ರಫೇಲ್ ಒಪ್ಪಂದಕ್ಕೆ ರಿಲಯನ್ಸ್ ಅನಿವಾರ್ಯವಾಗಿತ್ತು: ಡಸಾಲ್ಟ್ ನ 2 ಟ್ರೇಡ್ ಯೂನಿಯನ್ ಗಳ ದಾಖಲೆಗಳಿಂದ ಬಹಿರಂಗ

Update: 2018-10-16 07:02 GMT

ಪ್ಯಾರಿಸ್, ಅ.16: ಫ್ರಾನ್ಸ್ ನ ವಿಮಾನಯಾನ ಕ್ಷೇತ್ರದ ಬ್ಲಾಗ್ ಪೋರ್ಟಲ್ ನಲ್ಲಿ ಎರಡು  ಟ್ರೇಡ್ ಯೂನಿಯನ್ ದಾಖಲೆಗಳ ಚಿತ್ರಗಳು ಪ್ರಕಟಗೊಂಡಿದ್ದು, ಭಾರತದಲ್ಲಿ 59,000 ಕೋಟಿ ರೂ. ರಫೇಲ್ ಒಪ್ಪಂದದ ಬಗ್ಗೆ ಈಗಾಗಲೇ ಎದ್ದಿರುವ ವಿವಾದದ ಬೆಂಕಿಗೆ ತುಪ್ಪ ಸುರಿಯುವ ಸಾಧ್ಯತೆ ಇದೆ.

ಅನಿಲ್ ಅಂಬಾನಿಯ ರಿಲಯನ್ಸ್ ಡಿಫೆನ್ಸ್ ಸಂಸ್ಥೆಗೆ  ಪ್ರಯೋಜನವುಂಟು ಮಾಡುವ ಉದ್ದೇಶದಿಂದಲೇ ಹಿಂದಿನ ಸರಕಾರ  ಖರೀದಿಸಲುದ್ದೇಶಿಸಿದ್ದ 126 ರಾಫೇಲ್ ಯುದ್ಧ ವಿಮಾನಗಳ ಬದಲಿಗೆ ಪ್ರಧಾನಿ ನರೇಂದ್ರ ಮೋದಿ 2016ರಲ್ಲಿ ಹೆಚ್ಚಿನ ದರದಲ್ಲಿ  36 ರಫೇಲ್ ಜೆಟ್ ಖರೀದಿಗೆ ಒಪ್ಪಂದಕ್ಕೆ ಸಹಿ ಹಾಕಿದ್ದರೆಂಬ ಆರೋಪ ಈಗಾಗಲೇ ಭಾರತದಲ್ಲಿ ರಾಜಕೀಯ ಕೋಲಾಹಲವನ್ನೇ ಎಬ್ಬಿಸಿದೆ.

ರಫೇಲ್ ಯುದ್ಧ ವಿಮಾನ ತಯಾರಿಕಾ ಸಂಸ್ಥೆ ಡಸಾಲ್ಟ್ ಇದರ ಎರಡು ಟ್ರೇಡ್ ಯೂನಿಯನ್‍ಗಳಾದ ಸಿಎಫ್‍ಡಿಟಿ ಹಾಗೂ ಸಿಜಿಟಿಗೆ ಸಂಬಂಧಿಸಿದ ದಾಖಲೆಗಳು ಇವಾಗಿದ್ದು, ಮೇ 11, 2017ರಂದು ನಡೆದ ಸಭೆಯ ನಡಾವಳಿಯ ವಿವರಗಳು ಇದರಲ್ಲಿದೆ.  ಈ ಸಭೆಯಲ್ಲಿ ಡಸಾಲ್ಟ್ ಏವ್ಯೇಷನ್ ಸಂಸ್ಥೆಯ ಎರಡನೇ ಅತ್ಯುನ್ನತ ಅಧಿಕಾರಿ ಲೋಯ್ಕ್  ಸೆಗಲೆನ್ನ್ ಅವರು  ತಮ್ಮ ಡಸಾಲ್ಟ್  ಹಾಗೂ ಅನಿಲ್ ಅಂಬಾನಿಯ ರಿಲಯನ್ಸ್ ಡಿಫೆನ್ಸ್ ಜತೆಗಿನ ಸಹಯೋಗದ ಬಗ್ಗೆ ಮಾತನಾಡಿದ್ದರು.

ಈ ಬ್ಲಾಗ್ ಎರಡೂ ದಾಖಲೆಗಳನ್ನು ಪರಾಮರ್ಶಿಸಲು ಹೋಗಿಲ್ಲವಾದರೂ  ರಿಲಯನ್ಸ್ ಸಂಸ್ಥೆಯನ್ನು  ತನ್ನ ಪಾಲುದಾರನಾಗಿ ಮಾಡಲು ಡಸಾಲ್ಟ್ ಗೆ ಒಪ್ಪಂದದ ಷರತ್ತಿನಂತೆ  ಹೇರಲಾಗಿತ್ತೇ ಎಂಬುದನ್ನು ಓದುಗರ ವಿವೇಚನೆಗೆ ಬಿಟ್ಟಿದೆ.

ಫ್ರಾನ್ಸ್ ಸರಕಾರಕ್ಕೆ ರಫೇಲ್ ಒಪ್ಪಂದಕ್ಕೆ ಸಂಬಂಧಿಸಿದಂತೆ ಅನಿಲ್ ಅಂಬಾನಿಯ ಕಂಪೆನಿಯನ್ನು ಆಯ್ಕೆ  ಮಾಡದೆ ಬೇರೆ ಮಾರ್ಗವಿರಲಿಲ್ಲ ಎಂದು ಫ್ರಾನ್ಸ್ ದೇಶದ ಮಾಜಿ ಅಧ್ಯಕ್ಷ ಫ್ರಾಂಸ್ವಾ ಒಲಾಂಡ್ ನೀಡಿದ ಸ್ಫೋಟಕ ಹೇಳಿಕೆಯ ಬೆನ್ನಿಗೇ ಸಿಎಫ್‍ ಡಿಟಿಯ ಅದೇ ದಾಖಲೆ ಫ್ರಾನ್ಸ್ ದೇಶದ ‘ಮೀಡಿಯಾಪಾರ್ಟ್’ನಲ್ಲಿ ಪ್ರಕಟಗೊಂಡಿತ್ತು. ಡಸಾಲ್ಟ್ ಸಂಸ್ಥೆಯ ಆಂತರಿಕ ದಾಖಲೆಯೊಂದು ಡಸಾಲ್ಟ್ ಹೇಳಿಕೆಯನ್ನು ದೃಢೀಕರಿಸಿದೆ ಎಂದು ‘ಮೀಡಿಯಾಪಾರ್ಟ್’ ಹೇಳಿದೆ.

ಆದರೆ ಈ ಆರೋಪವನ್ನು ಡಸಾಲ್ಟ್ ನಿರಾಕರಿಸಿದೆಯಲ್ಲದೆ, ದಾಖಲೆಯ ಪ್ರಕಾರ  ವಿಮಾನ ತಯಾರಿ ಸಂಬಂಧ ಭಾರತದಲ್ಲಿ ಹೂಡಿಕೆ  ಮಾಡುವ ಷರತ್ತು ಇತ್ತೇ ಹೊರತು ಅನಿಲ್ ಅಂಬಾನಿಯ ರಿಲಯನ್ಸ್ ಡಿಫೆನ್ಸ್ ಸಂಸ್ಥೆಯನ್ನೇ ಆರಿಸಬೇಕೆಂದೇನೂ ಇರಲಿಲ್ಲ ಎಂದು ಹೇಳಿದೆ.

ಆದರೆ ಸಭೆಯ ನಡಾವಳಿಯ ಮಾಹಿತಿ ಬೇರೆಯೇ ಚಿತ್ರಣ ನೀಡುತ್ತಿದೆ.

ಸಿಜಿಟಿ ಹೇಳಿಕೆ ಈ ರೀತಿಯಾಗಿದೆ- “ನಾಗ್ಪುರದಲ್ಲಿ ಡಸಾಲ್ಟ್ ರಿಲಯನ್ಸ್ ಏರೋಸ್ಪೇಸ್' ಸ್ಥಾಪಿಸುವ ‘ಮೇಕ್ ಇನ್ ಇಂಡಿಯಾ’ ಕಾರ್ಯಕ್ರಮದ ಬಗ್ಗೆ ನಮ್ಮ ಮುಂದೆ ಪ್ರಸ್ತುತ ಪಡಿಸಲಾಯಿತು. ಸೆಗಲೆನ್ನ್  ಅವರ ಪ್ರಕಾರ  ಈ ರಫ್ತು ಗುತ್ತಿಗೆ ಪಡೆಯಲು ಡಸಾಲ್ಟ್ ಏವ್ಯೇಷನ್ ಗೆ ಇದು ಅನಿವಾರ್ಯವೂ ಆಗಿತ್ತು. ಎರಡನೇ ಯೂನಿಯನ್ `ಸಿಎಫ್‍ಡಿಟಿ'ಯ ಹೇಳಿಕೆಯ ಪ್ರಕಾರ `ಮೇಕ್ ಇನ್ ಇಂಡಿಯಾ' ಈ ಒಪ್ಪಂದದ ಅನಿವಾರ್ಯ ಫಲವಾಗಿತ್ತು. ಇದನ್ನು ಈಡೇರಿಸಲು ರಿಲಯನ್ಸ್  ಜತೆ  ಸಹಯೋಗಕ್ಕೆ ಸೂಚಿಸಲಾಗಿತ್ತು.

ರಿಲಯನ್ಸ್ ಸಂಸ್ಥೆಯನ್ನೇ ಡಸಾಲ್ಟ್ ತನ್ನ ಭಾರತೀಯ ಪಾಲುದಾರನನ್ನಾಗಿಸಬೇಕೆಂಬ ಕಟ್ಟುಪಾಡನ್ನು ಈ ಒಪ್ಪಂದಕ್ಕೆ  ಸಹಿ ಹಾಕುವ ನಿಟ್ಟಿನಲ್ಲಿ ವಿಧಿಸಲಾಗಿತ್ತು ಎಂಬುದನ್ನೇ ಈ ಎರಡೂ ದಾಖಲೆಗಳು ತಿಳಿಸುತ್ತಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News