ಹೇಳುತ್ತಿದೆ. ಸ್ವಚ್ಛತೆ ಮತ್ತು ಅಂಹಿಸೆಯ ಘನತೆ, ಹಿರಿಮೆಯನ್ನು ಬ್ರಿಟಿಷರು ಗೌರವಿಸಿದ ಕಾರಣಕ್ಕಾಗಿಯೇ ಗಾಂಧೀಜಿಯ ಹೋರಾಟ ಯಶಸ್ವಿಯಾಯಿತು. ಆದರೆ ಮೋದಿ ಆಡಳಿತದ ಕಾಲದಲ್ಲಿ ಉಪವಾಸ ತನ್ನ ಘನತೆಯನ್ನು ಕಳೆದುಕೊಂಡಿದೆ.

ಶುದ್ಧ ಗಂಗಾ ಚಳವಳಿಗಾಗಿ ಬದುಕನ್ನೇ ಮೀಸಲಿಟ್ಟವರು ಅಗರ್ವಾಲ್. ಕಾನ್ಪುರದ ಐಐಟಿಯಲ್ಲಿ ಪ್ರೊಫೆಸರ್ ಆಗಿದ್ದ ಜಿ. ಡಿ. ಅಗರ್ವಾಲ್, ಹೋರಾಟದ ಹಾದಿಯಲ್ಲಿ ಸನ್ಯಾಸಿಯಾಗಿ ಬಳಿಕ, ಸ್ವಾಮಿ ಸ್ವರೂಪಾನಂದ ಸರಸ್ವತಿಯಾಗಿ ಬದಲಾದರು. ಈ ಹಿಂದೆಯೂ ಗಂಗಾನದಿಗಾಗಿ ಹಲವು ಬಾರಿ ಉಪವಾಸಗಳನ್ನು ಮಾಡಿದವರು ಅಗರ್ವಾಲ್. ಅವರ ಹೋರಾಟದ ಫಲದಿಂದ, ಗಂಗಾ ತಟದ ಹಲವು ಬೃಹತ್ ಯೋಜನೆಗಳನ್ನು ಸರಕಾರ ಕೈ ಬಿಟ್ಟಿದೆ. ಇತ್ತೀಚೆಗೆ ಗಂಗಾನದಿಯ ಸಂರಕ್ಷಣೆಗಾಗಿ ಉತ್ತರಾಖಂಡದ ಗಂಗೋತ್ರಿಯಿಂದ ಉತ್ತರ ಕಾಶಿಯವರೆಗೆ ಅದರ ಅಬಾಧಿತ ಹರಿವಿಗಾಗಿ ಒಂದು ಕಾನೂನನ್ನು ಜಾರಿಗೊಳಿಸಲು ಆಗ್ರಹಿಸಿ, ಸುಮಾರು 109 ದಿನಗಳ ಕಾಲ ಅವರು ಆಮರಣಾಂತ ಉಪವಾಸ ಕೂತಿದ್ದರು. ಅಗರ್ವಾಲ್ ಅವರ ಉಪವಾಸ ರಾಜಕಾರಣಿಗಳಂತೆ ಕಪಟ ಉಪವಾಸವಾಗಿರಲಿಲ್ಲ. ಅದರಲ್ಲಿ ಪ್ರಾಮಾಣಿಕತೆಯಿತ್ತು, ಬದ್ಧತೆಯಿತ್ತು. ಆದರೆ ಈ ದೇಶದಲ್ಲಿ ಕೆಲವು ಕಪಟ ಬಾಬಾಗಳು ನದಿ ಉಳಿಸಿ ಆಂದೋಲನದ ಹೆಸರಿನಲ್ಲಿ ನಡೆಸುವ ದಂಧೆಗಳು ಸುದ್ದಿಯಾದಷ್ಟು ಇವರ ಉಪವಾಸ ಸುದ್ದಿಯಾಗಲಿಲ್ಲ.

