‘ಸಾರ್ವಜನಿಕ ಸ್ವಾಮ್ಯದ ಸಂಸ್ಥೆಗಳಲ್ಲಿ ಮೀಸಲಾತಿ ನಾಶ’

Update: 2018-10-13 14:48 GMT

ಬೆಂಗಳೂರು, ಅ.13: ನಾಲ್ವಡಿ ಕೃಷ್ಣರಾಜ ಒಡೆಯರ್ ಎಚ್‌ಎಎಲ್ ಸಂಸ್ಥೆಗೆ 7 ಎಕರೆ ಜಮೀನು ನೀಡಿದ್ದರು. 1940ರಲ್ಲಿ ಈ ಸಂಸ್ಥೆ ಆರಂಭಿಸಲಾಯಿತು. ವೆಲ್‌ಫೇರ್ ಸ್ಟೇಟ್ ಈಗ ಯಾವ ಸ್ಟೇಟ್ ಆಗಿದೆ ನೋಡಿ. ಎಚ್‌ಎಎಲ್‌ನ ಏರ್‌ಕ್ರಾಫ್ಟ್ ವಿಭಾಗದ ಉದ್ಯೋಗಿಗಳು ಕೆಲಸವಿಲ್ಲದೆ ಕೂತಿದ್ದಾರೆ ಎಂದು ಎಚ್‌ಎಎಲ್ ನೌಕರರ ಸಂಘದ ಮಾಜಿ ಅಧ್ಯಕ್ಷ ಶಿವಲಿಂಗಯ್ಯ ಹೇಳಿದರು.

ಶನಿವಾರ ನಗರದ ಎಚ್‌ಎಎಲ್ ಕೇಂದ್ರ ಕಚೇರಿಯ ಎದುರು ಇರುವ ಮಿನ್ಕ್ಸ್ ಸ್ಕ್ವೇರ್(ಕಬ್ಬನ್‌ಪಾರ್ಕ್)ನಲ್ಲಿ ಎಚ್‌ಎಎಲ್ ನಿವೃತ್ತ ನೌಕರರೊಂದಿಗೆ ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ ಹಮ್ಮಿಕೊಂಡಿದ್ದ ಸಂವಾದದಲ್ಲಿ ಅವರು ಮಾತನಾಡಿದರು.

ಕೇಂದ್ರ ಸರಕಾರವು 2015ರಲ್ಲಿ ಹೆಲಿಕಾಪ್ಟರ್‌ಗಳ ತಯಾರಿಕೆಗೆ ಸಂಬಂಧಿಸಿದಂತೆ ಎಚ್‌ಎಎಲ್ ಜೊತೆ ಒಪ್ಪಂದ ಮಾಡಿಕೊಂಡಿತ್ತು. ಆದರೆ, ಈವರೆಗೆ ಯಾವುದೆ ಬೆಳವಣಿಗೆಗಳು ಆಗಿಲ್ಲ. ಎಚ್‌ಎಎಲ್ ಸಂಸ್ಥೆಯ 6 ಸಾವಿರ ಕೋಟಿ ರೂ.ಗಳನ್ನು ಕೇಂದ್ರ ಸರಕಾರ ಹಿಂಪಡೆದಿದೆ ಎಂದು ಅವರು ದೂರಿದರು.

ಸುಮಾರು 10 ಸಾವಿರ ಮಂದಿ ಎಸ್ಸಿ-ಎಸ್ಟಿ ಸಮುದಾಯದವರು ಎಚ್‌ಎಎಲ್‌ನಲ್ಲಿ ಕೆಲಸ ಮಾಡುತ್ತಿದ್ದಾರೆ. ಶೇ.80ರಷ್ಟು ಸಿಬ್ಬಂದಿ ಮೀಸಲಾತಿ ವರ್ಗದವರು. ಆದರೆ, ಕಳೆದ ಐದು ವರ್ಷಗಳಿಂದ ಎಚ್‌ಎಎಲ್‌ನಲ್ಲಿ ಖಾಯಂ ಕೆಲಸಗಳು ಸಿಗುತ್ತಿಲ್ಲ. ಎಲ್ಲವೂ ಗುತ್ತಿಗೆ ಆಧಾರದ ನೇಮಕಾತಿಗಳು ನಡೆಯುತ್ತಿವೆ. ಇದರಿಂದಾಗಿ, ಮೀಸಲಾತಿ ವ್ಯವಸ್ಥೆ ನಾಶವಾಗಿದೆ ಎಂದು ಅವರು ಹೇಳಿದರು.

70 ವರ್ಷಗಳ ಅನುಭವವಿರುವ ಎಚ್‌ಎಎಲ್‌ಗೆ ನೀಡಿದ್ದ ಗುತ್ತಿಗೆಯನ್ನು ಹಿಂಪಡೆದು ಖಾಸಗಿ ವಲಯದ ಕೇವಲ 12 ದಿನಗಳ ಅನುಭವವಿರುವ ರಿಲಯನ್ಸ್ ಕಂಪೆನಿಗೆ ನೀಡಿರುವುದು ಸರಿಯಲ್ಲ. ದೇಶ ಕಂಡಂತಹ ಮೂರು ಯುದ್ಧಗಳಲ್ಲಿ ಭಾರತ ಗೆಲ್ಲಲು ಎಚ್‌ಎಎಲ್‌ನ ಪೂರ್ವ ತಯಾರಿ ಹಾಗೂ ಕೊಡುಗೆಗಳು ಸಾಕಷ್ಟಿವೆ. ರಫೆಲ್ ಯುದ್ಧ ವಿಮಾನ ತಯಾರಿಸುವ ಸಾಮರ್ಥ್ಯವೂ ಎಚ್‌ಎಎಲ್‌ಗೆ ಇದೆ ಎಂದು ಎಚ್‌ಎಎಲ್ ಸಂಸ್ಥೆಯ ನಿವೃತ್ತ ನೌಕರ ಸಿರಾಜುದ್ದೀನ್ ಹೇಳಿದರು.

ಸಂಸ್ಥೆಯ ಪರವಾಗಿ ಮಾತನಾಡಲು ಮುಂದಾಗಿರುವ ಸಿಬ್ಬಂದಿ ಮತ್ತು ಅಧಿಕಾರಿಗಳನ್ನು ರಾಹುಲ್‌ಗಾಂಧಿಯವರ ಕಾರ್ಯಕ್ರಮದಲ್ಲಿ ಭಾಗವಹಿಸದಂತೆ ನೋಟಿಸ್ ಜಾರಿ ಮಾಡಲಾಗಿದೆ. ಇದು ನಾಚಿಕೆಗೇಡಿನ ಸಂಗತಿ. ಇಲ್ಲದಿದ್ದರೆ, ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಸಿಬ್ಬಂದಿ ಮತ್ತು ಅಧಿಕಾರಿಗಳು ಈ ಸಂವಾದದಲ್ಲಿ ಭಾಗವಹಿಸುತ್ತಿದ್ದರು ಎಂದು ಅವರು ಹೇಳಿದರು.

ನಾವು ಎಚ್‌ಎಎಲ್ ಆಡಳಿತ ಮಂಡಳಿಯ ವಿರುದ್ಧವಿಲ್ಲ, ಕೇಂದ್ರ ಸರಕಾರದ ವಿರುದ್ಧವಿದ್ದೇವೆ. ತಂತ್ರಜ್ಞಾನ ಅಭಿವೃದ್ಧಿ, ತಂತ್ರಜ್ಞಾನ ವಿನಿಮಯಕ್ಕೂ ಕಳೆದ ಸರಕಾರದ ಅವಧಿಯಲ್ಲಿ ಅವಕಾಶ ಕಲ್ಪಿಸಲಾಗಿತ್ತು. ಬೆಂಗಳೂರು ಭಾರತದ ಹಣಕಾಸು, ರಾಜಕೀಯದ ರಾಜಧಾನಿಯಾಗಿದೆ. ಜೊತೆಗೆ ಸಾರ್ವಜನಿಕ ವಲಯದ ಸಂಸ್ಥೆಗಳ ರಾಜಧಾನಿಯೂ ಬೆಂಗಳೂರು ಆಗಿದೆ. ಇತ್ತೀಚೆಗೆ ಎಚ್‌ಎಎಲ್‌ಗೆ ಸಿಗುತ್ತಿರುವ ಗುತ್ತಿಗೆಗಳು ಕಡಿಮೆಯಾಗುತ್ತಿವೆ ಎಂದು ನಿವೃತ್ತ ನೌಕರ ಮಹದೇವನ್ ತಿಳಿಸಿದರು.

ಕೇಂದ್ರ ಸರಕಾರ ಇತ್ತೀಚೆಗೆ ರಕ್ಷಣಾ ಇಲಾಖೆಯ ಡಿಆರ್‌ಡಿಒ ಅನ್ನು ಖಾಸಗಿಯವರಿಗೆ ಒಪ್ಪಿಸಿ ಬಿಟ್ಟಿದೆ. ರಕ್ಷಣಾ ಇಲಾಖೆಯ ಬಗ್ಗೆ ಮಾಹಿತಿ ಇಲ್ಲದವರು ಎಚ್‌ಎಎಲ್ ಬಗ್ಗೆ ಮಾತನಾಡುತ್ತಿದ್ದಾರೆ. ಎಚ್‌ಎಎಲ್‌ಗೆ ಯುದ್ಧ ವಿಮಾನ ತಯಾರಿಸುವ ಸಾಮರ್ಥ್ಯ ಇಲ್ಲ ಎನ್ನುವವರು ನನ್ನ ಜೊತೆ ಬಹಿರಂಗ ಚರ್ಚೆಗೆ ಬರಲಿ ಎಂದು ಅವರು ಸವಾಲು ಹಾಕಿದರು.

