'ಸೂಟು-ಬೂಟು' ಧರಿಸದೇ ಇರುವವರು ಪ್ರಧಾನಿಯ ಭಾಯಿ ಆಗುವುದಿಲ್ಲ : ರಾಹುಲ್ ಗಾಂಧಿ

Update: 2018-10-15 11:31 GMT

ಭೋಪಾಲ್, ಅ. 15: ಪ್ರಧಾನಿ ನರೇಂದ್ರ ಮೋದಿಯ ಹೃದಯದಲ್ಲಿ ದುರ್ಬಲ ವರ್ಗ ಹಾಗೂ ಮಹಿಳೆಯರಿಗೆ ಯಾವುದೇ ಸ್ಥಾನವಿಲ್ಲ, ದೇಶದಲ್ಲಿ ದಲಿತರು, ಮಹಿಳೆಯರು, ಅಲ್ಪಸಂಖ್ಯಾತರು ಆದಿವಾಸಿಗಳು ಹಾಗೂ ಬಡವರ ಮೇಲೆ ದಾಳಿಯಾದಾಗ ಅವರು ಮೌನ ವಹಿಸುತ್ತಾರೆ'' ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಆರೋಪಿಸಿದ್ದಾರೆ.

ಪೀತಾಂಬರ ಪೀಠಕ್ಕೆ ಭೇಟಿ ನೀಡಿದ ನಂತರ ದಟಿಯ ಎಂಬಲ್ಲಿ ಆಯೋಜಿಸಲಾದ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ರಾಹುಲ್ ''ನೀವು ಸೂಟು-ಬೂಟಿನಲ್ಲಿಲ್ಲದೇ ಇದ್ದರೆ ಮೋದಿ ಅವರ ಭಾಯಿ ಆಗುವುದಿಲ್ಲ'' ಎಂದರು.

''ಸಾವಿರಾರು ಕೋಟಿ ರೂಪಾಯಿ ವಂಚಿಸಿ ದೇಶ ಬಿಟ್ಟು ಪಲಾಯನಗೈದ ದೊಡ್ಡ ಕೈಗಾರಿಕೋದ್ಯಮಿಗಳಾದ ನೀರವ್ ಮೋದಿ, ಮೆಹುಲ್ ಚೊಕ್ಸಿ ಅಂತಹವರಿಗೆ ಮಾತ್ರ ಪ್ರಧಾನಿ 'ಭಾಯಿ' ಪದ ಉಪಯೋಗಿಸುತ್ತಾರೆ, ಆದರೆ ಅದೇ ಗೌರವವನ್ನು ರೈತರಿಗೆ ಮತ್ತು ಕಾರ್ಮಿಕರಿಗೆ ತೋರಿಸುತ್ತಿಲ್ಲ'' ಎಂದು ರಾಹುಲ್ ಹೇಳಿದರು.

ಪ್ರಧಾನಿ ದಲಿತ ವಿರೋಧಿಯಾಗಿದ್ದಾರೆ ಎಂದೂ ರಾಹುಲ್ ಆರೋಪಿಸಿದರಲ್ಲದೆ ರೋಹಿತ್ ವೇಮುಲಾ ಆತ್ಮಹತ್ಯೆ ಪ್ರಕರಣವನ್ನು ಉಲ್ಲೇಖಿಸಿ ''ಆತ ಕೇವಲ ಶಿಕ್ಷಣ ಪಡೆಯಲು ಬಯಸಿದ್ದ. ಆದರೆ ಶಿಕ್ಷಣ ಸಚಿವರು ಬರೆದ ಪತ್ರದ ನಂತರ ಒತ್ತಡದಲ್ಲಿದ್ದ ಆತ ಆತ್ಮಹತ್ಯೆಗೆ ಶರಣಾಗಿದ್ದಾರೆ. ಗುಜರಾತ್ ನಲ್ಲಿ ದಲಿತರನ್ನು ಸಾಯಿಸಲಾಗಿದೆ ಆದರೂ ಪ್ರಧಾನಿ ಒಂದು ಶಬ್ದ ಮಾತನಾಡಿಲ್ಲ, ಪರಿಶಿಷ್ಟ ಜಾತಿ/ಪಂಗಡ ದೌರ್ಜನ್ಯ ತಡೆ ಕಾಯಿದೆಯನ್ನು ಸಡಿಲಗೊಳಿಸಿದ ಕ್ರಮದ ವಿರುದ್ಧ ನೀಡಲಾದ ಬಂದ್ ಸಂದರ್ಭ ಹಿಂಸಾಚಾರದಲ್ಲಿ ಏಳು ಜನರು ಸಾವಿಗೀಡಾದರು'' ಎಂದೂ ರಾಹುಲ್ ನೆನಪಿಸಿಕೊಂಡರು.

ಅತ್ಯಾಚಾರ ಆರೋಪ ಎದುರಿಸುತ್ತಿರುವ ಬಿಜೆಪಿ ಶಾಸಕ ಕುಲದೀಪ್ ಸಿಂಗ್ ಸೇಂಗಾರ್ ಬಗ್ಗೆ ಉಲ್ಲೇಖಿಸಿದ ರಾಹುಲ್, ಉತ್ತರ ಪ್ರದೇಶ ಮುಖ್ಯಮಂತ್ರಿ  ಆದಿತ್ಯನಾಥ್ ಹಾಗೂ ಪ್ರಧಾನಿ ಮೋದಿ ಅವರನ್ನು ರಕ್ಷಿಸಲು ಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News