ಮುಂದಿನ 48 ಗಂಟೆಗಳ ಕಾಲ ವಿಶ್ವಮಟ್ಟದಲ್ಲಿ ಅಂತರ್ಜಾಲ ಸೇವೆಗಳು ಸ್ಥಗಿತಗೊಳ್ಳುವ ಸಾಧ್ಯತೆ

Update: 2018-10-12 15:38 GMT

ಹೊಸದಿಲ್ಲಿ,ಅ.12 : ಮುಂದಿನ 48 ಗಂಟೆಗಳ ತನಕ ಜಗತ್ತಿನಾದ್ಯಂತ ಅಂತರ್ಜಾಲ ಬಳಕೆದಾರರು ನೆಟ್‍ವರ್ಕ್ ವೈಫಲ್ಯವನ್ನು ಎದುರಿಸಬೇಕಾಗಬಹುದು.  ಪ್ರಮುಖ ಡೊಮೇನ್ ಸರ್ವರ್‍ಗಳು ತಮ್ಮ ನಿಯಮಿತ ನಿರ್ವಹಣಾ ಕೆಲಸವನ್ನು ಕೈಗೊಳ್ಳುವುದೇ ಇದಕ್ಕೆ ಕಾರಣವೆಂದು ವರದಿಗಳು ತಿಳಿಸಿವೆ. ಈ ಸಂದರ್ಭ ಮುಖ್ಯ ಡೊಮೇನ್ ಸರ್ವರ್‍ಗಳು ಹಾಗೂ ಅದಕ್ಕೆ ಸಂಬಂಧಿಸಿದ ನೆಟ್‍ವರ್ಕ್ ಸೌಲಭ್ಯಗಳು  ಕಾರ್ಯನಿರ್ವಹಿಸದೇ ಇರಬಹುದು ಎಂದು  ಹೇಳಲಾಗಿದೆ.

ಈ ಅವಧಿಯಲ್ಲಿ ಇಂಟರ್ನೆಟ್ ಕಾರ್ಪೊರೇಶನ್ ಆಫ್ ಅಸ್ಸೈನ್ಡ್ ನೇಮ್ಸ್ ಎಂಡ್ ನಂಬರ್ಸ್ (ಐಸಿಎಎನ್‍ಎನ್) ತನ್ನ ನಿರ್ವಹಣಾ ಕಾರ್ಯದ ನಿಮಿತ್ತ ಕ್ರಿಪ್ಟೊಗ್ರಾಫಿಕ್ ಕೀ ಬದಲಾಯಿಸಲಿದ್ದು, ಇದು ಇಂಟರ್ನೆಟ್ ನ ಡೊಮೇನ್ ನೇಮ್ ಸಿಸ್ಟಂ (ಡಿಎನ್ ಎಸ್) ಇದನ್ನು ಇನ್ನಷ್ಟು ಬಲಪಡಿಸಿ ಸಂರಕ್ಷಿಸಲಿದೆ. ಹೆಚ್ಚುತ್ತಿರುವ ಸೈಬರ್ ದಾಳಿಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಇಂತಹ ಒಂದು ಕ್ರಮ ಅಗತ್ಯವಾಗಿದೆ ಎಂದು ಐಸಿಎಎನ್‍ಎನ್ ಹೇಳಿದೆ.

ಕೆಲ ನೆಟ್‍ವರ್ಕ್ ಆಪರೇಟರ್‍ಗಳು ಅಥವಾ ಇಂಟರ್ನೆಟ್ ಸೇವಾ ಪೂರೈಕೆದಾರರು  ಈ ಬದಲಾವಣೆಗೆ ತಯಾರಿ ನಡೆಸಿಲ್ಲದೇ ಇದ್ದರೆ ಅಂತಹ ಆಪರೇಟರ್ ಗಳ ಮೂಲಕ ಅಂತರ್ಜಾಲ ಸೇವೆ ಪಡೆಯುತ್ತಿರುವವರು ಬಾಧಿತರಾಗಬಹುದು. ಸೂಕ್ತ ಸಿಸ್ಟಂ ಸೆಕ್ಯುರಿಟಿ ಎಕ್ಸ್‍ಟೆನ್ಶನ್ ಅಳವಡಿಸುವ ಮೂಲಕ ಸಮಸ್ಯೆಯನ್ನು ತಡೆಗಟ್ಟಬಹುದು ಎಂದು ಕಮ್ಯುನಿಕೇಶನ್ಸ್ ರೆಗ್ಯುಲೇಟರಿ ಅಥಾರಿಟಿ ತಿಳಿಸಿದೆ.

ಮುಂದಿನ 48 ಗಂಟೆಗಳ ಕಾಲ ಇಂಟರ್ನೆಟ್ ಬಳಕೆದಾರರು ಕೆಲ ವೆಬ್ ಪೇಜ್ ಗಳನ್ನು ನೋಡಲು ಅಥವಾ ಆನ್ಲೈನ್ ಪಾವತಿಗಳನ್ನು ಮಾಡಲು ಅಸಾಧ್ಯವಾಗಬಹುದು ಎಂದು ಹೇಳಲಾಗಿದೆ.

ಇಂಟರ್‌ನೆಟ್ ವೈಫಲ್ಯವನ್ನು ಹೇಗೆ ತಪ್ಪಿಸಬಹುದು?

ಸುರಕ್ಷಿತ, ಸ್ಥಿರ ಮತ್ತು ಪ್ರತಿರೋಧಕ ಡಿಎನ್‌ಎಸ್ ಹೊಂದಲು ಜಾಗತಿಕ ಇಂಟರ್‌ನೆಟ್ ಸ್ಥಾಗಿತ್ಯ ಅಗತ್ಯವಾಗಿದೆ ಎಂದು ಹೇಳಿಕೆಯೊಂದರಲ್ಲಿ ಸಂಪರ್ಕ ನಿಯಂತ್ರಣ ಪ್ರಾಧಿಕಾರ (ಸಿಆರ್‌ಎ) ತಿಳಿಸಿದೆ.

   ‘‘ಈ ಬದಲಾವಣೆಗೆ ನೆಟ್‌ವರ್ಕ್ ಆಪರೇಟರ್‌ಗಳು ಅಥವಾ ಇಂಟರ್‌ನೆಟ್ ಸೇವೆ ಪೂರೈಕೆದಾರ (ಐಎಸ್‌ಪಿ)ರು ತಯಾರಾಗದಿದ್ದರೆ ಅವರ ಬಳಕೆದಾರರು ಇಂಟರ್‌ನೆಟ್ ಸಂಪರ್ಕದಿಂದ ವಂಚಿತರಾಗಬಹುದು. ಆದರೆ, ಸೂಕ್ತ ‘ವ್ಯವಸ್ಥೆ ಸುರಕ್ಷಾ ವಿಸ್ತರಣೆ’ಗಳಿಗೆ ಚಾಲನೆ ನೀಡುವ ಮೂಲಕ ಇಂಟರ್‌ನೆಟ್ ವೈಫಲ್ಯವನ್ನು ತಪ್ಪಿಸಬಹುದು’’ ಎಂದು ಅದು ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News