ಮಹೇಶ್ ರಾಜೀನಾಮೆ: ದಲಿತರಿಗೆ ನಿರಾಶೆ

Update: 2018-10-13 04:17 GMT

ಕಳೆದ ವಿಧಾನಸಭಾ ಚುನಾವಣೆಯ ಫಲಿತಾಂಶ ಹಲವು ಅನಿರೀಕ್ಷಿತ ಫಲಿತಾಂಶಗಳನ್ನು ನೀಡಿತ್ತು. ಸಿದ್ದರಾಮಯ್ಯ ವರ್ಚಸ್ಸು ಕೈ ಕೊಟ್ಟದ್ದು, ಬಿಜೆಪಿ ನಿರೀಕ್ಷೆಗೂ ಮೀರಿ ಸ್ಥಾನಗಳನ್ನು ತನ್ನದಾಗಿಸಿದ್ದು, ಅತಿ ಕಡಿಮೆ ಸ್ಥಾನಗಳನ್ನು ಪಡೆದ ಕುಮಾರಸ್ವಾಮಿ ಮುಖ್ಯಮಂತ್ರಿಯಾಗುವಂತಹ ಸನ್ನಿವೇಶ ನಿರ್ಮಾಣವಾದುದು ಅವುಗಳಲ್ಲಿ ಮುಖ್ಯವಾದುದು. ಇದೇ ಸಂದರ್ಭದಲ್ಲಿ ಜೆಡಿಎಸ್ ಜೊತೆಗೆ ಮೈತ್ರಿ ಮಾಡಿಕೊಂಡಿದ್ದ ಬಿಎಸ್ಪಿಯೂ ಒಂದು ಸ್ಥಾನವನ್ನು ತನ್ನದಾಗಿಸಿಕೊಂಡಿತು. ಕೊಳ್ಳೇಗಾಲದಿಂದ ದಲಿತ ಮುಖಂಡ, ಸಜ್ಜನ ನಾಯಕ ಎನ್. ಮಹೇಶ್ ಆಯ್ಕೆಯಾದರು. ಅಷ್ಟೇ ಅಲ್ಲ, ಮೈತ್ರಿ ಸರಕಾರದಲ್ಲಿ ಅವರು ಸಚಿವರೂ ಆದರು. ಈವರೆಗೆ ರಾಜ್ಯದಲ್ಲಿ ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬಂತಿದ್ದ ಬಿಎಸ್ಪಿಯ ಪಾಲಿಗೆ ಇದು ದೊಡ್ಡ ಸಾಧನೆಯೇ ಆಗಿತ್ತು.

ಮಹೇಶ್ ಸಚಿವರಾಗುತ್ತಿದ್ದಂತೆಯೇ ರಾಜ್ಯ ಬಿಎಸ್ಪಿಯೊಳಗೂ ಸಣ್ಣದೊಂದು ಕಲರವ ಶುರುವಾಗಿತ್ತು. ಅವರ ಅಧಿಕಾರ, ಸ್ಥಾನವನ್ನು ಮುಂದಿಟ್ಟುಕೊಂಡು ಬಿಎಸ್ಪಿ ರಾಜ್ಯದಲ್ಲಿ ಬೇರಿಳಿಸುವ ಪ್ರಯತ್ನವನ್ನು ಮಾಡುವ ಎಲ್ಲ ಸಾಧ್ಯತೆಗಳಿದ್ದವು. ಮಹೇಶ್ ಅವರಿಗೆ ಸಿಕ್ಕಿರುವುದು ಅಧಿಕಾರ ಎನ್ನುವುದಕ್ಕಿಂತ, ಬಿಎಸ್ಪಿಯನ್ನು ಬೆಳೆಸುವುದಕ್ಕೆ ಅವಕಾಶ ಎಂದು ತಿಳಿದುಕೊಂಡು ಬಿಎಸ್ಪಿ ಕೆಲಸ ಮಾಡಬೇಕಾಗಿತ್ತು. ಆದರೆ ಬಿಎಸ್ಪಿ ಕಾರ್ಯಕರ್ತರ ಎಲ್ಲ ಲೆಕ್ಕಾಚಾರಗಳು