ಗಂಗೆಯನ್ನು ಉಳಿಸುವುದು ತನ್ನ ಅಜೆಂಡಾಗಳಲ್ಲಿ ಒಂದು ಎಂದು ಬಿಜೆಪಿ ಹೇಳಿಕೊಳ್ಳುತ್ತಿದೆ. ಕಳೆದ ಚುನಾವಣೆಯಲ್ಲಿ ಗಂಗೆಯ ಹೆಸರಿನಲ್ಲೂ ಮತಗಳನ್ನು ಯಾಚಿಸಿದೆ. ಗಂಗಾನದಿಗಾಗಿ ಕೋಟಿ ಗಟ್ಟಲೆ ಹಣವನ್ನು ಬಿಡುಗಡೆಗೊಳಿಸಿದೆೆ. ಸಚಿವೆ ಉಮಾಭಾರತಿ ಗಂಗಾನದಿಯ ಬಗ್ಗೆ ಬಗೆ ಬಗೆಯ ಘೋಷಣೆಗಳನ್ನು ಮಾಡುತ್ತಾ ಬಂದಿದ್ದಾರೆ. ಆದರೆ ಗಂಗೆ ಇನ್ನಷ್ಟು ಕಲುಷಿತಗೊಂಡಿದ್ದಾಳೆ. ಗಂಗಾನದಿಯ ನೀರು ಕುಡಿಯುವುದಕ್ಕೆ ಅನರ್ಹ ಎಂದು ಪರಿಸರ ತಜ್ಞರು ಘೋಷಿಸಿದ್ದಾರೆ. ಇಂತಹ ಹೊತ್ತಿನಲ್ಲಿ, ಅಗರ್ವಾಲ್ ಉಪವಾಸವನ್ನು ಗಂಭೀರವಾಗಿ ತೆಗೆದುಕೊಳ್ಳುವುದು ಸರಕಾರದ ಅವಶ್ಯಕತೆಯೂ ಆಗಿತ್ತು. ಆದರೆ ಬಿಜೆಪಿಯ ಗಂಗೆಯ ಶುದ್ಧೀಕರಣ ಒಂದು ಪ್ರಹಸನ ಮಾತ್ರ ಆಗಿತ್ತು. ಗಂಗಾನದಿಗಾಗಿ ಸದಾ ಒಂದಲ್ಲ ಒಂದು ರೀತಿಯಲ್ಲಿ ಪ್ರತಿಭಟನೆ ನಡೆಸುತ್ತಿರುವ ಅಗರ್ವಾಲ್ ಸರಕಾರದ ಪಾಲಿಗೆ ಗಂಟಲ ಮುಳ್ಳಾಗಿದ್ದರು. ಅವರಿಗೆ ಗಂಗೆಯ ಶುದ್ಧೀಕರಣ ಬೇಕಾಗಿರಲಿಲ್ಲ. ಬದಲಿಗೆ ಅಗರ್ವಾಲ್ ಸಾವು ಬೇಕಾಗಿತ್ತು. ಕೊನೆಗೂ ಅಗರ್ವಾಲ್ ಹೋರಾಟವನ್ನು ಇಲ್ಲವಾಗಿಸುವಲ್ಲಿ ಸರಕಾರ ಯಶಸ್ವಿಯಾಗಿದೆ. ಗಂಗೆಯ ಹೆಸರಿನಲ್ಲಿ ಹಣ ದೋಚುತ್ತಿರುವ ರಾಜಕಾರಣಿಗಳಿಗೆ ದೊಡ್ಡದೊಂದು ಅಡ್ಡಿ ನಿವಾರಣೆಯಾಗಿದೆ.

