ಭಾರತಕ್ಕೆ 115ನೇ ಸ್ಥಾನ ನೀಡಿದ ವಿಶ್ವ ಸಂಸ್ಥೆಯ ಮಾನವ ಬಂಡವಾಳ ಸೂಚ್ಯಂಕ ವರದಿಯನ್ನು ತಿರಸ್ಕರಿಸಿದ ಕೇಂದ್ರ ಸರಕಾರ

Update: 2018-10-12 06:17 GMT

ಹೊಸದಿಲ್ಲಿ, ಅ.12: ಜಗತ್ತಿನ 157 ರಾಷ್ಟ್ರಗಳ ಪೈಕಿ ಭಾರತವನ್ನು 115ನೇ ಸ್ಥಾನದಲ್ಲಿರಿಸಿದ ವಿಶ್ವ ಬ್ಯಾಂಕಿನ ಮಾನವ ಬಂಡವಾಳ ಸೂಚ್ಯಂಕ (ಹ್ಯೂಮನ್ ಕ್ಯಾಪಿಟಲ್ ಇಂಡೆಕ್ಸ್) ವರದಿಯನ್ನು ಕೇಂದ್ರ ಸರಕಾರ ಗುರುವಾರ ತಿರಸ್ಕರಿಸಿದೆ. ಭಾರತವನ್ನು ಈ ಪಟ್ಟಿಯಲ್ಲಿ ನೇಪಾಳ, ಶ್ರೀಲಂಕಾ, ಮ್ಯಾನ್ಮಾರ್ ಮತ್ತು ಬಾಂಗ್ಲಾದೇಶಕ್ಕಿಂತಲೂ ಕೆಳಗಿನ ಸ್ಥಾನದಲ್ಲಿರಿಸಲಾಗಿದೆ.

ಶಿಶು ಮರಣ ಪ್ರಮಾಣ, ಆರೋಗ್ಯ ಮತ್ತು ಶಿಕ್ಷಣ ಮಾನದಂಡಗಳ ಆಧಾರದಲ್ಲಿ ವಿಶ್ವ ಸಂಸ್ಥೆ ತನ್ನ ಪ್ರಥಮ ಹ್ಯೂಮನ್ ಕ್ಯಾಪಿಟಲ್ ಇಂಡೆಕ್ಸ್ ವರದಿ ಹೊರತಂದಿದೆ.

ದೇಶದಲ್ಲಿ ಜನರ ಅಭಿವೃದ್ಧಿಗೆ ಕೈಗೊಳ್ಳಲಾಗುತ್ತಿರುವ ಹಲವು ಪ್ರಮುಖ ಕ್ರಮಗಳಾದ ಆಯುಷ್ಮಾನ್ ಭಾರತ್ ಯೋಜನಾ, ಸಮಗ್ರ ಶಿಕ್ಷಾ ಅಭಿಯಾನ, ಪ್ರಧಾನ ಮಂತ್ರಿ ಉಜ್ವಲ ಯೋಜನಾ, ಆಧಾರ್ ಮುಂತಾದವುಗಳನ್ನು ಈ ಸೂಚ್ಯಂಕ ಪ್ರತಿಫಲಿಸುತ್ತಿಲ್ಲ ಎಂದು ವಿತ್ತ ಸಚಿವಾಲಯದ ಹೇಳಿಕೆ ತಿಳಿಸಿದೆ. ಈ ಕಾರಣದಿಂದಾಗಿ ಈ ವರದಿಯನ್ನು ಕಡೆಗಣಿಸಿ ಭಾರತ ಸರಕಾರವು ತನ್ನ ಮಾನವ ಬಂಡವಾಳ ಅಭಿವೃದ್ಧಿ ಕಾರ್ಯಕ್ರಮಗಳತ್ತ ಗಮನ ಹರಿಸಿ ದೇಶದ ಎಲ್ಲಾ ಮಕ್ಕಳ ಜೀವನ ಮಟ್ಟ ಸುಧಾರಣೆಗೆ ಕ್ರಮ ಕೈಗೊಳ್ಳುವುದು ಎಂದು ವಿತ್ತ ಸಚಿವಾಲಯದ ಹೇಳಿಕೆ ತಿಳಿಸಿದೆ.

ಭಾರತದಲ್ಲಿ ಸ್ತ್ರೀಯರಿಗೆ ಸಂಬಂಧಿಸಿದ ಮಾನವ ಬಂಡವಾಳ ಸೂಚ್ಯಂಕ ಪುರುಷರಿಗಿಂತ ಸ್ವಲ್ಪ ಉತ್ತಮವಾಗಿದೆ ಎಂದು ವರದಿ ತಿಳಿಸಿದೆ. ಐದು ವರ್ಷದವರೆಗಿನ ಮಕ್ಕಳು ಬದುಕುವ ಸಂಭಾವ್ಯತೆ ಪ್ರತಿ 100 ಮಕ್ಕಳಿಗೆ 96ರಷ್ಟಿದೆ ಎಂದು ವರದಿ ತಿಳಿಸಿದೆ.

''ಭಾರತದಲ್ಲಿ ತನ್ನ 4 ವರ್ಷ ವಯಸ್ಸಿನಲ್ಲಿ ಶಾಲೆಗೆ ಸೇರುವ ಮಗು ತನಗೆ 18 ವರ್ಷವಾಗುವಷ್ಟರ ಹೊತ್ತಿಗೆ 10.2 ವರ್ಷಗಳಷ್ಟು ಶಾಲಾ ಜೀವನ ನಡೆಸಿರುತ್ತಾನೆ'' ಎಂದೂ ವರದಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News