ಎಚ್‌ಎಎಲ್‌ಗೆ ನೀಡಿದ್ದ ಗುತ್ತಿಗೆಯನ್ನು ಕೇಂದ್ರ ಸರಕಾರ ರದ್ದುಪಡಿಸಿದ್ದರಿಂದ 32 ಸಾವಿರ ಸಿಬ್ಬಂದಿಗಳ ನಿರೀಕ್ಷೆ ಹುಸಿಯಾಗಿದೆ. ನಾವು ಹೊಸ ತಂತ್ರಜ್ಞಾನವನ್ನು ತಿಳಿಯಲು ಬಯಸುತ್ತೇವೆ. ದೇಶದ ಸೇನೆ, ವಾಯುಪಡೆಗಳಿಗೆ ಎಚ್‌ಎಎಲ್ ಬೆನ್ನೆಲುಬಾಗಿ ನಿಂತಿದೆ. ಆದರೆ, ಖಾಸಗಿ ಸಂಸ್ಥೆಗಳಿಗೆ ಬೆಂಬಲ ನೀಡುವ ಮೂಲಕ ಸಾರ್ವಜನಿಕ ಸ್ವಾಮ್ಯದ ಸಂಸ್ಥೆಗಳು ಅವನತಿಯತ್ತ ಸಾಗುವಂತೆ ಮಾಡಲಾಗುತ್ತಿದೆ ಎಂದು ವಾಯು ಸೇನೆಯ ನಿವೃತ್ತ ಇಂಜಿನಿಯರ್ ಬಾಬು ಟಿ.ರಾಘವ್ ಆತಂಕ ವ್ಯಕ್ತಪಡಿಸಿದರು.

ಸಿಐಟಿಯುನ ಮುಖಂಡ ಉಮೇಶ್ ಮಾತನಾಡಿ, ಎಚ್‌ಎಎಲ್ ಸಂಸ್ಥೆಯು ನಮ್ಮ ರಾಜ್ಯ ಹಾಗೂ ಬೆಂಗಳೂರಿನ ಹೆಮ್ಮೆ. ಎಚ್‌ಎಎಲ್, ಬಿಇಎಲ್, ಬಿಎಚ್‌ಇಎಲ್ ಕರ್ನಾಟದ ಹೆಗ್ಗುರುತಾಗಿವೆ. ಆದರೆ, ಕೇಂದ್ರ ಸರಕಾರವು ಉದ್ದೇಶಪೂರ್ವಕವಾಗಿ ಸಾರ್ವಜನಿಕ ಸ್ವಾಮ್ಯದ ಸಂಸ್ಥೆಗಳನ್ನು ನಾಶಗೊಳಿಸಲಾಗುತ್ತಿದೆ. ಇದಕ್ಕೆ ಅವಕಾಶ ಕಲ್ಪಿಸಬಾರದು ಎಂದರು.

ಜನವರಿ 8 ಹಾಗೂ 9ರಂದು ದೇಶಾದ್ಯಂತ 48 ಗಂಟೆಗಳ ಹೋರಾಟ ಮಾಡುತ್ತೇವೆ. ದೇಶದ ಭದ್ರತೆಯ ವಿಚಾರದಲ್ಲ ಚೆಲ್ಲಾಟವಾಡಲು ನಾವು ಯಾರಿಗೂ ಅವಕಾಶ ನೀಡುವುದಿಲ್ಲ. ಸಾರ್ವಜನಿಕ ವಲಯದ ಸಂಸ್ಥೆಗಳು ಆಧುನಿಕ ಭಾರತದ ದೇವಾಲಯಗಳು, ಅವುಗಳ ರಕ್ಷಣೆಗೆ ನಾವೆಲ್ಲ ನಿಲ್ಲಬೇಕಿದೆ. ನಮ್ಮ ಹೋರಾಟಕ್ಕೆ ನೀವು ಬೆಂಬಲ ನೀಡಿ ಎಂದು ರಾಹುಲ್‌ ಗಾಂಧಿಗೆ ಅವರು ಆಹ್ವಾನ ನೀಡಿದರು.

ಎಚ್‌ಎಎಲ್ ನೌಕರರ ಸಂಘದ ಮಾಜಿ ಪ್ರಧಾನ ಕಾರ್ಯದರ್ಶಿ ಅನಂತ ಪದ್ಮನಾಭ ಮಾತನಾಡಿ, ತೇಜಸ್, ಸುಖೋಯ್ ಸೇರಿದಂತೆ ಅನೇಕ ಯುದ್ಧ ವಿಮಾನಗಳ ತಯಾರಿಕೆಯಲ್ಲಿ ನಮ್ಮ ಶ್ರಮವಿದೆ. ಇಸ್ರೋ ಉಪಗ್ರಹಗಳನ್ನು ಉಡಾವಣೆ ಮಾಡುತ್ತದೆ. ಅದಕ್ಕೆ ಬೇಕಾಗುವ ಸಾಧನಗಳನ್ನು ನಾವು ಒದಗಿಸುತ್ತೇವೆ. ಎಚ್‌ಎಎಲ್ ನಮ್ಮ ದೇಶದ ಹೆಮ್ಮೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News