ಸಾವಿರ ರೂಪಾಯಿ ಕೊಟ್ಟರೆ ಡಾಕ್ಟರೇಟ್: ಪ್ರೊ.ಎಸ್.ಜಿ.ಸಿದ್ದರಾಮಯ್ಯ ಬೇಸರ

Update: 2018-10-14 13:18 GMT

ಬೆಂಗಳೂರು, ಅ. 14: ವಿದೇಶಗಳ ವಿಶ್ವವಿದ್ಯಾಲಯಗಳಿಗೆ ಸಾವಿರ ರೂ. ಕೊಟ್ಟರೆ ಯಾರಿಗೆ ಬೇಕಾದರೂ ಡಾಕ್ಟರೇಟ್ ಸಿಗುತ್ತದೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪ್ರೊ.ಎಸ್.ಜಿ.ಸಿದ್ದರಾಮಯ್ಯ ಬೇಸರ ವ್ಯಕ್ತಪಡಿಸಿದ್ದಾರೆ.

ರವಿವಾರ ಕಸಾಪದಲ್ಲಿ ಬುದ್ಧ ಬಸವ ಗಾಂಧಿ ಸಾಂಸ್ಕೃತಿಕ ಟ್ರಸ್ಟ್ ಆಯೋಜಿಸಿದ್ದ ರಾಜ್ಯಮಟ್ಟದ ಒಂಭತ್ತನೆ ಕನ್ನಡ ಸಾಹಿತ್ಯ ಸಾಂಸ್ಕೃತಿಕ ಸಮಾವೇಶದಲ್ಲಿ ಮಾತನಾಡಿದ ಅವರು, ದುಡ್ಡು ಕೊಟ್ಟು ಪಡೆಯುವ ಡಾಕ್ಟರೇಟ್‌ಗಿಂತ ಒಂದು ಕೃತಿಯ ವಿದ್ವತ್ತಿನ ಮೂಲಕ ದೊರೆಯುವ ಡಾಕ್ಟರೇಟ್ ಶ್ರೇಷ್ಠವಾದದ್ದು ಎಂದು ಹೇಳಿದರು.

ಬಹುಭಾಷಿಕರಾಗಿ ಕನ್ನಡ ಸಾಹಿತ್ಯದಲ್ಲಿ ತೊಡಗಿದವರು ಕನ್ನಡವನ್ನ ಸಂವೇದನಾಶೀಲವಾಗಿ ಬೆಳೆಸಿ-ಉಳಿಸುತ್ತಾರೆ. ಜತೆಗೆ ಎಲ್ಲ ಭಾಷೆಯ ಸಾಹಿತ್ಯವನ್ನು ತಿಳಿದು ಸಾಹಿತ್ಯ-ಸಂಸ್ಕೃತಿಯ ವಿನಿಮಯಕ್ಕೆ ಕಾರಣಭೂತರಾಗುತ್ತಾರೆ. ಅಂತವರ ಸಾಲಿಗೆ ಲೇಖಕಿ ವರದಾ ಶ್ರೀನಿವಾಸ್ ಸೇರುತ್ತಾರೆ ಎಂದರು.

ನಮ್ಮ ದೇಶದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳು ಪ್ರಾದೇಶಿಕ ಭಾಷೆಗಳಲ್ಲೇ ನಡೆಯಬೇಕು. ಕೇಂದ್ರ ಸರಕಾರ ನಡೆಸುವ ಹಲವು ಪರೀಕ್ಷೆಗಳು ಹಿಂದಿ, ಇಂಗ್ಲಿಷ್ ಎರಡೂ ಪರಭಾಷೆಗಳಲ್ಲಿ ನಡೆಯುವುದರಿಂದ ಒಕ್ಕೂಟ ವ್ಯವಸ್ಥೆಯಲ್ಲಿ ಬಹುತ್ವವನ್ನು ನಾಶಮಾಡುವಂತಿದ್ದು, ಇದು ಸಂವಿಧಾನದ ವಿರೋಧಿ ನಡೆ ಎಂದು ಟೀಕಿಸಿದರು.

