ಮೈಕ್ರೊಸಾಫ್ಟ್ ಸಹಸಂಸ್ಥಾಪಕ ಪಾಲ್ ಅಲೆನ್ ಇನ್ನಿಲ್ಲ

Update: 2018-10-16 04:03 GMT

ವಾಷಿಂಗ್ಟನ್, ಅ.16:ಬಿಲ್ ಗೇಟ್ಸ್ ಜತೆಗೆ ಮೈಕ್ರೊಸಾಫ್ಟ್ ಕಂಪನಿ ಹುಟ್ಟುಹಾಕಿದ್ದ ಅವರ  ಬಾಲ್ಯದ ಸ್ನೇಹಿತ ಪಾಲ್ ಜಿ.ಅಲೆನ್ ಸೋಮವಾರ ನಿಧನರಾದರು. ಅವರಿಗೆ 65 ವರ್ಷ ವಯಸ್ಸಾಗಿತ್ತು.

ಕೋಟ್ಯಂತರ ಡಾಲರ್ ಆಸ್ತಿ ಹೊಂದಿರುವ ಅಲೆನ್ ಸಂರಕ್ಷಣೆ, ಬಾಹ್ಯಾಕಾಶ ಯಾನ, ಕಲೆ ಮತ್ತು ಸಂಸ್ಕೃತಿ ಹಾಗೂ ವೃತ್ತಿಪರ ಕ್ರೀಡಾಕ್ಷೇತ್ರಕ್ಕೆ ಗಣನೀಯ ದೇಣಿಗೆ ನೀಡಿದ್ದರು. ಅವರು ನಾನ್-ಹಾಕಿನ್ಸ್ ಲಿಂಫೋಮಾ ಕಾಯಿಲೆಯಿಂದ ಬಳಲುತ್ತಿದ್ದರು ಎಂದು ಅವರ ವಲ್ಕ್ಯಾನ್ ಇನ್‌ಕಾರ್ಪೊರೇಷನ್ ಕಂಪನಿ ಪ್ರಕಟಿಸಿದೆ.

"ಅತ್ಯಂತ ಹಳೆಯ ಮತ್ತು ಆತ್ಮೀಯ ಸ್ನೇಹಿತನನ್ನು ಕಳೆದುಕೊಂಡಿರುವುದು ತೀವ್ರ ನೋವು ತಂದಿದೆ" ಎಂದು ಗೇಟ್ಸ್ ಪ್ರತಿಕ್ರಿಯಿಸಿದ್ದಾರೆ. ಬಹುಶಃ ಅಲೆನ್ ಇಲ್ಲದಿದ್ದರೆ, ಕಂಪ್ಯೂಟರ್‌ಗಳೇ ಇರುತ್ತಿರಲಿಲ್ಲ ಎಂದು ಬಣ್ಣಿಸಿದ್ದಾರೆ.

"ಪಾಲ್ ಒಂದು ಕಂಪನಿಯನ್ನು ಮಾತ್ರ ಸ್ಥಾಪಿಸಿಲ್ಲ. ತಮ್ಮ ಬುದ್ಧಿಮತ್ತೆ ಮತ್ತು ಪ್ರೀತಿಯನ್ನು ಜನರ ಜೀವನ ಸುಧಾರಣೆ ಮತ್ತು ವಿಶ್ವಾದ್ಯಂತ ಸಮುದಾಯಗಳನ್ನು ಸಬಲಗೊಳಿಸುವ ಕಾರ್ಯಕ್ಕೆ ವಿನಿಯೋಗಿಸಿದ್ದರು. ಅದು ಒಳ್ಳೆಯದಕ್ಕೆ ಅರ್ಹ ಎಂದಾದರೆ ನಾವದನ್ನು ಮಾಡಲೇಬೇಕು ಎಂದು ಅವರು ಹೆಮ್ಮೆಯಿಂದ ಹೇಳುತ್ತಿದ್ದರು" ಎಂದು ಗೇಟ್ಸ್ ವಿವರಿಸಿದ್ದಾರೆ.

"ಅಲೆನ್ ಅವರು ಕಂಪನಿ, ಸಮುದಾಯ ಹಾಗೂ ಉದ್ಯಮಕ್ಕೆ ನೀಡಿದ ಕೊಡುಗೆ ಅನನ್ಯ" ಎಂದು ಮೈಕ್ರೊಸಾಫ್ಟ್ ಸಿಇಓ ಸತ್ಯ ನಾದೆಲ್ಲಾ ಪ್ರತಿಕ್ರಿಯಿಸಿದ್ದಾರೆ. ಅಪೂರ್ವ ಕ್ರೀಡಾಪ್ರೇಮಿಯೂ ಆಗಿದ್ದ ಅಲೆನ್, ಪೋರ್ಟ್‌ಲ್ಯಾಂಡ್ ಟ್ರಯಲ್ ಬ್ಲೇಝರ್ಸ್‌ ಮತ್ತು ಸಿಯಾಟೆಲ್ ಸೀಹಾಕ್ಸ್ ತಂಡಗಳ ಮಾಲಕರೂ ಆಗಿದ್ದರು.

