ಅ.31ರಂದು ಸರ್ದಾರ್ ಪಟೇಲ್ ಪ್ರತಿಮೆ ಉದ್ಘಾಟನೆ

Update: 2018-10-16 12:28 GMT

ಬೆಂಗಳೂರು, ಅ.16: ಗುಜರಾತಿನ ಸರ್ದಾರ್ ಸರೋವರ್ ಅಣೆಕಟ್ಟು ಬಳಿ ನಿರ್ಮಿಸಿರುವ ಮಾಜಿ ಉಪ ಪ್ರಧಾನಿ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ವಿಶ್ವದ ಅತಿದೊಡ್ಡ ಪ್ರತಿಮೆ(ಏಕತಾ ಪ್ರತಿಮೆ)ಯನ್ನು ಅ.31ರಂದು ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಲಿದ್ದಾರೆ ಎಂದು ಗುಜರಾತ್ ಸರಕಾರದ ಇಂಧನ ಸಚಿವ ಸೌರಭ್‌ ಪಟೇಲ್ ತಿಳಿಸಿದರು.

ಮಂಗಳವಾರ ನಗರದ ಖಾಸಗಿ ಹೊಟೇಲ್‌ನಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಅ.31ರಂದು ಸರ್ದಾರ್ ಪಟೇಲರ ಜನ್ಮದಿನ. ಆದುದರಿಂದ, ಅವತ್ತೇ 182 ಮೀಟರ್ ಎತ್ತರವಿರುವ ಸರ್ದಾರ್ ಪಟೇಲರ ಪ್ರತಿಮೆಯನ್ನು ಅನಾವರಣಗೊಳಿಸಲಾಗುವುದು ಎಂದರು.

ವಿಶ್ವದ ಅತೀ ಎತ್ತರದ ಈ ಪ್ರತಿಮೆ ನಿರ್ಮಾಣಕ್ಕಾಗಿ ದೇಶದ ಜನತೆಯು 5 ಸಾವಿರ ಮೆಟ್ರಿಕ್ ಟನ್ ಕಬ್ಬಿಣ ಮತ್ತು ಉಕ್ಕನ್ನು ದೇಣಿಗೆಯಾಗಿ ನೀಡಿದ್ದಾರೆ. 2332 ಕೋಟಿ ರೂ.ವೆಚ್ಚದಲ್ಲಿ 48 ತಿಂಗಳ ಪರಿಶ್ರಮದಿಂದ ಈ ಪ್ರತಿಮೆ ನಿರ್ಮಾಣ ಮಾಡಲಾಗಿದೆ. ಈ ಪ್ರತಿಮೆ ಕೆಳ ಭಾಗದಲ್ಲಿ 73 ಅಡಿ ಎತ್ತರದ ಸಂಗ್ರಹಾಲಯ ನಿರ್ಮಿಸಿದ್ದು, ಇದರಲ್ಲಿ ಸರ್ದಾರ್ ಪಟೇಲರ ಜೀವನ, ಚರಿತ್ರೆ ಸೇರಿದಂತೆ ಇನ್ನಿತರ ಮಹತ್ವದ ವಸ್ತುಗಳು, ಭಾವಚಿತ್ರಗಳನ್ನು ಇರಿಸಲಾಗಿದೆ ಎಂದು ಅವರು ವಿವರಿಸಿದರು.

ಭಾರತದಲ್ಲಿ ಕಂಚು ಭಾರಿ ಪ್ರಮಾಣದಲ್ಲಿ ಲಭ್ಯವಿಲ್ಲದ ಕಾರಣ ಗುತ್ತಿಗೆದಾರರು ಚೀನಾದಿಂದ ಕಂಚು ಆಮದು ಮಾಡಿಕೊಳ್ಳುವ ನಿರ್ಧಾರ ಕೈಗೊಂಡಿದ್ದರು. ಇದರಲ್ಲಿ ಗುಜರಾತ್ ಸರಕಾರದ ಪಾತ್ರವಿಲ್ಲ ಎಂದು ಸೌರಭ್‌ ಪಟೇಲ್ ಸ್ಪಷ್ಟಣೆ ನೀಡಿದರು.