ಗಂಗೆಗಾಗಿ ಧ್ವನಿಯೆತ್ತಿ ಪ್ರಾಣ ಅರ್ಪಿಸಿದವರಲ್ಲಿ ಅಗರ್ವಾಲ್ ಮೊದಲಿಗರೇನೂ ಅಲ್ಲ. ಈ ಹಿಂದೆ ಸ್ವಾಮಿ ನಿಗಮಾನಂದರು ಗಂಗಾನದಿಯ ತಟದಲ್ಲಿ ನಡೆಯುವ ಅಕ್ರಮ ಗಣಿಗಾರಿಕೆಯನ್ನು ವಿರೋಧಿಸಿ ಆಮರಣಾಂತ ಉಪವಾಸವನ್ನು ಮಾಡಿದ್ದರು. ಸುಮಾರು 73 ದಿನಗಳ ಕಾಲ ಅವರು ಉಪವಾಸ ಸತ್ಯಾಗ್ರಹ ಮಾಡಿದರೂ ಸರಕಾರ ಬಗ್ಗಲಿಲ್ಲ. ಬದಲಿಗೆ ಬಲವಂತವಾಗಿ ಅವರನ್ನು ಆಸ್ಪತ್ರೆಗೆ ಎತ್ತೊಯ್ಯಿತು. ಬಳಿಕ ಆಸ್ಪತ್ರೆಯಲ್ಲಿ ಅವರು ನಿಗೂಢವಾಗಿ ಸಾವನ್ನಪ್ಪಿದರು. ದುರಂತವೆಂದರೆ, ಸ್ವಾಮಿ ನಿಗಮಾನಂದರು ಗಂಗೆಗಾಗಿ ನಿಜವಾದ ಅರ್ಥದ ಉಪವಾಸ ಮಾಡುತ್ತಿರುವಾಗ, ಅತ್ತ ರಾಮ್‌ಲೀಲಾ ಮೈದಾನದಲ್ಲಿ ಬಾಬಾ ರಾಮ್‌ದೇವ್ ಅವರ ಕಪಟ ಐಶಾರಾಮಿ ಉಪವಾಸ ನಡೆಯುತ್ತಿತ್ತು. ಬಾಬಾ ರಾಮ್‌ದೇವ್ ಪಡೆ ಅನಾಹುತ ನಡೆಸುವ ಕುರಿತಂತೆ ಮಾಹಿತಿ ದೊರೆತದ್ದೇ ಪೊಲೀಸರು ಆ ಕಪಟಿಗಳನ್ನು ಅಟ್ಟಾಡಿಸಿ ಓಡಿಸಿದರು. ರಾಮ್‌ದೇವ್ ಮಹಿಳೆಯ ಉಡುಪು ಧರಿಸಿ ಪೊಲೀಸರಿಂದ ಬಚಾವಾಗಲು ಯತ್ನಿಸಿದರಾದರೂ ಅದರಲ್ಲಿ ವಿಫಲರಾದರು. ದೇಶದ ಮಾಧ್ಯಮಗಳು ಬಾಬಾರಾಮ್‌ದೇವ್ ಅವರ ಉಪವಾಸವನ್ನು ಹಾಡಿಹೊಗಳಿದವು ಮತ್ತು ಪ್ರಚಾರ ನೀಡಿದವು. ಆದರೆ ನಿಗಮಾನಂದರ ಪ್ರಾಮಾಣಿಕ ಉಪವಾಸದ ಕಡೆಗೆ ತಿರುಗಿಯೂ ನೋಡಲಿಲ್ಲ.

ತನ್ನ ಕಪಟ ಉಪವಾಸದ ಬಳಿಕ ಬಾಬಾ ರಾಮ್‌ದೇವ್ ದಾಖಲಾದ ಆಸ್ಪತ್ರೆಯಲ್ಲೇ ಸ್ವಾಮಿ ನಿಗಮಾನಂದರು ಮೃತಪಟ್ಟಿದ್ದರು. ಗಂಗಾನದಿಗೂ, ಸ್ವಾಮಿ ನಿಗಮಾನಂದರಿಗೂ ಎಸಗಿದ ದ್ರೋಹದ ಕಾರಣವೋ ಏನೋ, ಆ ಬಳಿಕ ಉತ್ತರಾಖಂಡ ಭಾರೀ ಪ್ರಕೃತಿ ವಿಕೋಪವನ್ನು ಎದುರಿಸಬೇಕಾಯಿತು. ಗಂಗೆ ಉಕ್ಕಿ ಹರಿಯಿತು. ನಗರಗಳು ಕೊಚ್ಚಿ ಹೋದವು. ಇದೀಗ ಸ್ವಾಮಿ ನಿಗಮಾನಂದರ ಹಾದಿಯಲ್ಲೇ ಅಗರ್ವಾಲ್ ಸಾಗಿದ್ದಾರೆ. ಈ ಸಾವುಗಳು ಏಕಕಾಲದಲ್ಲಿ ಎರಡು ಪ್ರಶ್ನೆಗಳನ್ನು ಎತ್ತುತ್ತವೆ. ಒಂದೆಡೆ ಮಾನವ ಹಕ್ಕು ಹೋರಾಟಗಾರರನ್ನು ‘ನಗರ ನಕ್ಸಲರು’ ಎಂಬ ಹಣೆಪಟ್ಟಿಕೊಟ್ಟು ಸರಕಾರ ಬಂಧಿಸುತ್ತದೆ. ಈ ಹೋರಾಟಗಾರರು ನಕ್ಸಲರ ಕುರಿತಂತೆ ಮೃದು ನಿಲುವು ಹೊಂದಿದ್ದಾರೆ ಎನ್ನುವುದು ಸರಕಾರದ ಆರೋಪ.

