ಎಂ. ಜೆ. ಅಕ್ಬರ್ ರಾಜೀನಾಮೆ ಯಾರಿಗೆ ಅನಿವಾರ್ಯ?

Update: 2018-10-15 18:37 GMT

ನಿರೀಕ್ಷೆಯಂತೆಯೇ ತನ್ನ ಮೇಲೆರಗಿರುವ ಆರೋಪಗಳನ್ನು ತಳ್ಳಿ ಹಾಕಿರುವ ಕೇಂದ್ರ ಸಚಿವ ಎಂ. ಜೆ. ಅಕ್ಬರ್, ರಾಜೀನಾಮೆ ನೀಡುವುದಿಲ್ಲ ಎಂದು ಹೇಳಿದ್ದಾರೆ. ಕಾಂಗ್ರೆಸ್ ಪಕ್ಷವಂತೂ ಬಹುಕೋಟಿ ರಫೇಲ್ ಹಗರಣವನ್ನು ಪಕ್ಕಕ್ಕಿಟ್ಟು ಅಕ್ಬರ್ ರಾಜೀನಾಮೆಗೆ ಪಟ್ಟು ಹಿಡಿದಿದೆ. ಅಕ್ಬರ್ ಅವರ ಕೈಯಿಂದ ರಾಜೀನಾಮೆ ಕೊಡಿಸಿ, ಮಹಿಳೆಯರ ಚಾರಿತ್ರದ ಕುರಿತಂತೆ ತನ್ನ ಸರಕಾರ ಅದೆಷ್ಟು ಕಾಳಜಿಯನ್ನು ಹೊಂದಿದೆ ಎನ್ನುವುದನ್ನು ಪ್ರಧಾನಿ ದೇಶದ ಮುಂದೆ ಘೋಷಿಸುವ ಸಾಧ್ಯತೆಗಳನ್ನೂ ಅಲ್ಲಗಳೆಯುವಂತಿಲ್ಲ. ಎಂ. ಜೆ. ಅಕ್ಬರ್ ಬಿಜೆಪಿಯ ಪಾಲಿನ ಆಸ್ತಿಯೇನೂ ಅಲ್ಲ. ಅವರು ಬಿಜೆಪಿಯನ್ನು ಪೂರ್ಣವಾಗಿ ಪ್ರತಿನಿಧಿಸುವವರೂ ಅಲ್ಲ. ಸಮಯ ಸಾಧಕ ನಿಲುವುಗಳ ಮೂಲಕ ಕೇಂದ್ರ ಸರಕಾರದಲ್ಲಿ ಸಚಿವ ಸ್ಥಾನವನ್ನು ತನ್ನದಾಗಿಸಿಕೊಂಡವರು ಅಕ್ಬರ್. ತನ್ನ ಅಳಿದುಳಿದ ವಿಶ್ವಾಸಾರ್ಹತೆಯನ್ನು ಒತ್ತೆಯಿಟ್ಟು ಆ ಪದವಿಯನ್ನು ಬಿಜೆಪಿಯಿಂದ ಗಳಿಸಿಕೊಂಡಿದ್ದಾರೆ. ಕಳೆದುಕೊಳ್ಳುವುದಕ್ಕೆ ಆ ಸ್ಥಾನ ಬಿಟ್ಟರೆ ಅಕ್ಬರ್ ಬಳಿ ಇನ್ನೇನೂ ಇಲ್ಲ. ಇದೇ ಸಂದರ್ಭದಲ್ಲಿ ಅಕ್ಬರ್‌ರನ್ನು ಕಳೆದುಕೊಂಡರೆ ಮುಂದಿನ ಚುನಾವಣೆಯ ಮೇಲೆ ಬಿಜೆಪಿ ಮೇಲೆ ಯಾವ ದುಷ್ಪರಿಣಾಮವೂ ಬೀರದು. ಬದಲಿಗೆ, ಚುನಾವಣೆಯ ಹೊತ್ತಿಗೆ ಅದು ಬಿಜೆಪಿಗೆ ಪೂರಕವಾಗಿ ಪರಿಣಮಿಸಬಹುದು. ಮಹಿಳೆಯರ ಮೇಲೆ ನಡೆದ ಬರ್ಬರ ದೌರ್ಜನ್ಯಗಳ ಪ್ರಾಯೋಜಕರು, ಮಹಿಳಾ ಸ್ವಾತಂತ್ರದ ಬಗ್ಗೆ ತೀವ್ರ ಅನಾದಾರಗಳುಳ್ಳ ದೊಡ್ಡ ಸಂಖ್ಯೆಯ ನಾಯಕರುಗಳುಳ್ಳ ಪಕ್ಷವೊಂದು ಅಕ್ಬರ್ ರಾಜೀನಾಮೆಯಿಂದ ಕ್ಲೀನ್ ಚಿಟ್ ಪಡೆಯುತ್ತದೆಯೇ ಎನ್ನುವುದು ಪ್ರಶ್ನೆ.

