ಹೊರವರ್ತುಲ ರಸ್ತೆ ನಡುವಿನ ಮೆಟ್ರೋ ಮಾರ್ಗ : ಐಎಲ್ ಅಂಡ್ ಎಫ್‌ಎಸ್ ನಡುವಿನ ಟೆಂಡರ್ ರದ್ದು ಸಾಧ್ಯತೆ

Update: 2018-10-16 18:34 GMT

ಬೆಂಗಳೂರು, ಅ.16: ಹೊರವರ್ತುಲ ರಸ್ತೆ ನಡುವಿನ ಮೆಟ್ರೋ ಮಾರ್ಗದ ಟೆಂಡರ್ ಪಡೆದಿರುವ ಇನ್ಪಾಸ್ಟ್ರಕ್ಚರ್ ಲೀಸಿಂಗ್ ಅಂಡ್ ಫೈನಾನ್ಷಿಯನ್ ಸರ್ವೀಸಸ್ ಲಿ. (ಐಎಲ್ ಅಂಡ್ ಎಫ್‌ಎಸ್) ಆರ್ಥಿಕ ಸಂಕಷ್ಟದಲ್ಲಿರುವ ಹಿನ್ನೆಲೆಯಲ್ಲಿ ಬಿಎಂಆರ್‌ಸಿಎಲ್ ಟೆಂಡರ್ ಪ್ರಕ್ರಿಯೆಯನ್ನು ಮರುಪರಿಶೀಲಿಸಲು ಮುಂದಾಗಿದ್ದು, ಟೆಂಡರ್ ಪ್ರಕ್ರಿಯೆಯನ್ನೇ ರದ್ದು ಮಾಡಲು ಚಿಂತನೆ ನಡೆಸಿದೆ ಎನ್ನಲಾಗಿದೆ.

ಸಿಲ್ಕ್ ಬೋರ್ಡ್‌ನಿಂದ ಕೆ.ಆರ್.ಪುರ ಮಧ್ಯೆ ಮೆಟ್ರೋ ಮಾರ್ಗ ನಿರ್ಮಾಣ ಮಾಡುವ ಸಲುವಾಗಿ ಟೆಂಡರ್ ಕರೆಯಲಾಗಿತ್ತು. ಈ ಸಂದರ್ಭದಲ್ಲಿ ಕಂಪನಿಯು ಮೂರು ಪ್ಯಾಕೇಜ್‌ಗಳಲ್ಲಿ ಒಂದಕ್ಕೆ ಕನಿಷ್ಠ ದರ ನಮೂದಿಸಿತ್ತು. ಹೀಗಾಗಿ, ಟೆಂಡರ್ ಈ ಕಂಪನಿಗೆ ಸಿಕ್ಕಿತ್ತು. ಆದರೆ, ಕಂಪನಿ ಈಗ ಆರ್ಥಿಕ ಸಂಕಷ್ಟದಲ್ಲಿ ಸಿಲುಕಿ ಹಾಕಿಕೊಂಡಿದೆ. ಆದುದರಿಂದಾಗಿ ಬಿಎಂಆರ್‌ಸಿಎಲ್ ಟೆಂಡರ್ ಮರುಪರಿಶೀಲಿಸಲು ಮುಂದಾಗಿದೆ.

ಕಾಮಗಾರಿ ವಿಳಂಬ ಸಾಧ್ಯತೆ: ಟೆಂಡರ್ ಪ್ರಕ್ರಿಯೆಯನ್ನು ರದ್ದು ಮಾಡಿದರೆ ಕಾಮಗಾರಿ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇರುತ್ತದೆ. 2018 ರ ಫೆಬ್ರವರಿಯಲ್ಲಿ ಕರೆಯಲಾಗಿದ್ದ ಟೆಂಡರ್ ಇದುವರೆಗೂ ಅಂತಿಮವಾಗಿಲ್ಲ. ಇಂತಹ ಸಂದರ್ಭದಲ್ಲಿ ಮತ್ತೆ ಟೆಂಡರ್ ಕರೆದು, ಕಾಮಗಾರಿ ಆರಂಭ ಮಾಡಲು ಸಾಕಷ್ಟು ಕಾಲಾವಕಾಶ ಬೇಕಾಗುತ್ತದೆ ಎಂದು ಬಿಎಂಆರ್‌ಸಿಎಲ್ ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ.

ಹೊರ ವರ್ತುಲ ಭಾಗದಲ್ಲಿ ಹಾದುಹೋಗುವ 17 ಕಿ.ಮೀ ಉದ್ದದ ಈ ಮಾರ್ಗವು ನಮ್ಮ ಮೆಟ್ರೋ-2ಎ ನಲ್ಲಿ ಬರುತ್ತದೆ. ಇದಕ್ಕಾಗಿ 4,202 ಕೋಟಿ ರೂ.ಅಂದಾಜು ವೆಚ್ಚ ಮಾಡಲಾಗಿದೆ. ಸಿಲ್ಕ್ ಬೋರ್ಡ್-ಬೆಳ್ಳಂದೂರು ಹಾಗೂ ಬೆಳ್ಳಂದೂರು-ದೊಡ್ಡನೆಕ್ಕುಂದಿ ಮತ್ತು ದೊಡ್ಡನೆಕ್ಕುಂದಿ- ಕೆ.ಆರ್.ಪುರ ಸೇರಿದಂತೆ ಮೂರು ಪ್ಯಾಕೇಜ್‌ಗಳಲ್ಲಿ ಟೆಂಡರ್ ಕರೆಯಲಾಗಿತ್ತು.

