ಅಲಹಾಬಾದ್ ಹೆಸರು ಬದಲಾವಣೆಗೆ ಕಾಂಗ್ರೆಸ್ ವಿರೋಧ

Update: 2018-10-15 03:59 GMT

ಅಲಹಾಬಾದ್, ಅ. 15: ಉತ್ತರ ಪ್ರದೇಶದ ಅಲಹಾಬಾದ್ ನಗರವನ್ನು ಶೀಘ್ರವೇ ಪ್ರಯಾಗ್‌ರಾಜ್ ಎಂದು ಮರು ನಾಮಕರಣ ಮಾಡುವ ಆದಿತ್ಯನಾಥ್ ಪ್ರಸ್ತಾವವನ್ನು ಕಾಂಗ್ರೆಸ್ ತೀವ್ರವಾಗಿ ವಿರೋಧಿಸಿದೆ.

"ಈ ಹೆಸರು ಬದಲಾವಣೆಯಿಂದ ಇತಿಹಾಸದ ಮೇಲೆ ಪರಿಣಾಮವಾಗಲಿದೆ. ಸ್ವಾತಂತ್ರ್ಯ ಹೋರಾಟದಲ್ಲೂ ಅಲಹಾಬಾದ್ ಮಹತ್ವದ ಪಾತ್ರ ವಹಿಸಿತ್ತು" ಎಂದು ಕಾಂಗ್ರೆಸ್ ವಕ್ತಾರ ಓಂಕಾರ್ ಸಿಂಗ್ ಹೇಳಿದ್ದಾರೆ. ಕುಂಭ ಮೇಳ ನಡೆಯುವ ಪ್ರದೇಶವನ್ನು ಈಗಾಗಲೇ ಪ್ರಯಾಗ್‌ರಾಜ್ ಎಂದು ಕರೆಯಲಾಗುತ್ತಿದೆ. ಸರ್ಕಾರಕ್ಕೆ ಅಷ್ಟು ಕಾತರ ಇದ್ದರೆ, ಅದನ್ನು ಪ್ರತ್ಯೇಕ ನಗರವನ್ನಾಗಿ ಮಾಡಲಿ. ಆದರೆ ಅಲಹಾಬಾದ್ ಹೆಸರು ಬದಲಾವಣೆ ಬೇಡ ಎಂದು ಅವರು ಹೇಳಿದ್ದಾರೆ.

"ಗಾಂಧಿಯುಗದಲ್ಲಿ ಸ್ವಾತಂತ್ರ್ಯ ಹೋರಾಟಕ್ಕೆ ಅಲಹಾಬಾದ್ ಸ್ಫೂರ್ತಿಯ ಕೇಂದ್ರವಾಗಿತ್ತು. 1888, 1892 ಹಾಗೂ 1910ರಲ್ಲಿ ಇಲ್ಲಿ ಕಾಂಗ್ರೆಸ್ ಮಹಾ ಅಧಿವೇಶನ ನಡೆದು, ಅದು ಸ್ವಾತಂತ್ರ್ಯ ಚಳವಳಿಗೆ ನಿರ್ದಿಷ್ಟ ರೂಪ ನೀಡಿತ್ತು. ಈ ನಗರ ದೇಶದ ಮೊಟ್ಟಮೊದಲ ಪ್ರಧಾನಿಯನ್ನು ನೀಡಿದೆ. ಎಲ್ಲಕ್ಕಿಂತ ಹೆಚ್ಚಾಗಿ ಅಲಹಾಬಾದ್ ವಿಶ್ವವಿದ್ಯಾನಿಲಯ ಕೂಡಾ ಪ್ರಯಾಗ್‌ರಾಜ್ ವಿವಿ ಆದರೆ ತನ್ನ ಹಿರಿಮೆಯನ್ನೇ ಕಳೆದುಕೊಳ್ಳಲಿದೆ ಎಂದು ಹೇಳಿದ್ದಾರೆ.

ಆದರೆ ಬಿಜೆಪಿ, ಆದಿತ್ಯನಾಥ್ ನಿರ್ಧಾರವನ್ನು ಸ್ವಾಗತಿಸಿದೆ. "ಅಕ್ಬರ್ ಕಿ ನಿಶಾನಿ"ಯನ್ನು ಕಿತ್ತೆಸೆದು ಹಳೆಯ ಪ್ರಯಾಗ್‌ರಾಜ್ ಹೆಸರನ್ನು ಮರು ಚಾಲ್ತಿಗೆ ತರುತ್ತಿರುವುದು ಸ್ವಾಗತಾರ್ಹ ಎಂದು ಬಿಜೆಪಿ ಹೇಳಿದೆ. ರಾಜ್ಯದ ಲಕ್ಷಾಂತರ, ಕೋಟ್ಯಂತರ ಮಂದಿಯ ಭಾವನೆಗಳನ್ನು ಗೌರವಿಸಿ ಈ ಹೆಸರು ಬದಲಾವಣೆ ಮಾಡುತ್ತಿರುವುದು ಸ್ವಾಗತಾರ್ಹ ಎಂದು ಬಿಜೆಪಿ ವಕ್ತಾರ ಮನೋಜ್ ಮಿಶ್ರಾ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News