ನ್ಯಾಯಾಧೀಶರು ತುರ್ತು ಸಂದರ್ಭ ಹೊರತುಪಡಿಸಿ ರಜೆ ಪಡೆಯುವಂತಿಲ್ಲ : ಸಿಜೆಐ ರಂಜನ್ ಗೊಗೊಯ್

Update: 2018-10-12 08:55 GMT

ಹೊಸದಿಲ್ಲಿ,ಅ.12 : ದೇಶದ ವಿವಿಧ ನ್ಯಾಯಾಲಯಗಳಲ್ಲಿ ಹೆಚ್ಚುತ್ತಿರುವ ಬಾಕಿ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿರುವ ಸುಪ್ರೀಂ ಕೋರ್ಟಿನ ನೂತನ ನ್ಯಾಯಮೂರ್ತಿ ರಂಜನ್ ಗೊಗೊಯ್  ಯಾವುದೇ ಹೈಕೋರ್ಟ್ ನ್ಯಾಯಾಧೀಶರು ಅಥವಾ ಅಧೀನ ನ್ಯಾಯಾಲಯದ ನ್ಯಾಯಾಧೀಶರುಗಳು  ತುರ್ತು ಸಂದರ್ಭ ಹೊರತು ಪಡಿಸಿ ಇತರ ಕೆಲಸದ ದಿನಗಳಲ್ಲಿ ರಜೆಯ ಮೇಲೆ ತೆರಳಬಾರದು  ಎಂದು ಹೇಳಿದ್ದಾರೆ.

ನ್ಯಾಯಾಧೀಶರುಗಳು ಕರ್ತವ್ಯದ ದಿನಗಳಂದು ಬೇರೆ ಸಭೆ, ಸಮ್ಮೇಳನ, ವಿಚಾರ ಸಂಕಿರಣಗಳಲ್ಲಿ  ಭಾಗವಹಿಸುವುದನ್ನೂ ನಿಲ್ಲಿಸಬೇಕೆಂದು ಮುಖ್ಯ ನ್ಯಾಯಮೂರ್ತಿ ಹೇಳಿದ್ದಾರೆ. ದೇಶದ ಸುಪ್ರೀಂ ಕೋರ್ಟ್, ಹೈಕೋರ್ಟುಗಳು ಹಾಗೂ ಅಧೀನ ನ್ಯಾಯಾಲಯಗಳಲ್ಲಿ 3 ಕೋಟಿಗೂ ಅಧಿಕ ಬಾಕಿ ಪ್ರಕರಣಗಳಿರುವುದರಿಂದ ಈ ನಿಟ್ಟಿನಲ್ಲಿನ ಒತ್ತಡವನ್ನು ಕಡಿಮೆಗೊಳಿಸಲು ಪರಿಹಾರೋಪಾಯಗಳನ್ನು ಸೂಚಿಸುವ ಬಗ್ಗೆ ತಾವು ಅಧಿಕಾರ ವಹಿಸಿದ ಕೂಡಲೇ ಮುಖ್ಯ ನ್ಯಾಯಮೂರ್ತಿ ಸುಳಿವನ್ನು ನೀಡಿದ್ದರು.  ನಂತರ ಒಂದು ವಾರದೊಳಗಾಗಿ ಎಲ್ಲಾ ಹೈಕೋರ್ಟಿನ ಹಿರಿಯ ನ್ಯಾಯಾಧೀಶರುಗಳೊಂದಿಗೆ ಅವರು ವೀಡಿಯೋ ಕಾನ್ಫರೆನ್ಸಿಂಗ್ ಮೂಲಕ ಮಾತುಕತೆ ನಡೆಸಿದ್ದರು.

ತಾವು ಸೂಚಿಸಿದ ಕ್ರಮಗಳನ್ನು ಪಾಲಿಸದ ನ್ಯಾಯಾಧೀಶರುಗಳಿಗೆ ವಹಿಸಲಾದ ಕೆಲಸಗಳನ್ನು ವಾಪಸ್ ಪಡೆಯಬೇಕೆಂದೂ ಅವರು ಸಲಹೆ ನೀಡಿದ್ದಾರಲ್ಲದೆ ಅಂತಹ ನ್ಯಾಯಾಧೀಶರುಗಳ ಬಗ್ಗೆ ಮಾಹಿತಿಯನ್ನು ತಮಗೆ ನೀಡುವಂತೆ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳಿಗೆ ಅವರು ತಾಕೀತು ಮಾಡಿದ್ದಾರೆ.

ನ್ಯಾಯಾಧೀಶರುಗಳು ನ್ಯಾಯಾಲಯಗಳ ಕೆಲಸದ ದಿನಗಳಲ್ಲಿ ಎಲ್‍ಟಿಸಿಗೆ ಅರ್ಜಿ ಸಲ್ಲಿಸುವಂತಿಲ್ಲ ಎಂದೂ ಮುಖ್ಯ ನ್ಯಾಯಮೂರ್ತಿಗಳು ಎಲ್ಲಾ ನ್ಯಾಯಾಲಯಗಳಿಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ.  ನ್ಯಾಯಾಧೀಶರು ತಮ್ಮ ಕುಟುಂಬಗಳ ಜತೆ ರಜೆ ಮೇಲೆ ತೆರಳಬೇಕಿದ್ದರೂ ಅದನ್ನು ಬಹಳ ಮುಂಚಿತವಾಗಿ ಯೋಜಿಸಿ ಸಹ ನ್ಯಾಯಾಧೀಶರುಗಳ ಸಹಕಾರ ಪಡೆದು ನಂತರ ರಜೆ ಪಡೆಯಬೇಕಾಗುತ್ತದೆ. ಪ್ರಸಕ್ತ ಸುಪ್ರೀಂ ಕೋರ್ಟ್ ನ್ಯಾಯಾಧೀಶರುಗಳಿಗೆ ವರ್ಷಕ್ಕೆ ಮೂರು ಎಲ್‍ಟಿಸಿ ಸೌಲಭ್ಯ ದೊರೆಯುತ್ತದೆ.

ನ್ಯಾಯಾಲಯಗಳಲ್ಲಿರುವ ಖಾಲಿ ಹುದ್ದೆಗಳನ್ನು ತುಂಬಲು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ ಅವರು ಅಧೀನ ನ್ಯಾಯಾಲಯಗಳು ಪ್ರಕರಣ ವಿಲೇವಾರಿ ಪ್ರಗತಿಯನ್ನು ಪ್ರತಿ ದಿನ ಪರಿಶೀಲಿಸಬೇಕೆಂದು ಹೇಳಿದ್ದಾರೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News