ಏಕತಾ ಪ್ರತಿಮೆ ಅನಾವರಣ ಸಮಾರಂಭದಲ್ಲಿ ಪಾಲ್ಗೊಳ್ಳುವಂತೆ ರಾಜ್ಯಪಾಲ ವಜುಭಾಯಿವಾಲಾ ಹಾಗೂ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಗೆ ಆಹ್ವಾನ ನೀಡಲಾಗಿದೆ. ರಾಜ್ಯದ ಜನತೆಗೂ ಮಾಧ್ಯಮಗಳ ಮೂಲಕ ಗುಜರಾತ್ ಸರಕಾರದ ಪರವಾಗಿ ಅಧಿಕೃತ ಆಹ್ವಾನ ನೀಡುತ್ತಿದ್ದೇನೆ. ನವೆಂಬರ್ 1ರ ನಂತರ ಸಾರ್ವಜನಿಕರು ಗುಜರಾತ್‌ಗೆ ಭೇಟಿ ನೀಡಲಿ ಎಂದು ಅವರು ಮನವಿ ಮಾಡಿದರು.

ಗುಜರಾತ್‌ನಲ್ಲಿ ಬಿಹಾರ ಮೂಲದ ಕಾರ್ಮಿಕರ ವಿರುದ್ಧ ನಡೆಯುತ್ತಿರುವ ಸಂಘರ್ಷದ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸೌರಭ್‌ ಪಟೇಲ್, ಇದೊಂದು ರಾಜಕೀಯ ಸಂಚು. ಕೆಲವರು ಈ ಸಂಚು ರೂಪಿಸಿದ್ದಾರೆ ಎಂದರು.

ಗುಜರಾತ್‌ನಲ್ಲಿ ದೇಶದ ಬೇರೆ ಬೇರೆ ಭಾಗಗಳಿಂದ ಬಂದಿರುವ ಜನ ವಾಸ ಮಾಡುತ್ತಿದ್ದಾರೆ. ಗುಜರಾತ್ ರಾಜ್ಯದ ಅಭಿವೃದ್ಧಿಗೆ ಈ ಜನರ ಕೊಡುಗೆಯೂ ಇದೆ. ಘರ್ಷಣೆಯಿಂದ ಗುಜರಾತ್ ತೊರೆದಿರುವ ಬಿಹಾರಿಗಳು ಶೀಘ್ರವೇ ವಾಪಸ್ ಆಲಿದ್ದಾರೆ ಎಂದು ಅವರು ಹೇಳಿದರು.

ರಾಜ್ಯದಲ್ಲಿ ಪರಿಸ್ಥಿತಿ ನಿಯಂತ್ರಣದಲ್ಲಿದ್ದು, ಬಿಹಾರಿಗಳಿಗೆ ಸೂಕ್ತ ರಕ್ಷಣೆ ಒದಗಿಸುತ್ತೇವೆ. ಅವರ ದಿನನಿತ್ಯದ ಬದುಕಿಗೆ ಯಾವುದೆ ತೊಂದರೆ ಇಲ್ಲ. ಈ ಘರ್ಷಣೆಗೆ ಕಾರಣವಾದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಸೌರಭ್‌ ಪಟೇಲ್ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಗುಜರಾತ್‌ನ ಸಚಿವ ಜಯದ್ರತ್ ಸಿಂಗ್ ಪರ್ಮಾರ್, ಶಾಸಕರಾದ ಶೈಲೇಶ್, ಭರತ್‌ ಭಾಯ್ ಪಟೇಲ್, ಭಿಕಾಭಾಯ್ ಭರತ್, ಮಧು ಶ್ರೀವಾಸ್ತವ್, ಆರೋಗ್ಯ ಕಾರ್ಯದರ್ಶಿ ಜಯಂತಿ ರವಿ, ಅರಣ್ಯ ನಿಗಮದ ಜಂಟಿ ವ್ಯವಸ್ಥಾಪಕ ನಿರ್ದೇಶಕ ಬಿ.ಕೆ.ಸುಗೂರ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News