ಸಮಾಜಘಾತುಕ ಶಕ್ತಿಗಳು ಮುಗ್ಧ ಅಬಲೆಯರ ಮೇಲೆ ಕೈಗೊಳ್ಳುವ ದೌರ್ಜನ್ಯ, ಪುರುಷ ಪ್ರಧಾನ ವ್ಯವಸ್ಥೆಯ ಕಟು ವಿಡಂಬಣೆ ಪ್ರತಿಭಟನಾತ್ಮಕ ಧ್ವನಿ, ಸ್ತ್ರೀ ಸಮಾನತೆಗಾಗಿ ಹಂಬಲಿಸುವ ಚಿಕಿತ್ಸಕ ದೃಷ್ಟಿಯ ಕವಿತೆಗಳು ಡಾ.ವರದಾ ಶ್ರೀನಿವಾರವರ ಕವಿತೆಯ ವಿಶೇಷಗಳಾಗಿವೆ.

ಸಮಕಾಲೀನ ಸಾಹಿತ್ಯ ಸಂದರ್ಭಗಳಲ್ಲಿ ಕನ್ನಡ ಸಾಹಿತ್ಯ-ಸಂಸ್ಕೃತಿಯ ಪರಿಚಾರಿಕೆಯನ್ನು ನಿಷ್ಕಲ್ಮಶ ಮನಸ್ಸಿನಿಂದ ಕೈಗೊಂಡಿರುವ ನಾಡಿನ ಹೆಸರಾಂತ ಸಾಹಿತಿಗಳಾದ ವರದಾರವರ ಸಾಹಿತ್ಯ ಒರತೆಯಿಂದ ಮಗೆದಷ್ಟು, ಮೌಲಿಕ ಕೃತಿಗಳು ಸಹೃದಯರ ಕೈ ಸೇರಲೆಂದರು.

ಇಬ್ಬರು ಸಮಾನರು: ಮಹಿಳೆಯನ್ನು ಪುರುಷನ ಸೊತ್ತು ಎಂದು ಹೇಳುವ ಐಪಿಸಿ ಸೆಕ್ಷನ್ 486ರನ್ನು ಸುಪ್ರೀಂ ಕೋರ್ಟ್ ರದ್ದು ಗೊಳಿಸಿದ್ದು, ಶಬರಿಮಲೆಗೆ ಮಹಿಳೆಯರ ಪ್ರವೇಶ ನಿರ್ಭಂಧವನ್ನು ತೆರವುಗೊಳಿಸಿರುವುದು ಸಾಗತಾರ್ಹ ಎಂದು ಸಮಾವೇಶದ ಅಧ್ಯಕ್ಷೆ, ಲೇಖಕಿ ವರದಾ ಶ್ರೀನಿವಾಸ್ ಹೇಳಿದರು.

ಸಾಂವಿಧಾನನಿಕ ನೈತಿಕತೆಯನ್ನು ನ್ಯಾಯಾಲಯ ಎತ್ತಿ ಹಿಡಿದಿದೆ. ಅದರ ಪ್ರಕಾರ ಪತಿ ಯಜಮಾನ ಅಲ್ಲ. ಪತ್ನಿ ಗುಲಾಮಳಲ್ಲ, ಲೈಂಗಿಕ ವಿಚಾರದಿಂದ ತೊಡಗಿ ಇತರ ವಿಚಾರಗಳಲ್ಲಿ ಇಬ್ಬರೂ ಸರಿಸಮಾನರು ಎಂಬ ಮೂಲಭೂತ ಮೌಲ್ಯಗಳು ದಂಡ ಸಂಹಿತೆಗೆ ಒಳಪಟ್ಟಿವೆ.
ಈ ತೀರ್ಪು ಪುರುಷರಿಗೆ ಅಕ್ರಮ ಸಂಬಂಧ ಹೊಂದಲು ಪರವಾನಗೆ ನೀಡಿದಂತಾಗಿದೆ. ಸಾಮಾನ್ಯವಾಗಿ ಪತ್ನಿ ಅಕ್ರಮ ಸಂಬಂಧ ಹೊಂದುವ ಸಂದರ್ಭ ತೀರಾ ಕಡಿಮೆ. ಒಂದು ರೀತಿಯಲ್ಲಿ ಇದು ವ್ಯಭಿಚಾರದಲ್ಲಿ ತೊಡಗಲು ಎಲ್ಲರಿಗೂ ನೀಡಿದ ಅನುಮತಿ ಎಂದು ಭಾವಿಸುವಂತಿದೆ.
ಇದರಿಂದ ಗಂಡಿಗೆ ಗಂಡು, ಹೆಣ್ಣಿಗೆ ಹೆಣ್ಣು ಹಾಗೂ ಅವರಿಬ್ಬರೂ ಪರಸ್ಪರ ಶತ್ರುಗಳಾಗುತ್ತಾರೆ. ಸಾಂಪ್ರದಾಯಿಕ ಮನಸ್ಸಿಗೆ ಇದು ಮುಜುಗರ ನೀಡುತ್ತದೆ. ಸಮಾಜದ ಸ್ವಾಸ್ಥ ಇನ್ನಷ್ಟು ಕೆಟ್ಟು ಹೋಗುತ್ತದೆ ಎಂದು ಹೇಳಿದರು.