ಮೂರರಲ್ಲಿಯೂ ಈ ಕಂಪನಿ ಭಾಗವಹಿಸಿತ್ತು. ಮೊದಲ ಪ್ಯಾಕೇಜ್‌ನಲ್ಲಿ ತಾಂತ್ರಿಕ ಬಿಡ್‌ನಲ್ಲಿ ಉತ್ತೀರ್ಣಗೊಂಡು, ಹಣಕಾಸು ಬಿಡ್‌ನಲ್ಲಿಯೂ ಕನಿಷ್ಠ ದರ ನಮೂದು ಮಾಡಿದೆ. ಇದೀಗ ನಿಯಮದ ಪ್ರಕಾರ ಈ ಕಂಪನಿಯನ್ನು ತಿರಸ್ಕರಿಸಿ, ಮತ್ತ್ತೊಂದು ಕಂಪನಿಗೆ ಟೆಂಡರ್ ನೀಡಲು ಸಾಧ್ಯವಿಲ್ಲ. ಹೀಗಾಗಿ, ಸಂಪೂರ್ಣ ಟೆಂಡರ್ ಪ್ರಕ್ರಿಯೆಯನ್ನು ರದ್ದು ಮಾಡುವುದು ಒಂದೇ ಮಾರ್ಗವಿದೆ.

ಕೆಂಗೇರಿ ಮಾರ್ಗದ ಟೆಂಡರ್‌ನಲ್ಲೂ ಭಾಗಿ: ಸಾಲದ ಸುಳಿಯಲ್ಲಿ ಸಿಲುಕಿರುವ ಐಎಲ್ ಅಂಡ್ ಎಫ್‌ಎಸ್ ಕಂಪನಿಯು ಕೆಂಗೇರಿ ಮಾರ್ಗದ ಮೆಟ್ರೋ ಯೋಜನೆಯ ಕಾಮಗಾರಿಯನ್ನೂ ನಡೆಸುತ್ತಿದೆ. ಇದರಲ್ಲಿ ವಿಳಂಬ ಮಾಡುತ್ತಿದೆ ಎಂಬ ಕಾರಣಕ್ಕಾಗಿ ದಂಡವನ್ನೂ ಪಾವತಿ ಮಾಡಲಾಗಿತ್ತು.
ಹೊರವರ್ತುಲ ಮಾರ್ಗದ ಮೂರು ಪ್ಯಾಕೇಜ್‌ಗಳ ಕಾಮಗಾರಿ ವೆಚ್ಚ ಅಂದಾಜು ಎರಡು ಸಾವಿರ ಕೋಟಿ ರೂ. ಇದ್ದು. ಇದರಲ್ಲಿ ಮೊದಲ ಪ್ಯಾಕೇಜ್ (ಸಿಲ್‌ಬೋರ್ಡ್-ಬೆಳ್ಳಂದೂರು) ಸುಮಾರು 500-600 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗುತ್ತಿದ್ದು, ಐಎಲ್ ಅಂಡ್ ಎಫ್‌ಎಸ್ ಶೇ.1ರಷ್ಟು ದರವನ್ನು ನಿಗದಿ ಮಾಡಿತ್ತು. ಅಲ್ಲದೆ, ಇದರ ಜತೆಗೆ ಐದು ಕಂಪನಿಗಳು ಟೆಂಡರ್‌ನಲ್ಲಿ ಪಾಲ್ಗೊಂಡಿದ್ದವು.

6.46 ಕಿ.ಮೀ ಹಳಿ ಮತ್ತು ಡಿಪೋ ನಿರ್ಮಾಣ ಸೇರಿದಂತೆ ಒಟ್ಟಾರೆ ಸುಮಾರು 8.8 ಕಿ.ಮೀ ಉದ್ದದ ಮೈಸೂರು ರಸ್ತೆ- ಕೆಂಗೇರಿ ಮಾರ್ಗದಲ್ಲಿ ಆರು ನಿಲ್ದಾಣಗಳು ಬರುತ್ತವೆ. ಈ ಪೈಕಿ ಪಟ್ಟಣಗೆರೆಯಿಂದ ಚಲ್ಲಘಟ್ಟ ಡಿಪೋದವರೆಗೆ ಮೆಟ್ರೋ ಎತ್ತರಿಸಿದ ರಚನೆಗಳ ನಿರ್ಮಾಣ ಕಾಮಗಾರಿಯನ್ನು ಗುತ್ತಿಗೆ ಪಡೆದ ಕಂಪನಿಯಿಂದು ಆರ್ಥಿಕ ಸಂಕಷ್ಟದಲ್ಲಿದೆ.

ಇದು ಪರೋಕ್ಷವಾಗಿ ಯೋಜನೆ ಮೇಲೆ ಪರಿಣಾಮ ಬೀರುತ್ತಿದ್ದು, 332 ಕೋಟಿ ರೂ. ವೆಚ್ಚದ ಈ ಯೋಜನೆಗೆ ಸಂಬಂಧಿಸಿದ ಕಾಮಗಾರಿ, ಅದಕ್ಕೆ ಬೇಕಾದ ವಸ್ತುಗಳ ಖರೀದಿ, ಕಾರ್ಮಿಕರ ವೇತನ ಪಾವತಿ ಸೇರಿದಂತೆ ಹತ್ತಾರು ರೀತಿಯಲ್ಲಿ ಇದು ಸಮಸ್ಯೆ ಆಗುತ್ತಿದೆ ಎಂದು ಬಿಎಂಆರ್‌ಸಿಎಲ್ ಅಧಿಕಾರಿಗಳು ಅಂದಾಜಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News