ಬುಡಮೇಲಾಗುವಂತೆ, ಮಹೇಶ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಮಧ್ಯಪ್ರದೇಶ, ಛತ್ತೀಸ್‌ಗಡ ಚುನಾವಣಾ ಮೈತ್ರಿಯ ಹಿನ್ನೆಲೆಯಲ್ಲಿ, ಮಾಯಾವತಿಯವರ ನಿರ್ದೇಶನದಂತೆ ರಾಜ್ಯದಲ್ಲಿ ಸಚಿವ ಸ್ಥಾನಕ್ಕೆ ಮಹೇಶ್ ರಾಜೀನಾಮೆ ನೀಡಿದ್ದಾರೆ ಎನ್ನಲಾಗಿದೆ. ಹಾಗೆ ನೋಡಿದರೆ, ರಾಜ್ಯದಲ್ಲಿ ಬಿಎಸ್ಪಿಯ ದಲಿತರ ಮತದಾರರು ಎಷ್ಟಿದ್ದಾರೆ ಎಂದು ಲೆಕ್ಕ ಹಾಕಿದರೆ ನಿರಾಶೆಯಾಗುತ್ತದೆ. ಬಿಎಸ್ಪಿ ಉಳಿದ ಸಮುದಾಯದ ಮತಗಳನ್ನು ಸೆಳೆಯುವುದು ಪಕ್ಕಕ್ಕಿರಲಿ, ಕೇವಲ ದಲಿತರ ಮತಗಳಲ್ಲಿ ಶೇ. 50ರಷ್ಟನ್ನಾದರೂ ತನ್ನದಾಗಿಸಿಕೊಂಡಿದ್ದಿದ್ದರೆ ಅದರ ಸ್ಥಿತಿ ಇಷ್ಟು ಚಿಂತಾಜನಕವಾಗಬೇಕಾಗಿರಲಿಲ್ಲ.

ಜೆಡಿಎಸ್ ಜೊತೆ ಮೈತ್ರಿ ಇಲ್ಲದೇ ಇದ್ದಿದ್ದರೆ, ಕೊಳ್ಳೇಗಾಲದಲ್ಲಿ ಮಹೇಶ್ ಬಿಎಸ್ಪಿ ಹೆಸರಲ್ಲಿ ಗೆಲ್ಲುವುದು ಸಾಧ್ಯವಿರುತ್ತಿರಲಿಲ್ಲ. 20 ಕ್ಷೇತ್ರಗಳಲ್ಲಿ ಬಿಎಸ್ಪಿ ಸ್ಪರ್ಧಿಸಿದ್ದರೂ ಅದು ಗೆದ್ದದ್ದು ಬರೇ ಒಂದು ಕ್ಷೇತ್ರವನ್ನು. ಕೊಳ್ಳೇಗಾಲದಲ್ಲಿ ಮಹೇಶ್ ಗೆಲುವಲ್ಲಿ ಅವರ ವೈಯಕ್ತಿಕ ವರ್ಚಸ್ಸು ಕೂಡ ಕೆಲಸ ಮಾಡಿದೆ. ಮಾಯಾವತಿಯವರ ವರ್ಚಸ್ಸು ರಾಜ್ಯದಲ್ಲಿ ಕೆಲಸ ಮಾಡಿದ್ದಿದ್ದರೆ ಉಳಿದ ಅಭ್ಯರ್ಥಿಗಳು ಪಡೆದಿರುವ ಮತಗಳ ಮೇಲಾದರೂ ಅದು ಪರಿಣಾಮ ಬೀರಬೇಕಾಗಿತ್ತು. ಜೆಡಿಎಸ್ ಜೊತೆಗಿನ ಮೈತ್ರಿಯಿಂದ ರಾಜ್ಯದಲ್ಲಿ ಬಿಎಸ್ಪಿಗೆ ಲಾಭವಾಯಿತು. ಜೆಡಿಎಸ್ ತನ್ನ ಸ್ಥಾನಗಳಲ್ಲಿ ವಿಶೇಷ ಹೆಚ್ಚುವರಿಯನ್ನೇನೂ ಮಾಡಿಕೊಳ್ಳಲಿಲ್ಲ. ಉಳಿದ ಉತ್ತರ ಪ್ರದೇಶ, ಮಧ್ಯಪ್ರದೇಶದಂತಹ ರಾಜ್ಯಗಳಲ್ಲಿರುವ ಬಿಎಸ್ಪಿಗೂ ಕರ್ನಾಟಕದಲ್ಲಿರುವ ಬಿಎಸ್ಪಿಗೂ ದೊಡ್ಡ ಅಂತರವಿದೆ. ತಳಮಟ್ಟದಲ್ಲಿ ದಲಿತ ಚಿಂತನೆ ಇನ್ನೂ ತಲುಪಿಲ್ಲ. ಅಳಿದುಳಿದ ದಲಿತ ನಾಯಕರೆಂದು ಕರೆಸಿಕೊಂಡವರು ತಮ್ಮ ತಮ್ಮ ಸ್ವಾರ್ಥ ರಾಜಕಾರಣದಲ್ಲಿ ಮುಳುಗಿ ಹೋಗಿದ್ದಾರೆ. ರಾಜ್ಯದಲ್ಲಿ ಬಿಎಸ್ಪಿ ಇನ್ನೂ ರಾಜಕೀಯ ಶಕ್ತಿಯಾಗಿ ಬೇರನ್ನು ಇಳಿಸಿಕೊಂಡೇ ಇಲ್ಲ. ಅಷ್ಟರಲ್ಲೇ, ಮಾಯಾವತಿ ಸಸಿಯ ಬುಡಕ್ಕೇ ಕೈ ಹಾಕಿದ್ದಾರೆ. ಈಗಾಗಲೇ ತೆರೆದುಕೊಂಡ ಸಣ್ಣದೊಂದು ಕಿಂಡಿಯನ್ನು ಸ್ವತಃ ಬಿಎಸ್ಪಿ ನಾಯಕಿಯೇ ಮುಚ್ಚಿದ್ದಾರೆ.

ಮಹೇಶ್ ರಾಜೀನಾಮೆಯಿಂದ ಬಿಎಸ್ಪಿ ಪಡೆದುಕೊಳ್ಳುವುದು ಏನೂ ಇಲ್ಲ. ಆದರೆ ಅವರ ರಾಜೀನಾಮೆ ಈ ನೆಲದ ಶೋಷಿತ ಸಮುದಾಯಗಳಿಗೆ ಮಾತ್ರ ತೀವ್ರ ನೋವು ಕೊಟ್ಟಿದೆ ಮತ್ತು ಬಿಎಸ್ಪಿಯ ಮೇಲೆ ನಿರಾಶೆಯನ್ನುಂಟು ಮಾಡಿದೆ. ಇದು ಮುಂದಿನ ದಿನಗಳಲ್ಲಿ ಮಾಯಾವತಿಯ ಕುರಿತಂತೆ ರಾಜ್ಯ ಬಿಎಸ್ಪಿ ಕಾರ್ಯಕರ್ತರ ನಂಬಿಕೆಗಳ ಮೇಲೆ ಪರಿಣಾಮ ಬೀರುವ ಸಾಧ್ಯತೆಗಳಿವೆ. ಮಹೇಶ್‌ಗೆ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣದಂತಹ ಮಹತ್ವದ ಖಾತೆ ದೊರಕಿತ್ತು. ಸರಕಾರಿ ಶಾಲೆಗಳು ಒಂದೊಂದಾಗಿ ಮುಚ್ಚುತ್ತಿರುವ ದಿನಗಳಲ್ಲಿ ಅದರ ನೇರ ಸಂತ್ರಸ್ತರು ನಾಡಿನ ದಲಿತ ಮಕ್ಕಳೇ ಆಗಿದ್ದಾರೆ. ಇಂದು ಸರಕಾರಿ ಶಾಲೆಗಳು ಮುಚ್ಚುವುದಕ್ಕೆ ಕಾರಣವೇನು? ಅದನ್ನು ಮೇಲೆತ್ತಲು ಮಾಡಬಹುದಾದ ಕೆಲಸ ಕಾರ್ಯಗಳೇನು? ಆ ಮೂಲಕ ದಲಿತರೂ ಸೇರಿದಂತೆ ಶೋಷಿತ ಸಮುದಾಯಗಳಿಗೆ ಅತ್ಯುತ್ತಮ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣವನ್ನು ಹೇಗೆ ದೊರಕಿಸಬಹುದು? ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳು ಇಂದು ಒಂದೊಂದಾಗಿ ಬಲಪಂಥೀಯ ಚಿಂತನೆಗಳಿಗೆ ಬಲಿಯಾಗುತ್ತಿರುವಾಗ, ಅಲ್ಲಿ ಮತ್ತೆ ವೈಚಾರಿಕ ಮತ್ತು ವೈಜ್ಞಾನಿಕ ಮನೋಭಾವನೆಗಳನ್ನು ಹೇಗೆ ತುಂಬಬಹುದು ಮೊದಲಾದ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳಲು ಮಹೇಶ್ ತನ್ನ ಸ್ಥಾನವನ್ನು ಸದುಪಯೋಗ ಪಡಿಸಿಕೊಳ್ಳಬಹುದಿತ್ತು. ಬಿಎಸ್ಪಿಗೆ ಇದು ಎಷ್ಟರ ಮಟ್ಟಿಗೆ ಸಹಾಯವಾಗುತ್ತದೋ ಇಲ್ಲವೋ, ಆದರೆ ನಾಡಿನ ಎಲ್ಲ ಶೋಷಿತ ಸಮುದಾಯಗಳಿಗೆ ಇದರಿಂದ ಲಾಭವಿದೆ. ಜೊತೆ ಜೊತೆಗೇ ಬಿಎಸ್ಪಿಯನ್ನು ತಳಮಟ್ಟದಲ್ಲಿ ಬೆಳೆಸುವುದಕ್ಕೆ ಮಹೇಶ್ ಅವರಿಗೆ ಅವರ ಕೈಯಲ್ಲಿರುವ ಅಧಿಕಾರ ಸಹಾಯ ಮಾಡುತ್ತಿತ್ತು. ಮಹೇಶ್ ರಾಜೀನಾಮೆಯಿಂದ ಬಿಎಸ್ಪಿಗೆ ರಾಜ್ಯದಲ್ಲಿ ಎಷ್ಟರಮಟ್ಟಿಗೆ ಲಾಭವಾಗುತ್ತದೆ ಎನ್ನುವುದನ್ನು ಇದೀಗ ಸ್ವತಃ ಮಾಯಾವತಿಯವರೇ ತಮ್ಮ ಕಾರ್ಯಕರ್ತರಿಗೆ ವಿವರಿಸಬೇಕಾಗಿದೆ.

ಯಾವುದೇ ಪಕ್ಷದೊಂದಿಗೆ ಕೈ ಜೋಡಿಸುವುದಿಲ್ಲ ಎನ್ನುವ ಮಾಯಾವತಿಯ ನಿರ್ಧಾರ ಪರೋಕ್ಷವಾಗಿ ಬಿಜೆಪಿಯ ಜೊತೆಗೆ ಕೈ ಜೋಡಿಸುವುದೇ ಆಗಿರುತ್ತದೆ. ‘ಇತರ ಪಕ್ಷಗಳ ಜೊತೆಗೆ ಸ್ಥಾನಗಳಿಗಾಗಿ ಬೇಡುವುದಕ್ಕಿಂತ ಸ್ವತಂತ್ರವಾಗಿ ಪಕ್ಷ ಸ್ಪರ್ಧಿಸುವುದೇ ಮೇಲು’ ಎನ್ನುವ ಅವರ ಮಾತನ್ನು ಗೌರವಿಸೋಣ. ಬಿಎಸ್ಪಿಗೆ ದೇಶದ ಕೆಲವು ರಾಜ್ಯಗಳಲ್ಲಿ ತನ್ನದೇ ಪ್ರಾಬಲ್ಯವಿದೆ. ಅದು ಇತರ ಪಕ್ಷಗಳ ಜೊತೆಗೆ ಭಿಕ್ಷೆ ಬೇಡಬೇಕಾಗಿಲ್ಲ. ಆದರೆ ರಾಜ್ಯದಲ್ಲಿ ಒಂದು ಸ್ಥಾನವನ್ನಷ್ಟೇ ಬಿಎಸ್ಪಿಯು ಜೆಡಿಎಸ್ ಮೈತ್ರಿಯಿಂದ ಗೆದ್ದಿದೆ. ಮಹೇಶ್ ಸರಕಾರದ ಜೊತೆಗೆ ಗುರುತಿಸಿಕೊಂಡಿದ್ದಾರೆ ಎನ್ನುವ ಕಾರಣಕ್ಕಾಗಿ ಉಪಚುನಾವಣೆಯಲ್ಲಿ ರಾಜ್ಯದ ದಲಿತರು ಕಾಂಗ್ರೆಸ್ ಅಥವಾ ಜೆಡಿಎಸ್‌ನ್ನು ಬೆಂಬಲಿಸಬಹುದು ಎನ್ನುವ ಮಾಯಾವತಿಯ ರಾಜಕೀಯ ಲೆಕ್ಕಾಚಾರವೇ ಹಾಸ್ಯಾಸ್ಪದವಾದುದು.

ರಾಜ್ಯದ ರಾಜಕೀಯ ಸನ್ನಿವೇಶದ ಕುರಿತಂತೆ ಮಾಯಾವತಿ ಅದೆಷ್ಟು ಅನಕ್ಷರಸ್ಥರು ಎನ್ನುವುದನ್ನು ಇದು ಹೇಳುತ್ತದೆ. ಮಹೇಶ್ ರಾಜೀನಾಮೆ ಕೊಟ್ಟ ಕಾರಣಕ್ಕಾಗಿ ದಲಿತರು ಮೈತ್ರಿ ಸರಕಾರದ ಪಕ್ಷಗಳನ್ನು ಬೆಂಬಲಿಸಬಾರದು ಎನ್ನುವುದು ಮಾಯಾವತಿಯವರ ಮನಸ್ಥಿತಿಯಾದರೆ, ಅವರು ಪರೋಕ್ಷವಾಗಿ ಯಾರನ್ನು ಬೆಂಬಲಿಸಬೇಕು ಎಂದು ತಮ್ಮ ಕಾರ್ಯಕರ್ತರಿಗೆ ಸೂಚನೆ ನೀಡುತ್ತಿದ್ದಾರೆ? ಆ ಕೋರಿಕೆಯನ್ನು ಈ ನಾಡಿನ ದಲಿತ ಮತದಾರರಾದರೂ ಗಂಭೀರವಾಗಿ ತೆಗೆದುಕೊಳ್ಳುತ್ತಾರೆಯೇ? ಕೊಳ್ಳೇಗಾಲಕ್ಕೆ ಸೀಮಿತರಾಗಿರುವ ಮಹೇಶ್ ರಾಜೀನಾಮೆ, ರಾಜ್ಯದ ಉಪಚುನಾವಣೆಯಲ್ಲಿ ಯಾವ ಪರಿಣಾಮವೂ ಬೀರುವುದಿಲ್ಲ ಎಂದ ಮೇಲೆ, ಮಹೇಶ್ ರಾಜೀನಾಮೆಯ ನಿಜವಾದ ಉದ್ದೇಶವೇನು? ಇದರಿಂದಾಗಿ ನಷ್ಟವಾದುದು ಈ ನಾಡಿನ ಶೋಷಿತ ಸಮುದಾಯಗಳಿಗೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಇನ್ನೂ ಚಿಗುರಿಯೇ ಇಲ್ಲದ ಪಕ್ಷವೊಂದನ್ನು ‘ಹೈಕಮಾಂಡ್’ ಈ ಮಟ್ಟಕ್ಕೆ ಕಾಡುತ್ತದೆಯಾದರೆ, ಉಳಿದ ರಾಷ್ಟ್ರೀಯ ಪಕ್ಷಗಳ ಬಗ್ಗೆ ಹೇಳುವುದಕ್ಕೇನಿದೆ?

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News