​ಲೈಂಗಿಕ ಕಿರುಕುಳ ಆರೋಪ: ಕಬಡ್ಡಿ ಕೋಚ್ ನೇಣಿಗೆ ಶರಣು

Update: 2018-10-16 04:09 GMT

ಬೆಂಗಳೂರು, ಅ.16: ಭಾರತೀಯ ಕ್ರೀಡಾ ಪ್ರಾಧಿಕಾರದ ಉತ್ತರ ಬೆಂಗಳೂರು ಕೇಂದ್ರದಲ್ಲಿ ಕೋಚ್ ಆಗಿದ್ದ ವೇಳೆ 13 ವರ್ಷದ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪಕ್ಕಾಗಿ ಅಮಾನತುಗೊಂಡಿದ್ದ ಹಿರಿಯ ಕಬಡ್ಡಿ ಕೋಚ್ ರುದ್ರಪ್ಪ ಹೊಸಮನಿ ಹೋಟೆಲ್ ಕೊಠಡಿಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅವರ ಮೃತದೇಹ ಸೋಮವಾರ ಪತ್ತೆಯಾಗಿದೆ.

ಪ್ರಾಧಿಕಾರದ ತರಬೇತಿ ಕೇಂದ್ರದಲ್ಲಿ ಕೋಚ್ ಆಗಿದ್ದ ಇವರನ್ನು ಇಲಾಖಾ ವಿಚಾರಣೆಗೆ ಗುರಿಪಡಿಸಿ ಕಳೆದ ವಾರ ಸೇವೆಯಿಂದ ಅಮಾನತು ಮಾಡಲಾಗಿತ್ತು. ಹೊಸಮನಿ, ರವಿವಾರ ದಾವಣಗೆರೆ ಜಿಲ್ಲೆ ಹರಿಹರದ ಹೋಟೆಲ್‌ನಲ್ಲಿ ಕೊಠಡಿ ಪಡೆದಿದ್ದರು. ಆದರೆ ಕೊಠಡಿ ಪಡೆದ ಬಳಿಕ ಹೊರಬಾರದಿರುವುದ್ದನ್ನು ಗಮನಿಸಿದ ಹೋಟೆಲ್ ಸಿಬ್ಬಂದಿ ಪೊಲೀಸರಿಗೆ ದೂರು ನೀಡಿದರು. ಪೊಲೀಸರು ಬಾಗಿಲು ಒಡೆದು ನೋಡಿದಾಗ ಮೃತದೇಹ ಪತ್ತೆಯಾಗಿದೆ.

"ನನಗೆ ತೀರಾ ಆಘಾತವಾಗಿದೆ..ಈ ಕಾರಣದಿಂದ ನನ್ನನ್ನು ಕ್ಷಮಿಸಿ" ಎಂಬ ಬರಹ ಇರುವ ಆತ್ಮಹತ್ಯೆ ಟಿಪ್ಪಣಿ ಸಿಕ್ಕಿದೆ.
ಜತೆಗೆ ಪತ್ನಿ ದೇವಿಕಾ, ಮಗ ರಾಕೇಶ್, ನಿಕಟ ಬಂಧುಗಳು ಹಾಗೂ ಸ್ನೇಹಿತರನ್ನು ಉದ್ದೇಶಿಸಿಯೂ ಒಂದು ಪತ್ರ ಬರೆದಿಟ್ಟಿದ್ದರು. "ತಮ್ಮ ಕೃತ್ಯಕ್ಕೆ ಅವರು ಕ್ಷಮೆ ಯಾಚಿಸಿದ್ದಾರೆ. ತಾನು ಅಸಹಾಯಕ. ಅಮ್ಮನನ್ನು ಚೆನ್ನಾಗಿ ನೋಡಿಕೊಳ್ಳುವಂತೆ ಮಗನನ್ನು ಕೋರಿದ್ದು, ತನ್ನ ದೇಹದಾನ ಮಾಡುವಂತೆಯೂ ಸೂಚಿಸಿದ್ದಾರೆ" ಎಂದು ಪೊಲೀಸ್ ಮೂಲಗಳು ಹೇಳಿವೆ.

ಸಾಯ್ ಕ್ಯಾಂಪಸ್‌ನ ಕಬಡ್ಡಿ ಅಂಕಣದ ಬಳಿಯ ಡ್ರೆಸ್ಸಿಂಗ್ ಕೊಠಡಿಯಲ್ಲಿ ಅಕ್ಟೋಬರ್ 9ರಂದು ಲೈಂಗಿಕ ಕಿರುಕುಳ ನೀಡಿದ್ದಾಗಿ ಬಾಲಕಿ ಆಪಾದಿಸಿದ್ದಳು. ಬಾಲಕಿ ಚೀರಿಕೊಂಡು ಹೊರಕ್ಕೆ ಓಡಿ ಬಂದಿದ್ದಳು. ಬಳಿಕ ವಿಷಯವನ್ನು ಮನೆಯವರಿಗೆ ತಿಳಿಸಿದಾಗ ಸಂಬಂಧಿಕರು ಹೊಸಮನಿ ಮೇಲೆ ಹಲ್ಲೆ ನಡೆಸಿದ್ದರು. ಘಟನೆ ಬಗ್ಗೆ ಅಕ್ಟೋಬರ್ 10ರಂದು ಇಲಾಖಾ ವಿಚಾರಣೆಗೆ ಆದೇಶಿಸಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News