ಅತ್ಯಾಚಾರ, ಲೈಂಗಿಕ ಕಿರುಕುಳ, ಸಂತಾನ ಶಕ್ತಿ ಹಗರಣಕ್ಕೆ ಬಲಾತ್ಕಾರ, ಗರ್ಭ ನಿರೋಧಕಗಳ ಬಳಕೆ, ಗರ್ಭಕೋಶ ತೆಗೆಯುವಿಕೆ, ಇತ್ಯಾದಿ ವಿಚಾರಗಳು ಆಕೆಯನ್ನು ನೋವಿನ ಪಾತಾಳಕ್ಕೆ ತಳ್ಳಿವೆ. ಯಾರದೋ ತಪ್ಪಿಗೆ ಹೆಣ್ಣಿಗೆ ಶಿಕ್ಷೆ ಏಕೆ ಬೇಕು, ಈಗ ಸರ್ವೋಚ್ಛ ನ್ಯಾಯಾಲಯ ನೀಡಿದ ತೀರ್ಪು ಆಕೆಗೆ ಅಸಮಾಧಾನವೇ. ಪತಿ ಅಕ್ರಮ ಸಂಬಂಧ ಹೊಂದಿದ್ದಾನೆ, ತಾನೂ ಹೊಂದಬಹುದು ಎಂದು ಯಾವ ಹೆಣ್ಣೂ ಬಯಸುವುದಿಲ್ಲ. ಎಲ್ಲೋ ಕೆಲವು ಸ್ವೇಚ್ಛಾ ಮನಸ್ಸಿನ ಅತ್ಯಾಧುನಿಕ ಹೆಣ್ಣು ಬಯಸಬಹುದೇನೆ ಎಂದು ವಿಷಾದ ವ್ಯಕ್ತಪಡಿಸಿದರು.

ಇಂಗ್ಲಿಷ್ ಭಾಷೆಯ ವ್ಯಾಮೋಹ: ಕನ್ನಡಿಗೆ ಭಾಷಾಭಿಮಾನ ಶೂನ್ಯತೆ ಇಂದು ನಿನ್ನೆಯ ವಿಷಯವಲ್ಲ. ಆಂಗ್ಲರ ಆಡಳಿತ ಆರಂಭವಾದಾಗ ಆಂಗ್ಲ ಭಾಷಾ ಮೋಹ ಕನ್ನಡಿಗರನ್ನು ಆವರಿಸಿದ್ದುದು ಎಂದೂ ಕಡಿಮೆಯಾಗಲಿಲ್ಲ. ಕನ್ನಡದ ಬಗ್ಗೆ ತೀವ್ರ ನಿರ್ಲಕ್ಷದ ಪರಿಣಾಮವಾಗಿ ಕನ್ನಡ ಮೂಲೆಗುಂಪಾಯಿತು. ಹಾಗೆ ಮೂಲೆಗುಂಪಾಗುವ ಕಾಲದಲ್ಲೆಲ್ಲ ಅಲ್ಲೊಬ್ಬರು, ಇಲ್ಲೊಬ್ಬರು ಪುಣ್ಯ ಪುರುಷರು ಹುಟ್ಟಿ ಕನ್ನಡವನ್ನು ಮೇಲೆತ್ತುವ ಕೆಲಸ ಕೈಗೊಂಡು ಚಿರಸ್ಮರಣೀಯರೆನಿಸಿದ್ದಾರೆ ಎಂದರು.

ಸಾಹಿತ್ಯ ಕೂಟದ ಅಧ್ಯಕ್ಷ ನಂಜಪ್ಪ ಕಾಳೇಗೌಡ, ಬುದ್ಧ ಬಸವ ಗಾಂಧಿ ಸಾಂಸ್ಕೃತಿಕ ಟ್ರಸ್ಟ್ ಅಧ್ಯಕ್ಷ ಎಸ್.ರಾಮಲಿಂಗೇಶ್ವರ, ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಕೆ.ವಿ.ನಾಗರಾಜಮೂರ್ತಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News