2002ರ ಗುಜರಾತ್ ಗಲಭೆ: ಆಡಳಿತ ವೈಫಲ್ಯ ಪ್ರಶ್ನಿಸಿದ ಮಾಜಿ ಉಪರಾಷ್ಟ್ರಪತಿ ಹಾಮಿದ್ ಅನ್ಸಾರಿ

Update: 2018-10-14 07:48 GMT

ಹೊಸದಿಲ್ಲಿ, ಅ.14: ಗುಜರಾತ್ ನಲ್ಲಿ 2002ರಲ್ಲಿ ನಡೆದ ಹಿಂಸಾಚಾರದ ವೇಳೆ ಪೊಲೀಸ್ ಆಡಳಿತ ವ್ಯವಸ್ಥೆ ವಿಫಲವಾಗಿದ್ದನ್ನು ಮತ್ತು ಅಂತಹ ಪರಿಸ್ಥಿತಿಯಲ್ಲಿ ಸಂಸದೀಯ ವ್ಯವಸ್ಥೆಯ ಪಾತ್ರವನ್ನು ಮಾಜಿ ಉಪರಾಷ್ಟ್ರಪತಿ ಹಾಮಿದ್ ಅನ್ಸಾರಿ ಪ್ರಶ್ನಿಸಿದ್ದಾರೆ.

ಲೆಫ್ಟಿನೆಂಟ್ ಜನರಲ್ ಝಮೀರುದ್ದೀನ್ ಶಾ ಅವರ ಆತ್ಮಚರಿತ್ರೆ, "ದ ಸರ್ಕಾರಿ ಮುಸಲ್ಮಾನ್" ಕೃತಿ ಬಿಡುಗಡೆ ಮಾಡಿ ಮಾತನಾಡಿದ ಅವರು, "ರಾಜಕೀಯ ನಾಯಕತ್ವದ ಪಾತ್ರದ ಬಗ್ಗೆ ಕೃತಿ ಮೌನವಾಗಿದೆ. ಕಾನೂನು ಹಾಗೂ ಸುವ್ಯವಸ್ಥೆ ಕುಸಿತ ಸ್ಥಿತಿಗೆ ಸ್ಪಂದಿಸುವಲ್ಲಿ ನಾಗರಿಕ ಮತ್ತು ಪೊಲೀಸ್ ಆಡಳಿತ ವಿಫಲವಾದಾಗ, ಪ್ರಜಾಸತ್ತಾತ್ಮಕ ಮತ್ತು ಸಂಸದೀಯ ವ್ಯವಸ್ಥೆಯ ಪಾತ್ರವೇನು? ಸಂವಿಧಾನದ 355ನೇ ವಿಧಿಯನ್ನು ಏಕೆ ಜಾರಿ ಮಾಡಿಲ್ಲ" ಎಂದು ಪ್ರಶ್ನಿಸಿದರು.

ಸಂವಿಧಾನದ 355ನೇ ವಿಧಿ ಅನ್ವಯ ಆಂತರಿಕ ಪ್ರಕ್ಷುಬ್ಧ ಪರಿಸ್ಥಿತಿಯ ಸಂದರ್ಭದಲ್ಲಿ ರಾಜ್ಯವನ್ನು ರಕ್ಷಿಸುವ ಹೊಣೆ ಕೇಂದ್ರ ಸರ್ಕಾರದ್ದು. ರಕ್ಷಣಾ ಸಚಿವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಲು ಅವಕಾಶವಿದ್ದಾಗ ಏಕೆ ಅದನ್ನು ಬಳಸಿಕೊಂಡಿಲ್ಲ ಎಂದು ಅನ್ಸಾರಿ ಕುಟುಕಿದರು.

ಗಲಭೆ ನಿಯಂತ್ರಿಸುವ ಸಲುವಾಗಿ ಝಮೀರುದ್ದೀನ್ ಶಾ ಅವರನ್ನು 2002ರಲ್ಲಿ ಅಹ್ಮದಾಬಾದ್‍ಗೆ ಕಳುಹಿಸಲಾಗಿತ್ತು. 3000 ಯೋಧರಿದ್ದ ಪಡೆ ಮಾರ್ಚ್ 1ರಂದು ಅಹ್ಮದಾಬಾದ್ ತಲುಪಿದರೂ, ಸ್ಥಳಕ್ಕೆ ಕರೆದೊಯ್ಯಲು ಒಂದು ದಿನ ವಿಳಂಬವಾಗಿತ್ತು. ಸೇನೆ ಗಲಭೆ ನಿಯಂತ್ರಿಸುವ ನಿಟ್ಟಿನಲ್ಲಿ ಪ್ರಮುಖ ಗಂಟೆಗಳನ್ನು ಕಳೆದುಕೊಂಡಿತು ಎಂದು ಶಾ ತಮ್ಮ ಕೃತಿಯಲ್ಲಿ ವಿವರಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News