ಅ.23 ರೊಳಗೆ ನಗರದ ರಸ್ತೆ ಗುಂಡಿಗಳಿಗೆ ಮುಕ್ತಿ: ಮೇಯರ್ ಗಂಗಾಂಬಿಕೆ ಭರವಸೆ

Update: 2018-10-16 18:31 GMT

ಬೆಂಗಳೂರು, ಅ.9 : ನಗರದಾದ್ಯಂತ ಅ.23 ರೊಳಗೆ ಎಲ್ಲ ರಸ್ತೆಗಳ ಗುಂಡಿಗಳಿಗೆ ಮುಕ್ತಿ ನೀಡಲಾಗುತ್ತದೆ ಎಂದು ಮೇಯರ್ ಗಂಗಾಂಬಿಕೆ ಇಂದಿಲ್ಲಿ ಭರವಸೆ ನೀಡಿದ್ದಾರೆ.

ಮಂಗಳವಾರ ಕೆ.ಆರ್.ಪುರಂನ ವಿಜ್ಞಾನನಗರ ವಾರ್ಡ್‌ನ ಎಂಇಜೆ ಬಡಾವಣೆಯಲ್ಲಿ ವಿವಿಧ ಸೌಲಭ್ಯಗಳಿರುವ ಬಹುಪಯೋಗಿ ಕಟ್ಟಡ ಉದ್ಘಾಟಿಸಿ ಮಾತನಾಡಿದ ಅವರು, ನಗರದಲ್ಲಿ ರಸ್ತೆಗಳನ್ನು ಮುಚ್ಚಲು ಹೈಕೋರ್ಟ್ ಅ.23 ರಂದು ಕೊನೆ ದಿನ ನೀಡಿದೆ. ಹೀಗಾಗಿ, ಎಲ್ಲ ವಲಯಗಳ ಅಧಿಕಾರಿಗಳೊಂದಿಗೆ ಈಗಾಗಲೇ ಸಭೆ ನಡೆಸಿ ರಸ್ತೆ ಗುಂಡಿಗಳನ್ನು ಮುಚ್ಚಬೇಕು. ಅದುವರೆಗೂ ವಿಶ್ರಾಂತಿ ಪಡೆಯಬಾರದು ಎಂದು ಸೂಚನೆ ನೀಡಿದ್ದೇನೆ ಎಂದರು.

ನಗರದಲ್ಲಿ ಅಕಾಲಿಕವಾಗಿ ಮಳೆ ಸುರಿಯುತ್ತಿದೆ. ಮಳೆ ಬರದಿದ್ದರೆ ಕೋರ್ಟ್ ನೀಡಿರುವ ಗಡುವಿನೊಳಗೆ ಗುಂಡಿಗಳನ್ನು ಮುಚ್ಚುತ್ತೇವೆ. ಒಂದು ವೇಳೆ ಮಳೆ ಬಂದರೆ ಗುಂಡಿ ಮುಚ್ಚಲು ಹೆಚ್ಚಿನ ಸಮಯಾವಕಾಶ ಬೇಕಾಗುತ್ತದೆ. ಉಪ ಮುಖ್ಯಮಂತ್ರಿ ಹಾಗೂ ಕಮಿಷನರ್‌ರೊಂದಿಗೆ ಕಸ ವಿಲೇವಾರಿಗೆ ಸಂಬಂಧಿಸಿದಂತೆ ಟೆಂಡರ್ ಕರೆಯುವ ವಿಚಾರವನ್ನು ಚರ್ಚಿಸಿ ತೀರ್ಮಾನ ಮಾಡಲಾಗಿದೆ. ಟೆಂಡರ್ ಕರೆದ ಬಳಿಕ ಕಸದ ಸಮಸ್ಯೆಗೆ ಮುಕ್ತಿ ಸಿಗಲಿದೆ ಎಂದು ನುಡಿದರು.

ಕಳೆದ ಆರು ತಿಂಗಳಿಂದ ಮಹದೇವಪುರ ವಲಯ ವ್ಯಾಪ್ತಿಯಲ್ಲಿ ಪೌರ ಕಾರ್ಮಿಕರಿಗೆ ಸಂಬಳ ನೀಡಿಲ್ಲ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ವೇತನಕ್ಕೆ ಸಂಬಂಧಿಸಿದಂತೆ ಸಂಬಂಧಪಟ್ಟವರೊಂದಿಗೆ ಮಾತನಾಡಿ ಕೂಡಲೇ ವೇತನ ಕೊಡಿಸಲಾಗುತ್ತದೆ. ಒಂದೇ ಕಟ್ಟಡದಲ್ಲಿ ಬ್ಯಾಡ್ಮಿಂಟನ್ ಕೋರ್ಟ್, ಕಂದಾಯ ಇಲಾಖೆ, ಎಂಜಿನಿಯರ್ ವಿಭಾಗ ನಿರ್ಮಾಣದ ಮೂಲಕ ಸಾರ್ವಜನಿಕರು ಬೇರೆ ಬೇರೆ ಕಡೆಗೆ ಅಲೆಯುವುದು ತಪ್ಪುತ್ತದೆ ಎಂದು ಹೇಳಿದರು.

ಶಾಸಕ ಬೈರತಿ ಬಸವರಾಜ ಕೆಲಸ ಮುಗಿಸುವವರೆಗೂ ಬಿಡುವುದಿಲ್ಲ. ಅದೇ ರೀತಿ ಈ ಕಟ್ಟಡವನ್ನು ಉದ್ಘಾಟಿಸಲು ಪಣ ತೊಟ್ಟು ಇಂದು ಉದ್ಘಾಟಿಸಿದ್ದಾರೆ ಎಂದು ಮೇಯರ್ ಶ್ಲಾಘಿಸಿದರು.

ಶಾಸಕ ಬೈರತಿ ಬಸವರಾಜ ಮಾತನಾಡಿ, ಮೂರು ವಾರ್ಡ್‌ಗಳ ಕಂದಾಯ ಇಲಾಖೆಯನ್ನು ಇದೇ ಕಟ್ಟಡಕ್ಕೆ ವರ್ಗಾಯಿಸಿರುವುದರಿಂದ ಬಿಬಿಎಂಪಿ ವತಿಯಿಂದ ತಿಂಗಳಿಗೆ ಕಟ್ಟುತ್ತಿದ್ದ ಒಂದೂವರೆ ಲಕ್ಷ ರೂ. ಉಳಿಸಿದಂತಾಗುತ್ತದೆ. ಮೂರು ವಾರ್ಡ್ ವ್ಯಾಪ್ತಿಯ ಎಲ್ಲಾ ಬಿಬಿಎಂಪಿ ಕಚೇರಿಗಳನ್ನು ಒಂದೇ ಬಿಲ್ಡಿಂಗ್‌ನಲ್ಲಿ ನಿರ್ಮಿಸಲಾಗಿದೆ ಎಂದು ಹೇಳಿದರು.

ಸಮಾರಂಭದಲ್ಲಿ ಪಾಲಿಕೆ ಸದಸ್ಯರಾದ ಎಸ್.ಜಿ.ನಾಗರಾಜ್, ಸುರೇಶ್, ಮಂಜುನಾಥ್, ಬ್ಲಾಕ್ ಅಧ್ಯಕ್ಷ ಮನೋಜ್, ವಾರ್ಡ್ ಅಧ್ಯಕ್ಷ ಕೃಷ್ಣಪ್ಪ, ಜ್ಯೋತಿಪ್ರಕಾಶ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News