ತನ್ನ ಮೇಲೆ ನಡೆದಿರುವ ಆರೋಪ ರಾಜಕೀಯ ಪ್ರೇರಿತ ಎಂದು ಎಂ. ಜೆ. ಅಕ್ಬರ್ ನುಣುಚಿಕೊಳ್ಳುತ್ತಿದ್ದಾರೆ. ಯಾವುದೋ ಒಬ್ಬ ಮಹಿಳೆಯ ಆರೋಪವಷ್ಟೇ ಆಗಿದ್ದಿದ್ದರೆ ಅದನ್ನು ದೇಶ ಗಂಭೀರವಾಗಿ ತೆಗೆದುಕೊಳ್ಳುತ್ತಿರಲಿಲ್ಲ. ಪ್ರಿಯಾ ರಮಣಿಯ ಬೆನ್ನಿಗೇ ಹತ್ತಕ್ಕೂ ಅಧಿಕ ಮಂದಿ ಅಕ್ಬರ್ ವಿರುದ್ಧ ಲೈಂಗಿಕ ಕಿರುಕುಳದ ಆರೋಪಗಳನ್ನು ಮಾಡಿದ್ದಾರೆ. ಅವರೆಲ್ಲರೂ ಸುಶಿಕ್ಷಿತರು. ಸಮಾಜದಲ್ಲಿ ಅತ್ಯುತ್ತಮ ಸ್ಥಾನಗಳನ್ನು ಹೊಂದಿರುವವರು. ಅಕ್ಬರ್ ಮೇಲಿರುವ ಕಿರುಕುಳ ಆರೋಪಗಳಿಗೆ ಕೆಲವು ಮಿತಿಗಳಿರಬಹುದು. ಅಂದರೆ ದೈಹಿಕ ಸ್ಪರ್ಶವೇ ನಡೆದಿಲ್ಲದಿರಬಹುದು. ಕೇವಲ ಮಾನಸಿಕ ಹಿಂಸೆಗೆ ಸೀಮಿತವಾಗಿರಬಹುದು. ಆದರೆ ಅಕ್ಬರ್ ಅವರ ನೈತಿಕತೆಯನ್ನು ಈ ಆರೋಪಗಳು ಪ್ರಶ್ನಿಸುತಿವೆೆ. ಬಹುಶಃ ಅಕ್ಬರ್ ಕೇವಲ ರಾಜಕಾರಣಿಯಾಗಿದ್ದರೆ ಅದು ಗಾಳಿಯಲ್ಲೇ ತೇಲಿ ಮುಗಿದು ಹೋಗುತ್ತಿತ್ತು. ಅವರೊಬ್ಬ ಚಿಂತಕ, ವಿಶ್ಲೇಷಕ. ಎಲ್ಲಕ್ಕಿಂತ ಮುಖ್ಯವಾಗಿ ಸಮಾಜವನ್ನು ತಿದ್ದಿ ಬೆಳೆಸುವ ಪತ್ರಕರ್ತರಾಗಿದ್ದವರು. ಆದುದರಿಂದ, ನೈತಿಕ ಹಿನ್ನೆಲೆಯಲ್ಲಿ ರಾಜೀನಾಮೆ ನೀಡುವ ವೈಯಕ್ತಿಕ ಹೊಣೆಗಾರಿಕೆ ಅಕ್ಬರ್ ಅವರಿಗಿದೆ. ಆ ಮೂಲಕ, ತಾನು ಉಳಿದ ರಾಜಕಾರಣಿಗಳಂತಲ್ಲ ಎನ್ನುವುದನ್ನು ಸಾಬೀತು ಮಾಡುವ ಅವಕಾಶವಿದೆ. ಇನ್ನೊಬ್ಬರ ಒತ್ತಡಕ್ಕಾಗಿ ನೀಡಬಹುದಾದ ರಾಜೀನಾಮೆ ಇದಲ್ಲ. ತನ್ನ ಒಳಗಿನ ಒತ್ತಡಕ್ಕಾಗಿ ನೀಡಬೇಕಾದ ರಾಜೀನಾಮೆ. ಅಂತಹದೊಂದು ಒಳಗಿನ ಒತ್ತಡ ಅವರಿಗಿಲ್ಲ ಎಂದಾದರೆ, ಅವರು ಬರಹಗಾರನ ಎಲ್ಲ ಸೂಕ್ಷ್ಮತೆಗಳನ್ನು ಕಳೆದುಕೊಂಡಿದ್ದಾರೆ ಎಂದೇ ಅರ್ಥ.

ರವಿವಾರ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಅವರು ‘‘ನನ್ನೊಳಗಿನ ಸಂವೇದನಾ ಶೀಲ ಬರಹಗಾರ ಸತ್ತು ಹೋಗಿದ್ದಾನೆ’’ ಎನ್ನುವುದನ್ನು ಬಹಿರಂಗವಾಗಿ ಘೋಷಣೆ ಮಾಡಿದ್ದಾರೆ. ಮೀಟು ಚಳವಳಿಯ ಮೂಲಕ ಈಗಾಗಲೇ ಅಕ್ಬರ್ ಅವರಿಗೆ ಅನಧಿಕೃತವಾಗಿ ಶಿಕ್ಷೆಯಾಗಿದೆ. ಮೀಟೂ ಚಳವಳಿ ಅತ್ಯಂತ ಸೂಕ್ಷ್ಮವಾದದ್ದು. ಸಂವೇದನೆಗಳ ತಳಹದಿಯ ಮೇಲೆ ನಿಂತಿರುವಂತಹದು. ಮುಖ್ಯವಾಗಿ, ಎಂದೋ ನಡೆದ ಘಟನೆಗಳಾಗಿರುವುದರಿಂದ ಮತ್ತು ಇಂತಹ ಕಿರುಕುಳಗಳಿಗೆ ಸಾಕ್ಷಗಳನ್ನು ನೀಡಲು ಸಾಧ್ಯವಾಗುವುದಿಲ್ಲವಾದ್ದರಿಂದ ಆರೋಪಗಳನ್ನು ಸಾಬೀತು ಮಾಡಲು ಅಸಾಧ್ಯ. ಎಲ್ಲಕ್ಕಿಂತ ಮುಖ್ಯವಾಗಿ ಕಿರುಕುಳಕ್ಕೊಳಗಾದವರು ಯಾವತ್ತೂ ಈ ಕುರಿತಂತೆ ಮೇಲಧಿಕಾರಿಗಳಿಗೆ ದೂರನ್ನೇ ಸಲ್ಲಿಸಿಲ್ಲ. ಮಾಡಿದ ಆರೋಪಗಳನ್ನು ನೋಡಿದ ಇತರ ಕಣ್ಣುಗಳಿಲ್ಲ. ಆದುದರಿಂದಲೇ, ಅಕ್ಬರ್ ರಾಜೀನಾಮೆ ಒತ್ತಡ ಹಾಕಿ ಪಡೆದುಕೊಳ್ಳುವುದಕ್ಕೆ ಸಾಧ್ಯವಿಲ್ಲ. ನಿರೀಕ್ಷೆಯಂತೆ ಅವರು ಪ್ರತಿ ಆರೋಪ ಮಾಡಿದ್ದಾರೆ. ಅಷ್ಟೇ ಅಲ್ಲ, ಆರೋಪ ಮಾಡಿದವರ ವಿರುದ್ಧವೇ ಮಾನನಷ್ಟ ಮೊಕದ್ದಮೆ ಹಾಕಿದ್ದಾರೆ. ಇದೇ ಸಂದರ್ಭದಲ್ಲಿ ಆರೋಪ ಮಾಡಿದವರು ಪೊಲೀಸ್ ಠಾಣೆಯಲ್ಲಾಗಲಿ, ನ್ಯಾಯಾಲಯದಲ್ಲಾಗಲಿ ಔಪಚಾರಿಕ ದೂರನ್ನೇ ದಾಖಲಿಸಿಲ್ಲ. ನಾಳೆ ಆರೋಪ ಮಾಡಿದವರೇ ಕಟಕಟೆಯಲ್ಲಿ ನಿಲ್ಲಬೇಕಾಗಬಹುದು. ಅಕ್ಬರ್ ಕೇಳಿದಷ್ಟು ಮಾನನಷ್ಟ ಪರಿಹಾರವನ್ನು ನೀಡಬೇಕಾದ ಸನ್ನಿವೇಶ ನಿರ್ಮಾಣವಾಗಬಹುದು. ಈ ಕಾರಣದಿಂದಲೇ ಅಕ್ಬರ್ ರಾಜೀನಾಮೆಗಾಗಿ ವಿರೋಧ ಪಕ್ಷಗಳು ಹೂಡುವ ಧರಣಿ ಅವುಗಳ ಶಕ್ತಿ ಮತ್ತು ಸಮಯದ ಪೋಲು.

ಅಕ್ಬರ್ ಅವರ ಒಂದು ರಾಜೀನಾಮೆಯಿಂದ ಮಹಿಳೆಯ ಕುರಿತಂತೆ ತನ್ನ ಸಾಚಾತನವನ್ನು ಸಾಬೀತು ಪಡಿಸಲು ಕೇಂದ್ರ ಸರಕಾರಕ್ಕೆ ಸಾಧ್ಯವೂ ಇಲ್ಲ. ಯಾಕೆಂದರೆ, ಮಹಿಳೆಯರ ಜೊತೆಗೆ ಕೀಳಾಗಿ ವರ್ತಿಸಿದವರ ಒಂದು ದೊಡ್ಡ ಪಡೆಯೇ ಕೇಂದ್ರ ಸರಕಾರದೊಳಗೆ ಬಚ್ಚಿಟ್ಟುಕೊಂಡಿದೆ. ಇತ್ತೀಚಿನ ದಿನಗಳಲ್ಲಿ ಬಿಜೆಪಿಯ ಹಲವು ನಾಯಕರು ಮಹಿಳೆಯರ ಜೊತೆಗೆ ಅತ್ಯಂತ ಕೆಟ್ಟದಾಗಿ ವರ್ತಿಸಿ ಸಿಕ್ಕಿ ಬಿದ್ದಿದ್ದಾರೆ. ಅವರೆಲ್ಲರ ಬಗ್ಗೆ ಪ್ರಧಾನಿ ಮೋದಿ ಯಾವ ಕ್ರಮ ಕೈಗೊಂಡಿದ್ದಾರೆ? ಎನ್ನುವುದನ್ನು ನಾವು ನೋಡಿದ್ದೇವೆ. ಅಕ್ಬರ್ ರಾಜೀನಾಮೆ ನೀಡಬೇಕಾದರೆ ಅದಕ್ಕೆ ಮೊದಲು ಪ್ರಧಾನಿ ನರೇಂದ್ರ ಮೋದಿಯೇ ರಾಜೀನಾಮೆಯನ್ನು ನೀಡಬೇಕಾಗುತ್ತದೆ. ಯಾಕೆಂದರೆ, ಮಹಿಳೆಯೊಬ್ಬರ ಹಿಂದೆ ಗೂಢಚಾರರನ್ನು ಬಿಟ್ಟ ಆರೋಪ ಅವರ ಮೇಲಿದೆ. ಪತ್ರಿಕೆಗಳಲ್ಲಿ ಇದು ಭಾರೀ ಚರ್ಚೆಗೊಳಗಾಗಿತ್ತು. ತನ್ನೊಂದಿಗೆ ವೈಯಕ್ತಿಕವಾಗಿ ಸಂಬಂಧ ಹೊಂದಿದ್ದ ಮಹಿಳೆಯ ಚಲನವಲನಗಳನ್ನು ಗಮನಿಸಲು ಸರಕಾರಿ ಅಧಿಕಾರಿಗಳನ್ನು ಛೂ ಬಿಡುವ ನಾಯಕನೇ ಈ ದೇಶದ ಪ್ರಧಾನಿಯಾಗಿರುವಾಗ, ಅಕ್ಬರ್ ನಡವಳಿಕೆಗಳ ಕುರಿತಂತೆ ಹೇಳಿಕೆಗಳನ್ನು ಸರಕಾರದಿಂದ ನಿರೀಕ್ಷಿಸುವುದು ಸಾಧವೇ? ನಿಜ, ಇಂದು ರಾಜೀನಾಮೆ ನೀಡಲೇಬೇಕಾದ ಹಲವರು ಸರಕಾರದ ಒಳಗಿದ್ದಾರೆ.

ನೋಟು ನಿಷೇಧದ ವೈಫಲ್ಯ ಮತ್ತು ದೇಶದ ಆರ್ಥಿಕತೆ ನಾಶವಾಗುತ್ತಿರುವ ಹಿನ್ನೆಲೆಯಲ್ಲಿ ವಿತ್ತ ಸಚಿವರು ರಾಜೀನಾಮೆ ನೀಡಬೇಕಾಗಿದೆ. ಗಡಿ ರಕ್ಷಣೆಯಲ್ಲಿ ಸಂಭವಿಸಿರುವ ವೈಫಲ್ಯದ ಹಿನ್ನೆಲೆಯಲ್ಲಿ ರಕ್ಷಣಾ ಸಚಿವರು ರಾಜೀನಾಮೆ ನೀಡಬೇಕಾಗಿದೆ. ಹೆಚ್ಚುತ್ತಿರುವ ಗುಂಪು ಥಳಿತ ಸಾವು, ನಕಲಿ ಗೋರಕ್ಷಕರ ಅಟ್ಟಹಾಸಕ್ಕಾಗಿ ಗೃಹ ಸಚಿವರು ರಾಜೀನಾಮೆ ನೀಡಬೇಕಾಗಿದೆ. ಅಷ್ಟೇ ಏಕೆ, ಒಬ್ಬ ಉದ್ಯಮಿ ಸ್ನೇಹಿತನಿಗಾಗಿ ದೇಶದ ಹಿತಾಸಕ್ತಿಯನ್ನು ಬಲಿಕೊಟ್ಟ ರಫೇಲ್ ಹಗರಣಕ್ಕಾಗಿ ಪ್ರಧಾನಿ ನರೇಂದ್ರ ಮೋದಿಯೇ ರಾಜೀನಾಮೆ ನೀಡಬೇಕಾಗಿದೆ. ಇವೆಲ್ಲವನ್ನು ಎಂ. ಜೆ. ಅಕ್ಬರ್ ರಾಜೀನಾಮೆಯಲ್ಲಿ ತುಂಬಿಸುವುದಕ್ಕೆ ಬಿಜೆಪಿ ತುದಿಗಾಲಲ್ಲಿ ನಿಂತಿದೆ ಎನ್ನುವುದನ್ನು ನಾವು ಮರೆಯಬಾರದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News