ಬಿಬಿಎಂಪಿ ರೋಷಿಣಿ ಯೋಜನೆ : ಅನುತ್ತೀರ್ಣ ಶಿಕ್ಷಕರಿಗೆ ಗೇಟ್ ಪಾಸ್ ನೀಡಲು ಚಿಂತನೆ

Update: 2018-10-16 18:32 GMT

ಬೆಂಗಳೂರು, ಅ.16: ಬಿಬಿಎಂಪಿ ಶಾಲೆಗಳ ವ್ಯಾಪ್ತಿಯಲ್ಲಿನ ‘ಬಿಬಿಎಂಪಿ ರೋಷಿಣಿ’ ಅಡಿಯಲ್ಲಿನ ವಿದ್ಯಾರ್ಥಿಗಳ ಕಲಿಕಾ ಸಾಮರ್ಥ್ಯ ಹೆಚ್ಚಿಸುವ ಜೊತೆಗೆ ಶಿಕ್ಷಕರ ವೌಲ್ಯಮಾಪನ ಮಾಡಲಾಗುತ್ತಿದ್ದು, ಅದರಲ್ಲಿ ಅನುತ್ತೀರ್ಣರಾದವರಿಗೆ ಗೇಟ್ ಪಾಸ್ ನೀಡಲು ಚಿಂತನೆ ನಡೆಸಲಾಗಿದೆ.

ಬಿಬಿಎಂಪಿ ಒಡೆತನದ ಶಾಲಾ-ಕಾಲೇಜುಗಳನ್ನು ದತ್ತು ಪಡೆದು ಸುಮಾರು 500 ಕೋಟಿ ರೂ. ವೆಚ್ಚದಲ್ಲಿ ಸಮಗ್ರ ಅಭಿವೃದ್ಧಿಗೊಳಿಸಲು ಪಾಲಿಕೆಯ ಸಹಯೋಗದಲ್ಲಿ ಮೈಕ್ರೋಸಾಫ್ಟ್ ಹಾಗೂ ಟೆಕ್ ಅನಂತ್ ಗಾರ್ಡ್ ಸಂಸ್ಥೆಗಳು ರೋಷಿಣಿ ಎಂಬ ಯೋಜನೆ ರೂಪಿಸಿವೆ. ಅದರಂತೆ ಯೋಜನೆ ಜಾರಿಗೆ ಈಗಾಗಲೇ ಪಾಲಿಕೆಯೊಂದಿಗೆ ಒಪ್ಪಂದ ಮಾಡಿಕೊಂಡಿರುವ ಸಂಸ್ಥೆಗಳು, ಯೋಜನೆ ಅನುಷ್ಠಾನಕ್ಕೆ ಸಿದ್ಧತೆ ನಡೆಸಿವೆ.

ದತ್ತು ಪಡೆಯುವ ಶಾಲೆಗಳಿಗೆ ಮೂಲಭೂತ ಸೌಲಭ್ಯ ನೀಡುವುದಷ್ಟೇ ಅಲ್ಲದೆ, ಅಲ್ಲಿನ ವಿದ್ಯಾರ್ಥಿಗಳ ಶೈಕ್ಷಣಿಕ ಗುಣಮಟ್ಟ ಹೆಚ್ಚಳ ಮಾಡುವುದು ಈ ಯೋಜನೆಯ ಉದ್ದೇಶ. ಇದರ ಜತೆಗೆ, ಯೋಜನೆಯಲ್ಲಿ ಶಿಕ್ಷಕರ ಪಾತ್ರ ಮುಖ್ಯವಾಗಿರುವುದರಿಂದ ಅವರಿಗೂ ಅರ್ಹತಾ ಪರೀಕ್ಷೆ ನಡೆಸಲು ಚಿಂತಿಸಿದ್ದು, ಅದರಲ್ಲಿ ಅನುತ್ತೀರ್ಣರಾದವರನ್ನು ಕೈಬಿಡಲು ಪಾಲಿಕೆ ಮುಂದಾಗಿದೆ.

ಪಾಲಿಕೆಯ ಶಾಲಾ-ಕಾಲೇಜುಗಳಲ್ಲಿ ಕೆಲಸ ಮಾಡುವ ಶಿಕ್ಷಕರಿಗೆ ಮೈಕ್ರೋಸಾಫ್ಟ್ ಹಾಗೂ ಟೆಕ್ ಅನಂತ್ ಗಾರ್ಡ್ ಸಂಸ್ಥೆಗಳು 21ನೇ ಶತಮಾನದ ಕಲಿಕಾ ಸೌಲಭ್ಯಗಳು, ಸ್ಯಾಟಲೈಟ್ ಹಾಗೂ ಡಿಜಿಟಲ್ ಶಿಕ್ಷಣ ಮತ್ತು ಬೋಧನಾ ಕೌಶಲ್ಯ ಅಭಿವೃದ್ಧಿ ಕಾರ್ಯಾಗಾರ ನಡೆಸುತ್ತವೆ. ಅನಂತರ ಶಿಕ್ಷಕರ ಅರ್ಹತಾ ಪರೀಕ್ಷೆ ನಡೆಸಿ, ಪರೀಕ್ಷೆಯಲ್ಲಿ ಉತ್ತೀರ್ಣರಾದವರನ್ನು ಉಳಿಸಿಕೊಳ್ಳಲಾಗುತ್ತದೆ.

ಡಿಸೆಂಬರ್ ವೇಳೆಗೆ 6 ಮಾದರಿ ಶಾಲೆಗಳು ಪಾಲಿಕೆಯ ಶಾಲೆಗಳನ್ನು ದತ್ತು ಪಡೆದಿರುವ ಸಂಸ್ಥೆಗಳು ಪಾಲಿಕೆಯ ಆರು ಶಾಲಾ-ಕಾಲೇಜುಗಳಲ್ಲಿ ಯೋಜನೆಯನ್ನು ಸಂಪೂರ್ಣವಾಗಿ ಅನುಷ್ಠಾನಗೊಳಿಸಲಿವೆ. ಅದರಂತೆ ವರ್ಷದ ಅಂತ್ಯದೊಳಗೆ ಆರು ಶಾಲೆಗಳನ್ನು ಮಾದರಿ ಶಾಲೆಗಳಾಗಿ ರೂಪುಗೊಳಿಸುವ ಮೂಲಕ ವಿದ್ಯಾರ್ಥಿಗಳನ್ನು ಪಾಲಿಕೆಯ ಶಾಲೆಗಳ ಕಡೆಗೆ ಆಕರ್ಷಿಸಲಾಗುತ್ತದೆ ಎಂದು ಪಾಲಿಕೆ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಆಯ್ಕೆಯಾದ ಶಾಲೆಗಳು:
ಅಸ್ಟಿನ್ ಟೌನ್ ಬಾಲಕಿಯರ ಪ್ರೌಢಶಾಲೆ
ಗಾಂಧಿನಗರ ಪ್ರೌಢಶಾಲೆ
ಮೂಡಲಪಾಳ್ಯ ಪ್ರೌಢಶಾಲೆ
ಭೈರಸಂದ್ರ ಪ್ರೌಢಶಾಲೆ ಹಾಗೂ ಕಾಲೇಜು
ಜಯನಗರ 1ನೇ ಬ್ಲಾಕ್ ಪ್ರೌಢಶಾಲೆ
ಕ್ಲೀನ್ ಲ್ಯಾಂಡ್ ಟೌನ್ ಪ್ರೌಢಶಾಲೆ ಮತ್ತು ಕಾಲೇಜು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News