ಮಕ್ಕಳಿಗೆ ಮಾಹಿತಿ ನೀಡುವ ಛಾಯಾಚಿತ್ರ: ಎಚ್.ಡಿ.ದೇವೇಗೌಡ

Update: 2018-10-16 12:31 GMT

ಬೆಂಗಳೂರು, ಅ.16: ವನ್ಯಜೀವಿಗಳ ಛಾಯಾಚಿತ್ರ ಸಂಗ್ರಹ ಮಕ್ಕಳಿಗೆ ಸೂಕ್ತ ಮಾಹಿತಿ ನೀಡಲಿದೆ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅಭಿಪ್ರಾಯ ಪಟ್ಟರು.

ಮಂಗಳವಾರ ನಗರದ ಕುಮಾರಕೃಪಾದ ಚಿತ್ರಕಲಾ ಪರಿಷತ್‌ನಲ್ಲಿ ಕರ್ನಾಟಕ ಪ್ರವಾಸೋದ್ಯಮ ಇಲಾಖೆ ಆಯೋಜಿಸಿದ್ದ, ವನ್ಯಜೀವಿ ಛಾಯಾಗ್ರಾಹಕ ಲೋಕೇಶ್ ಮೊಸಳೆ ಅವರ ‘ಬನದ ಬದುಕು’ ವನ್ಯಜೀವಿ ಛಾಯಾಚಿತ್ರ ಪ್ರದರ್ಶನ ಉದ್ಘಾಟಿಸಿ ಅವರು ಮಾತನಾಡಿದರು.

ಲೋಕೇಶ್ ಮೊಸಳೆ ಅವರು ಪ್ರಾಣಿ ಪಕ್ಷಿಗಳನ್ನೊಳಗೊಂಡ ಛಾಯಾಚಿತ್ರಗಳನ್ನು ಸೆರೆ ಹಿಡಿದಿದ್ದಾರೆ. ನಾವು ಮಕ್ಕಳಿಗಾಗಿ ಖರೀದಿಸುವ ಉದ್ದೇಶವಿದೆ. ಇನ್ನೂ ಪೂರ್ಣ ಪ್ರಮಾಣದಲ್ಲಿ ಛಾಯಾಚಿತ್ರ ಸಂಗ್ರಹ ಕಾರ್ಯ ಮುಗಿದಿಲ್ಲ. ಇನ್ನೂ, ಹೆಚ್ಚಿನ ರೀತಿಯಲ್ಲಿ ವನ್ಯಜೀವಿಗಳ ಛಾಯಾಚಿತ್ರಗಳನ್ನು ಲೋಕೇಶ್ ಪ್ರದರ್ಶಿಸಬೇಕು ಎಂದು ನುಡಿದರು.

ಮಾಜಿ ಸಚಿವ ಪಿ.ಜಿ.ಆರ್.ಸಿಂಧ್ಯಾ ಮಾತನಾಡಿ, ನಿಸರ್ಗ ಮತ್ತು ಮನುಷ್ಯರ ಸಂಬಂಧ ಅರ್ಥ ಮಾಡಿಕೊಳ್ಳಲು ವನ್ಯಜೀವಿ ಛಾಯಾಚಿತ್ರ ಪ್ರದರ್ಶನ ಅನುಕೂಲವಾಗಿದೆ. ವನ್ಯಜೀವಿಗಳ ಛಾಯಾಚಿತ್ರ ತೆಗೆಯುವ ಸಾಹಸ ಸಾರ್ಥಕವಾಗಿದ್ದು, ಇಂತಹ ಛಾಯಾಚಿತ್ರ ಗ್ರಾಹಕರನ್ನು ಬೆಂಬಲ ನೀಡಬೇಕಿದೆ ಎಂದು ಹಾರೈಸಿದರು.

ಭಾರತೀಯ ವಿಜ್ಞಾನ ಕಾಂಗ್ರೆಸ್ ಅಧ್ಯಕ್ಷ ಪ್ರೊ.ರಂಗಪ್ಪ ಮಾತನಾಡಿ, ವಿಜ್ಞಾನಿ ತನ್ನ ಸಂಶೋಧನೆ ಪೂರ್ಣಗೊಳ್ಳುವವರೆಗೂ ತಾಳ್ಮೆಯಿಂದ ಕಾಯುವಂತೆ ವನ್ಯಜೀವಿ ಛಾಯಾಚಿತ್ರ ತೆಗೆಯಲು ಸಾಕಷ್ಟು ತಾಳ್ಮೆ ವಹಿಸಬೇಕಾಗುತ್ತದೆ. ಆಗ ಮಾತ್ರ ಯಶಸ್ವಿ ಛಾಯಾಚಿತ್ರ ತೆಗೆಯಲು ಸಾಧ್ಯವಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ಛಾಯಾಗ್ರಾಹಕ ಲೋಕೇಶ್ ಮೊಸಳೆ, ಕವಿಯತ್ರಿ ಸುಜಾತಾ, ಗ್ರಾವಿಟಿ ಒನ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಧನಂಜಯ ಬಸವರಾಜ್ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News