ಮ. ಪ್ರದೇಶ ಚುನಾವಣೆಗೆ ಮುನ್ನ 3 ಕೋಟಿ ರೂ.ಗಳ ನಕಲಿ ನೋಟು ತಯಾರಿಸಲು ಹೇಳಲಾಗಿತ್ತು

Update: 2018-10-15 07:17 GMT
ಸಾಂದರ್ಭಿಕ ಚಿತ್ರ

ಭೋಪಾಲ್, ಅ.15: ನಕಲಿ ನೋಟುಗಳನ್ನು ತಯಾರಿಸುತ್ತಿದ್ದ ಆರೋಪದ ಮೇಲೆ ಬಂಧಿತನಾಗಿರುವ ರಾಜ್ಯ ಮಟ್ಟದ ಮಾಜಿ ಹಾಕಿ ಆಟಗಾರ ವಿಚಾರಣೆಯ ವೇಳೆಗೆ ತನಗೆ ವಿಧಾನಸಭಾ ಚುನಾವಣೆಯ ಮುನ್ನ 3 ಕೋಟಿ ರೂ. ಮೌಲ್ಯದ ನಕಲಿ ನೋಟುಗಳನ್ನು ಮುದ್ರಿಸಲು ಭೋಪಾಲದ ವ್ಯಕ್ತಿಯೊಬ್ಬ ತಿಳಿಸಿದ್ದನೆಂದು ಬಯಲುಗೊಳಿಸಿದ್ದಾನೆ.

ಈ ನೋಟುಗಳನ್ನು ಚುನಾವಣೆಗಿಂತ ಮುಂಚೆ ಅಸಲಿ ಮತ್ತು ನಕಲಿ ನೋಟುಗಳ ನಡುವಿನ ವ್ಯತ್ಯಾಸ ಅರಿಯದ ಜನರಿಗೆ ವಿತರಿಸುವ ಸಂಚಿತ್ತು ಎಂದೂ ಆತ ತಿಳಿಸಿದ್ದಾನೆ. ಆದರೆ ತನಗೆ ನಕಲಿ ನೋಟು ಮುದ್ರಿಸಲು ಆರ್ಡರ್ ನೀಡಿದ ವ್ಯಕ್ತಿಯ ಹೆಸರನ್ನು ಆತ ಬಾಯ್ಬಿಟ್ಟಲ್ಲ.

ಅಕ್ಟೋಬರ್ 9ರಂದು ರಾಯಘರ್ ಹಾಗೂ ಹೊಶಂಗಾಬಾದ್ ಎಂಬಲ್ಲಿಂದ ಬಂಧಿಸಲ್ಪಟ್ಟ ಐದು ಮಂದಿ ನೀಡಿದ ಮಾಹಿತಿಯಂತೆ ಭೋಪಾಲ ನಿವಾಸಿ ಅಫ್ತಾಬ್ ಅಲಿ (42) ಎಂಬಾತನನ್ನು ಪೊಲೀಸರು ಬಂಧಿಸಿ ಆತನಿಂದ ರೂ 31.50 ಲಕ್ಷ ಮುಖಬೆಲೆಯ ರೂ 2000 ಹಾಗೂ ರೂ 500 ಮುಖಬೆಲೆಯ ನಕಲಿ ನೋಟುಗಳನ್ನು ವಶಪಡಿಸಿಕೊಂಡಿದ್ದರು.

ಮಶೀನಿನ ಮೂಲಕ ನೋಟುಗಳನ್ನು ಸ್ಕ್ಯಾನ್ ಮಾಡಿ ನಂತರ ಪೇಪರ್ ಹಾಳೆಗಳಲ್ಲಿ ಅವುಗಳನ್ನು ಮುದ್ರಿಸಿ ನಂತರ ಸೂಕ್ತ ಆಕಾರದಲ್ಲಿ ಕತ್ತರಿಸಲಾಗುತ್ತಿತ್ತು. ರೂ 2000 ಮುಖಬೆಲೆಯ ಎಲ್ಲಾ ನೋಟುಗಳಲ್ಲಿ ಒಂದೇ ಸೀರಿಯಲ್ ಸಂಖ್ಯೆ ಇದ್ದರೆ, ರೂ 500 ಮುಖಬೆಲೆಯ ನೋಟುಗಳಲ್ಲಿಯೂ ಒಂದೇ ಸೀರಿಯಲ್ ಸಂಖ್ಯೆಯಿದೆಯೆಂದು ವಿಚಾರಣೆ ವೇಳೆ ಆರೋಪಿತರು ಬಾಯ್ಬಿಟ್ಟಿದ್ದಾರೆ.

ಬಂಧಿತ ಅಫ್ತಾಬ್ ಈ ನಕಲಿ ನೋಟು ಜಾಲದ ರೂವಾರಿಯೆನ್ನಲಾಗಿದ್ದು, ಆತ ಮಧ್ಯ ಪ್ರದೇಶವನ್ನು ಹಾಕಿ ಪಂದ್ಯಗಳಲ್ಲಿ ಏಳು ಬಾರಿ ಪ್ರತಿನಿಧಿಸಿದ್ದ ಹಾಗೂ ಈಗ ರಿಯಲ್ ಎಸ್ಟೇಲ್ ಉದ್ಯಮ ನಡೆಸುತ್ತಿದ್ದಾನೆಂದು ತಿಳಿದು ಬಂದಿದೆ.

ತನಗೆ ಕಮಿಷನ್ ಆಧಾರದಲ್ಲಿ ನೋಟು ಮುದ್ರಿಸಲು ಹೇಳಲಾಗಿತ್ತೆಂದೂ ಆತ ಪೊಲೀಸರಿಗೆ ತಿಳಿಸಿದ್ದಾನೆ. ಮಧ್ಯ ಪ್ರದೇಶ ವಿಧಾನಸಭಾ ಚುನಾವಣೆ ನವೆಂಬರ್ 28ರಂದು ನಡೆಯಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News