ಪ್ರತಿ ಮತಗಟ್ಟೆಗಳಲ್ಲಿ ವಿವಿಪ್ಯಾಟ್ ಕಡ್ಡಾಯ: ಬಿ.ಎಂ.ವಿಜಯಶಂಕರ್

Update: 2018-10-16 12:42 GMT

ಬೆಂಗಳೂರು, ಅ.16: ಲೋಕಸಭಾ ಚುನಾವಣಾ 2019ರ ಮತದಾನ ಪ್ರಕ್ರಿಯೆಗೆ ಪೂರ್ವಸಿದ್ಧತಾ ಕಾರ್ಯಗಳು ನಡೆಯುತ್ತಿದ್ದು, ಇದೇ ಮೊದಲ ಬಾರಿಗೆ ಬೆಂಗಳೂರು ನಗರ ವ್ಯಾಪ್ತಿಯ ಪ್ರತಿಯೊಂದು ಮತಗಟ್ಟೆಗೆ ವಿವಿಪ್ಯಾಟ್ ಕಡ್ಡಾಯವಾಗಿ ಅಳವಡಿಸಲಾಗುವುದು ಎಂದು ಬೆಂಗಳೂರು ನಗರ ಜಿಲ್ಲಾಧಿಕಾರಿ ಬಿ.ಎಂ.ವಿಜಯಶಂಕರ್ ಹೇಳಿದ್ದಾರೆ.

ಮಂಗಳವಾರ ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇಂದಿನಿಂದ ಬಿಇಎಲ್ ತಾಂತ್ರಿಕ ಸಿಬ್ಬಂದಿಗಳ ಸಹಯೋಗದೊಂದಿಗೆ ವಿದ್ಯುನ್ಮಾನ ಮತಯಂತ್ರಗಳ ಪ್ರಥಮ ಹಂತದ ತಪಾಸಣೆ(ಎಫ್‌ಎಲ್ಸಿ) ಪ್ರಾರಂಭಿಸಲಾಗಿದ್ದು, ಇವಿಎಂ ಕುರಿತು ಜನಪ್ರತಿನಿಧಿಗಳಿಗೆ ಅನುಮಾನಗಳಿದ್ದರೆ ಬಗೆ ಹರಿಸಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ ಎಂದು ತಿಳಿಸಿದರು.

ಮತದಾರರ ಸಂಖ್ಯೆ: ಬೆಂಗಳೂರು ನಗರ ಜಿಲ್ಲಾವ್ಯಾಪ್ತಿಯ ಏಳು ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 32,00,942 ಮತದಾರರಿದ್ದು, ಪುರುಷರು-16,95,134, ಮಹಿಳೆಯರು-15,05,808 ಇದ್ದಾರೆ. ಬೆಂಗಳೂರು ನಗರ ವ್ಯಾಪ್ತಿಯಲ್ಲಿ 7ವಿಧಾನಸಭಾ ಕ್ಷೇತ್ರಗಳಲ್ಲಿ ಒಟ್ಟು 2,997 ಮತಗಟ್ಟೆಗಳಿವೆ ಎಂದು ಅವರು ಮಾಹಿತಿ ನೀಡಿದರು.

ಕ್ಷೇತ್ರವಾರು ಮತಗಟ್ಟೆ:   ಯಲಹಂಕ ಕ್ಷೇತ್ರದಲ್ಲಿ-376ಮತಗಟ್ಟೆ, ಬ್ಯಾಟರಾಯನಪುರ-397, ಯಶವಂತಪುರ-461, ದಾಸರಹಳ್ಳಿ-409, ಮಹದೇವಪುರ-466, ಬೆಂಗಳೂರು ದಕ್ಷಿಣ-520, ಆನೇಕಲ್-368 ಮತಗಟ್ಟೆಗಳಿವೆ. 2019, ಜ.1ಕ್ಕೆ 18ವರ್ಷ ತುಂಬಿದ ಪ್ರತಿಯೊಬ್ಬರು ಮತದಾನಕ್ಕೆ ಅರ್ಹರಾಗಿದ್ದು, ವಯಸ್ಸಿನ ದೃಢೀಕರಣ ಪ್ರಮಾಣಪತ್ರ, ಎಸೆಸೆಲ್ಸಿ ಅಂಕಪಟ್ಟಿಯ ಪ್ರತಿಯನ್ನು ನಮೂನೆ-6ರಲ್ಲಿ ಲಗತ್ತಿಸಿ ಕಂದಾಯ ಇಲಾಖೆ, ಬೆಂಗಳೂರು ಒನ್ ಹಾಗೂ ಆನ್‌ಲೈನ್‌ನಲ್ಲಿ ನೋಂದಾಯಿಸಿಕೊಳ್ಳಬಹುದು ಎಂದು ಅವರು ಹೇಳಿದರು.

ಬೆಂಗಳೂರು ನಗರ ಜಿಲ್ಲಾ ವ್ಯಾಪ್ತಿಗೆ ಸಂಬಂಧಿಸಿದಂತೆ ಅ.10ರಂದು ಪರಿಷ್ಕೃತ ಕರಡು ಮತದಾರರ ಪಟ್ಟಿಯನ್ನು www.ceokarnataka.gov.in  ನಲ್ಲಿ ಪ್ರಕಟಿಸಲಾಗಿದ್ದು, 7ವಿಧಾನಸಭಾ ಕ್ಷೇತ್ರಗಳ ಮತದಾರರ ನೋಂದಣಾಧಿಕಾರಿಗಳ ಕಚೇರಿ ಮತ್ತು ಸಹಾಯಕ ಮತದಾರರ ನೋಂದಣಾಧಿಕಾರಿಗಳ ಕಚೇರಿಗಳಲ್ಲಿ ಸಾರ್ವಜನಿಕರು ಮತದಾರರ ಪಟ್ಟಿಯನ್ನು ಪರಿಶೀಲಿಸಲು ಅವಕಾಶ ಕಲ್ಪಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News