ಜಿಡಿಪಿ ಪ್ರಗತಿ: ಮುರಳಿ ಮನೋಹರ್ ಜೋಷಿ ನೇತೃತ್ವದ ಸಮಿತಿ ವರದಿಗೆ ತಡೆ ಹೇರಲು ಬಿಜೆಪಿ ಸಂಸದರ ಯತ್ನ

Update: 2018-10-13 06:50 GMT

ಹೊಸದಿಲ್ಲಿ, ಅ.13: ಉದ್ಯೋಗಾವಕಾಶಗಳ ಸೃಷ್ಟಿಗೆ ಸಂಬಂಧಿಸಿದಂತೆ ಕಾರ್ಮಿಕ ಸಚಿವಾಲಯದ ಅಂಕಿಅಂಶಗಳು ಮುಜುಗರಕಾರಿ ಪ್ರಶ್ನೆಗಳನ್ನು ಎತ್ತಬಹುದೆಂದು ಜಿಡಿಪಿಗೆ ಸಂಬಂಧಿಸಿದಂತೆ ಹಿರಿಯ ನಾಯಕ ಮುರಳಿ ಮನೋಹರ್ ಜೋಶಿ ನೇತೃತ್ವದ ಅಂದಾಜು ಸಮಿತಿಯ ವರದಿಯನ್ನು ಮೋದಿ ಸರಕಾರ ತಡೆಯುತ್ತಿದೆ ಎನ್ನುವ ಆರೋಪಗಳು ಕೇಳಿಬಂದಿವೆ. ಈ ಸಮಿತಿಯ ಮಾಹಿತಿ  ಸರಕಾರದ ‘ಜುಮ್ಲಾ’ಗಳನ್ನು ಬಹಿರಂಗಗೊಳಿಸಬಹುದೆಂಬ ಭಯದಿಂದ ಈ ಕ್ರಮಕ್ಕೆ  ಸರಕಾರ ಮುಂದಾಗಿದೆಯೆಂದು ಹೇಳಲಾಗುತ್ತಿದೆ ಎಂದು thewire.in ವರದಿ ತಿಳಿಸಿದೆ.

ಸಮಿತಿಯ ಇಬ್ಬರು ಸದಸ್ಯರಾದ  ಬಿಜೆಪಿ ಸಂಸದರಾದ ನಿಷಿಕಾಂತ್ ದುಬೆ ಹಾಗೂ ರಮೇಶ್ ಬಿಧೂರಿ ಅವರು ಸಮಿತಿಯ ವರದಿಗೆ ತಮ್ಮ ಅಸಮ್ಮತಿಯನ್ನು ಸೂಚಿಸಿದ್ದಾರೆ. ವರದಿಯನ್ನು ಅನುಮೋದಿಸಲು ಗುರುವಾರ ಜೋಷಿ ನೇತೃತ್ವದಲ್ಲಿ ಸಭೆ ನಡೆದಾಗ ಎರಡೂ ಸಂಸದರು ಪಕ್ಷದ ನಿರ್ದೇಶನದಂತೆ ತಮ್ಮ ಆಕ್ಷೇಪಣೆಗಳನ್ನು ಸೇರ್ಪಡೆಗೊಳಿಸಬೇಕು ಎಂದು  ಪಟ್ಟು ಹಿಡಿದಿದ್ದರೆನ್ನಲಾಗಿದೆ. 2ಜಿ ಹಗರಣವನ್ನು ಬಯಲುಗೊಳಿಸಿದ ಸಾರ್ವಜನಿಕ ಲೆಕ್ಕ ಸಮಿತಿಯ ಅಧ್ಯಕ್ಷರೂ ಆಗಿದ್ದ ಜೋಷಿ ಇದಕ್ಕೆ ನಿರಾಕರಿಸಿ  ಅಂದಾಜು ಸಮಿತಿ ಇಂತಹ ಆಕ್ಷೇಪಣೆಗಳನ್ನು ಸೇರಿಸುವ ಸಂಪ್ರದಾಯವಿಲ್ಲ ಎಂದು ಹೇಳಿದ್ದಾರೆ.

ಸಭೆಯ ಕೊನೆಯಲ್ಲಿ ಜೋಶಿ ಅವರು ಇಬ್ಬರು ಸಂಸದರಿಗೂ ತಮ್ಮ ಆಕ್ಷೇಪಣೆಯನ್ನು ಲಿಖಿತವಾಗಿ ಒಂದು ವಾರದೊಳಗೆ ಸಲ್ಲಿಸುವಂತೆ ಹಾಗೂ ವರದಿಯನ್ನು ನಂತರ ಅಂಗೀಕರಿಸುವುದಾಗಿ ಹೇಳಿದ್ದಾರೆನ್ನಲಾಗಿದೆ.

ಸಮಿತಿಯ ಸಭೆ ನಡೆಯುತ್ತಿರುವಾಗ ಸಮಿತಿಗೆ ಸಂಬಂಧಪಡದ ಬಿಜೆಪಿ ನಾಯಕ ವಿಜಯ್  ಗೋಯೆಲ್ ಸಭಾಂಗಣದ ಹೊರಗಿನಿಂದಲೇ ಸಮಿತಿ ಸದಸ್ಯರ ಜತೆ ಸಂವಹನ ನಡೆಸುತ್ತಿರುವುದು ಕಂಡು ಬಂದಿದೆ. ಗೋಯೆಲ್ ಅವರನ್ನು ಬಿಜೆಪಿ ಅಧ್ಯಕ್ಷ ಅಮಿತ್ ಶಾ ಕಳುಹಿಸಿದ್ದರೆಂದು ಹೇಳಲಾಗಿದೆ.

ಮೋದಿ ಸರಕಾರವು ಕಾರ್ಮಿಕ ಸಚಿವಾಲಯ ನೀಡಿದ ಉದ್ಯೋಗಕ್ಕೆ ಸಂಬಂಧಿಸಿದ ಅಂಕಿ ಅಂಶಗಳನ್ನು ನಿರ್ಲಕ್ಷ್ಯಿಸಿ  ಕಾರ್ಮಿಕರ ಕ್ಷೇಮ ನಿಧಿ (ಇಪಿಎಫ್‍ಒ) ಅಂಕಿಅಂಶಗಳನ್ನು ಅವಲಂಬಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News