ಉತ್ತರ ಸಿಯಾಟೆಲ್‌ನಲ್ಲಿ ಖಾಸಗಿ ಶಾಲೆಗೆ ಹೋಗುವ ವೇಳೆ ಅಲೆನ್ ಹಾಗೂ ಗೇಟ್ಸ್ ಪರಸ್ಪರ ಭೇಟಿಯಾಗಿ ಸ್ನೇಹಿತರಾಗಿದ್ದರು. ಬಳಿಕ ಇಬ್ಬರೂ ವಿಶ್ವದ ಪ್ರತೀ ಮನೆಯೂ ಕಂಪ್ಯೂಟರ್ ಹೊಂದಿರಬೇಕು ಎಂಬ ಮಹದಾಸೆಯನ್ನು ಹೊಂದಿ ಈ ನಿಟ್ಟಿನಲ್ಲಿ ಕಾರ್ಯನಿರ್ವಹಿಸುವ ಸಲುವಾಗಿ ಕಾಲೇಜು ಶಿಕ್ಷಣವನ್ನು ಅರ್ಧದಲ್ಲೇ ತೊರೆದಿದ್ದರು.

ಗೇಟ್ಸ್ ಅವರು ತಮ್ಮ ಸಾರ್ಟ್‌ಅಪ್ ಕಂಪನಿಗೆ ಪೂರ್ಣಾವಧಿ ಸೇವೆ ಒದಗಿಸುವ ದೃಷ್ಟಿಯಿಂದ ಹಾರ್ವರ್ಡ್ ವಿವಿ ಶಿಕ್ಷಣವನ್ನು ಅರ್ಧಕ್ಕೆ ನಿಲ್ಲಿಸಿದ್ದರು. ಅಂತೆಯೇ ಅಲೆನ್ ವಾಷಿಂಗ್ಟನ್ ಸ್ಟೇಟ್ ಯುನಿವರ್ಸಿಟಿ ತೊರೆದು ಮೈಕ್ರೊಸಾಫ್ಟ್ ಕಂಪನಿ ಮುನ್ನಡೆಸಿದರು.

ನ್ಯೂ ಮೆಕ್ಸಿಕೋದ ಅಲ್ಬುಕರ್ಕ್‌ನಲ್ಲಿ ತಮ್ಮ ಹೊಸ ಕಂಪನಿಯನ್ನು ಆರಂಭಿಸಿದರು. ಕಂಪ್ಯೂಟರ್ ಕಾರ್ಯನಿರ್ವಹಿಸಲು ಅಗತ್ಯವಾದ ಕಂಪ್ಯೂಟರ್ ಲ್ಯಾಂಗ್ವೇಜ್ ಇವರ ಮೊಟ್ಟಮೊದಲ ಉತ್ಪನ್ನವಾಗಿತ್ತು. ಎಂಎಸ್-ಬೇಸಿಕ್ ಉತ್ಪನ್ನದ ಮಾರಾಟದ ಯಶಸ್ಸಿನ ಬಳಿಕ ತಮ್ಮ ವಹಿವಾಟನ್ನು 1979ರಲಲ್ಲಿ ವಾಷಿಂಗ್ಟನ್‌ನ ಬೆಲ್ಲೇವ್‌ಗೆ ಸ್ಥಳಾಂತರಿಸಿದ್ದರು. 1980ರಲ್ಲಿ ಐಬಿಎಂ ಕಾರ್ಪೊರೇಷನ್, ವೈಯಕ್ತಿಕ ಕಂಪ್ಯೂಟರ್ ಉತ್ಪಾದನೆ ಆರಂಭಿಸಿ, ಆಪರೇಟಿಂಗ್ ಸಿಸ್ಟಂ ಒದಗಿಸುವಂತೆ ಮೈಕ್ರೊಸಾಫ್ಟ್‌ಗೆ ಮನವಿ ಮಾಡಿದಾಗ ಮೈಕ್ರೊಸಾಫ್ಟ್ ಉದ್ಯಮ ಹೊಸ ಎತ್ತರಕ್ಕೆ ತಲುಪಿತು. ವಾಸ್ತವವಾಗಿ ಈ ಕಂಪನಿ ಆಪರೇಟಿಂಗ್ ಸಿಸ್ಟಮ್ ಸಂಶೋಧನೆ ಮಾಡಿಲ್ಲ. ಐಬಿಎಂನ ಅಗತ್ಯ ಪೂರೈಸುವ ಸಲುವಾಗಿ 50 ಸಾವಿರ ಡಾಲರ್ ವೆಚ್ಚದಲ್ಲಿ, ಟಿಮ್ ಪೀಟರ್‌ಸನ್ ಎಂಬುವವರು ಸಿದ್ಧಪಡಿಸಿದ್ದ ಕ್ಯೂಡಾಸ್ ಖರೀದಿತ್ತು. ಅದನ್ನು ಬಳಿಕ ಡಾಸ್ (ಡೆಸ್ಕ್ ಆಪರೇಟಿಂಗ್ ಸಿಸ್ಟಂ) ಎಂದು ಕರೆಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News