ಬಿಜೆಪಿ ಸೇರಿದ ಕೆಲವೇ ಗಂಟೆಗಳಲ್ಲಿ ಮಾತೃ ಪಕ್ಷಕ್ಕೆ ಮರಳಿದ ತೆಲಂಗಾಣ ಕಾಂಗ್ರೆಸ್ ನಾಯಕಿ

Update: 2018-10-12 06:37 GMT

ಹೈದರಾಬಾದ್, ಅ.12: ಆಂಧ್ರ ಪ್ರದೇಶದ ಮಾಜಿ ಉಪಮುಖ್ಯಮಂತ್ರಿ ದಾಮೋದರ್ ರಾಜಾ ನರಸಿಂಹ ಅವರ ಪತ್ನಿ, ಕಾಂಗ್ರೆಸ್ ನಾಯಕಿ ಪದ್ಮಿನಿ ರೆಡ್ಡಿ ಗುರುವಾರ ಬೆಳಗ್ಗೆ ಬಿಜೆಪಿ ಸೇರುವುದಾಗಿ ಘೋಷಿಸಿದ ಕೆಲವೇ ಗಂಟೆಗಳಲ್ಲಿ ಮರಳಿ ಮಾತೃ ಪಕ್ಷಕ್ಕೆ ಸೇರಿ ಭಾರೀ ಕುತೂಹಲ ಮೂಡಿಸಿದ್ದಾರೆ.

ಸಾಮಾಜಿಕ ಕಾರ್ಯಕರ್ತೆಯೂ ಆಗಿರುವ ಪದ್ಮನಿ ಗುರುವಾರ ಬೆಳಗ್ಗೆ ತೆಲಂಗಾಣ ಬಿಜೆಪಿ ಅಧ್ಯಕ್ಷ ಡಾ.ಲಕ್ಷ್ಮಣ್ ಅವರನ್ನು ಭೇಟಿಯಾದಾಗ ಎಲ್ಲೆಡೆ ಅವರು ಬಿಜೆಪಿ ಸೇರುವರೆಂಬ ವದಂತಿ ಹರಡಿತ್ತು. ಅದಕ್ಕೆ ಪುಷ್ಟಿ ನೀಡುವಂತೆ ಅವರು ಪಕ್ಷವನ್ನು ಸೇರಿದ್ದರಲ್ಲದೆ ಈ ಬಗ್ಗೆ ಬಿಜೆಪಿ ಪತ್ರಿಕಾಗೋಷ್ಠಿಯನ್ನೂ ನಡೆಸಿತ್ತು. ಆಕೆ ಬಿಜೆಪಿ ಸೇರಿದ್ದು ರಾಜ್ಯದಲ್ಲಿ ಬಿಜೆಪಿಗೆ ದೊಡ್ಡ ಬಲ ಬಂದಂತೆ ಆಗಿದೆ ಎಂದೂ ವಿವರಿಸಲಾಯಿತಲ್ಲದೆ, ಮಹಿಳೆಯರ ಕಲ್ಯಾಣಕ್ಕೆ ಆಕೆ ಪಡುತ್ತಿರುವ ಶ್ರಮವನ್ನೂ ಲಕ್ಷ್ಮಣ್ ಕೊಂಡಾಡಿದ್ದರು.

ಒಂದು ಕುಟುಂಬದ ಒಬ್ಬರಿಗಿಂತ ಹೆಚ್ಚು ಮಂದಿಗೆ ಟಿಕೆಟ್ ನೀಡಲಾಗುವುದಿಲ್ಲ ಎಂದು ತೆಲಂಗಾಣ ಕಾಂಗ್ರೆಸ್ ತನ್ನ ಯೋಜನೆಯ ಸುಳಿವು ನೀಡಿದ್ದೇ ಅವರು ಬಿಜೆಪಿಗೆ ಸೇರಲು ಕಾರಣವೆಂದು ನಂಬಲಾಗಿತ್ತು. ಆದರೆ ಕೆಲವೇ ಗಂಟೆಗಳಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಮರಳಿದ ಪದ್ಮನಿ ‘‘ನಾನು ಬಿಜೆಪಿ ಸೇರುವ ನಿರ್ಧಾರದಿಂದ ಹಿಂದೆ ಸರಿದಿದ್ದೇನೆ. ಕಾಂಗ್ರೆಸ್ ಕಾರ್ಯಕರ್ತರ ಭಾವನೆಗಳು ನನಗೆ ಅರ್ಥವಾಗುತ್ತಿದೆ’’ ಎಂದಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿದ ಬಿಜೆಪಿಯ ಪ್ರಮುಖ ವಕ್ತಾರ ಕೃಷ್ಣ ಸಾಗರ್ ರಾವ್ ‘‘ಪದ್ಮನಿ ಅವರೊಬ್ಬ ಶಿಕ್ಷಿತ ಮಹಿಳೆ, ಆಕೆ ಬಿಜೆಪಿ ಸೇರುತ್ತೇನೆಂದಾಗ ಆಕೆಯ ಬಳಿ ಅದಕ್ಕೆ ಆಕೆಯ ಪತಿಯ ಅನುಮತಿ ಕೇಳಲು ನಾವು ಖಂಡಿತವಾಗಿಯೂ ಹೇಳಲು ಸಾಧ್ಯವಿಲ್ಲ, ಆಕೆಯ ನಿರ್ಧಾರವನ್ನು ಬಿಜೆಪಿ ಗೌರವಿಸುತ್ತದೆ. ಮಹಿಳಾ ಸಬಲೀಕರಣಕ್ಕೆ ಬಿಜೆಪಿ ನೀಡುವ ಗೌರವವನ್ನು ಇದು ಸೂಚಿಸುತ್ತದೆ’’ ಎಂದಿದ್ದಾರೆ.

ಕಿರಣ್ ಕುಮಾರ್ ರೆಡ್ಡಿ ಆಂಧ್ರ ಪ್ರದೇಶದ ಮುಖ್ಯಮಂತ್ರಿಯಾಗಿದ್ದ ಸಂದರ್ಭ ಉಪಮುಖ್ಯಮಂತ್ರಿಯಾಗಿದ್ದ ಪದ್ಮಿನಿ ರೆಡ್ಡಿಯವರ ಪತಿ ದಾಮೋದರ ರೆಡ್ಡಿ ಸದ್ಯ ಮುಂಬರುವ ತೆಲಂಗಾಣ ವಿಧಾನಸಭಾ ಚುನಾವಣೆಗಾಗಿ ಕಾಂಗ್ರೆಸ್ ಪ್ರಣಾಳಿಕೆ ಸಮಿತಿಯ ಉಸ್ತುವಾರಿಯಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News