ಹಾಗಾದರೆ ಸ್ವಾಮಿ ನಿಗಮಾನಂದ, ಅಗರ್ವಾಲ್‌ನಂತಹವರು ಯಾಕೆ ಮೃತಪಟ್ಟರು? ಪ್ರಜಾಸತ್ತಾತ್ಮಕವಾಗಿ, ಗಾಂಧೀಜಿಯ ಅಹಿಂಸಾ ಮಾರ್ಗದಲ್ಲಿ ನಡೆಸಿದ ಉಪವಾಸ ಸತ್ಯಾಗ್ರಹವನ್ನು ಸರಕಾರ ಯಾಕೆ ತಿರಸ್ಕರಿಸಿತು? ಅವರನ್ನು ಸಾಯುವುದಕ್ಕೆ ಯಾಕೆ ಬಿಟ್ಟಿತು? ಅವರು ಮಾಡುತ್ತಿದ್ದ ಹೋರಾಟ, ಸರಕಾರದ ಕಾರ್ಯಕ್ರಮಗಳಿಗೆ ಪೂರಕವಾಗಿತ್ತು. ಸ್ವಚ್ಛತಾ ಆಂದೋಲನದ ಬಗ್ಗೆ ಗಂಟೆಗಟ್ಟಲೆ ಕೊರೆಯುವ, ಜಾಹೀರಾತಿಗಾಗಿ ಕೋಟಿಗಟ್ಟಲೆ ಖರ್ಚು ಮಾಡುವ, ಜನರಿಂದ ಅದಕ್ಕಾಗಿ ಸ್ವಚ್ಛತಾ ತೆರಿಗೆಯನ್ನು ವಸೂಲಿ ಮಾಡುವ ಸರಕಾರ ಅಗರ್ವಾಲ್ ಹೋರಾಟವನ್ನು ತಿರಸ್ಕರಿಸಿದ್ದು ಯಾಕೆ? ಅಗರ್ವಾಲ್ ಅವರ ಬೇಡಿಕೆಗೆ ಸ್ಪಂದಿಸಲು ಸರಕಾರಕ್ಕೆ ಇದ್ದ ಅಡ್ಡಿಯಾದರೂ ಏನು? ಅಹಿಂಸಾ ಹೋರಾಟ ಮತ್ತು ಗಂಗೆಯ ಶುದ್ಧೀಕರಣದ ಕುರಿತಂತೆ ನಮ್ಮ ಸರಕಾರ ಎಷ್ಟರಮಟ್ಟಿಗೆ ಪ್ರಾಮಾಣಿಕವಾಗಿದೆ ಎನ್ನುವುದು ಅಗರ್ ವಾಲ್ ಸಾವಿನಿಂದ ಬಹಿರಂಗವಾಗಿದೆ. ಯಾವ ಗಂಗೆಯಲ್ಲಿ ಮಿಂದರೂ ಈ ಸಾವಿನ ಕಳಂಕದಿಂದ ಮೋದಿ ನೇತೃತ್ವದ ಸರಕಾರ ಪಾರಾಗುವುದಕ್ಕೆ ಸಾಧ್ಯವಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News