ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ಮೆಟ್ರೋ ಮಾರ್ಗ ವಿನ್ಯಾಸ ಬದಲು!

Update: 2018-10-16 18:35 GMT

ಬೆಂಗಳೂರು, ಅ.16 : ಕೆಂಪೇಗೌಡ ಅಂತರ್‌ರಾಷ್ಟ್ರಿಯ ವಿಮಾನ ನಿಲ್ದಾಣಕ್ಕೆ (ಕೆಐಎ) ಸಂಪರ್ಕ ಕಲ್ಪಿಸುವ ನಮ್ಮ ಮೆಟ್ರೊ ಮಾರ್ಗ ವಿನ್ಯಾಸ ಬದಲಾಗುವ ಸಾಧ್ಯತೆಯಿದೆ.

ರಾಮಕೃಷ್ಣ ಹೆಗಡೆ ನಗರದಿಂದ ಜಕ್ಕೂರು ನಡುವೆ ಮೆಟ್ರೊ ಮಾರ್ಗ ನಿರ್ಮಾಣವಾಗಬೇಕಾದ ಪ್ರದೇಶದಲ್ಲಿ ಪೆಟ್ರೋಲಿಯಂ ಪೈಪ್ ಹಾದು ಹೋಗಿದೆ. ಆದುದರಿಂದಾಗಿ, ಈ ಮಾರ್ಗದಲ್ಲಿ ಅನುಮತಿ ಸಿಗುವುದು ಕಷ್ಟವಾಗಿದೆ. ಹೀಗಾಗಿ, ಬಿಎಂಆರ್‌ಸಿಎಲ್ ನಾಗವಾರದಿಂದ ಹೆಗಡೆ ನಗರದ ಬದಲಾಗಿ ಹೆಬ್ಬಾಳ-ಜಕ್ಕೂರು ಮೂಲಕ ಕೆಐಎಗೆ ಸಂಪರ್ಕ ಕಲ್ಪಿಸಲು ಚಿಂತನೆ ನಡೆಸಿದೆ.

ಎರಡನೇ ಹಂತದ ಬಿ ಹೆಸರಿನಲ್ಲಿ ಅಂತರ್‌ರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಮೆಟ್ರೋ ಸಂಪರ್ಕ ಕಲ್ಪಿಸುವ ಉದ್ದೇಶದಿಂದ ಈ ಯೋಜನೆ ಕೈಗೆತ್ತಿಕೊಳ್ಳಲು ಸರಕಾರ ತೀರ್ಮಾನ ಮಾಡಿದೆ.

ಎರಡನೇ ಹಂತದಲ್ಲಿ ಗೊಟ್ಟಿಗೆರೆ-ನಾಗವಾರದ(ರೀಚ್ 6) ಮಾರ್ಗ ನಿರ್ಮಾಣವಾಗಿದೆ. ಇದನ್ನೇ ವಿಸ್ತರಿಸಿ ಹೆಗಡೆ ನಗರ, ಜಕ್ಕೂರು, ಯಲಹಂಕ, ಟ್ರಂಪೆಟ್ ಮೇಲುಸೇತುವೆ ಮೂಲಕ ಕೆಐಎಗೆ ಎಲಿವೇಟೆಡ್ ಮಾರ್ಗದ ಮೂಲಕ ನಿರ್ಮಾಣ ಮಾಡಲು ಬಿಎಂಆರ್‌ಸಿಎಲ್ ತಾತ್ಕಾಲಿಕ ವಿನ್ಯಾಸ ಸಿದ್ಧಪಡಿಸಿತ್ತು. ಅದಕ್ಕೆ ಸಚಿವ ಸಂಪುಟ ಒಪ್ಪಿಗೆ ನೀಡಿತ್ತು. 29 ಕಿ.ಮಿ. ಹೊಸ ಮಾರ್ಗಕ್ಕೆ 5,950 ಕೊಟಿ ರೂ. ವೆಚ್ಚವಾಗಲಿದೆ ಎಂದು ಅಂದಾಜಿಸಲಾಗಿತ್ತು.

ಪೈಪ್ ಲೈನ್ ಅಡ್ಡಿ: ಸಚಿವ ಸಂಪುಟದಲ್ಲಿ ಒಪ್ಪಿಗೆ ಸಿಕ್ಕಿದ ಹಿನ್ನೆಲೆಯಲ್ಲಿ ವಿಸ್ಕೃತ ಯೋಜನಾ ವರದಿ (ಡಿಪಿಆರ್) ಸಿದ್ಧಪಡಿಸಲು ಬಿಎಂಆರ್‌ಸಿಎಲ್ ಅಧಿಕಾರಿಗಳು ಸರ್ವೆ ಕೈಗೊಂಡಿದ್ದಾರೆ. ಈ ಸಂದರ್ಭದಲ್ಲಿ ಸುರಕ್ಷತೆ ದೃಷ್ಟಿಯಿಂದ ಇಲ್ಲಿರುವ ಪೈಪ್ ಲೈನ್ ಸುತ್ತಮುತ್ತ 9-10 ಕಿಮೀ ಯಾವುದೇ ಕಾಮಗಾರಿ ನಡೆಸುವಂತಿಲ್ಲ ಎಂದು ಹೇಳಲಾಗಿದೆ.

ಪೆಟ್ರೊಲಿಯಂ ಪೈಪ್‌ಲೈನ್ ಅಡ್ಡಿಯಾಗಿರುವ ಪ್ರದೇಶದಲ್ಲಿ ಕಾಮಗಾರಿ ನಡೆಸುವ ಕುರಿತು ತಾಂತ್ರಿಕ ಅಧಿಕಾರಿಗಳು ನಿರ್ಧಾರ ಕೈಗೊಳ್ಳಬೇಕಿದೆ. ಈ ಭಾಗದಲ್ಲಿ ಕಾಮಗಾರಿಗೆ ನಿರ್ಬಂಧವಿದೆ. ಈ ಹಿನ್ನೆಲೆಯಲ್ಲಿ ವಿನ್ಯಾಸ ಬದಲಿಸಬೇಕೊ ಅಥವಾ ಇತರೆ ಆಯ್ಕೆಗಳ ಬಗ್ಗೆ ಅಂತಿಮ ನಿರ್ಧಾರ ತೆಗೆದುಕೊಳ್ಳಬೇಕಾಗಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.

ವಿಮಾನ ನಿಲ್ದಾಣಕ್ಕೆ ಹೈಸ್ಪೀಡ್ ರೈಲು ಕಾಮಗಾರಿಗೆಂದು ರಾಷ್ಟ್ರಿಯ ಹೆದ್ದಾರಿ 44ರಲ್ಲಿ ವರ್ಷದ ಹಿಂದೆಯೆ ಜಾಗ ಮೀಸಲಿಡಲಾಗಿದೆ. ಹೆಬ್ಬಾಳದಿಂದ ರಾಷ್ಟ್ರಿಯ ಹೆದ್ದಾರಿಯ ಟ್ರಂಪೆಟ್ ಮೇಲುಸೇತುವೆವರೆಗೆ ಸ್ಥಳ ಮೀಸಲಿಟ್ಟಿದ್ದು, ರಾಷ್ಟ್ರಿಯ ಹೆದ್ದಾರಿ ಪ್ರಾಧಿಕಾರದ ವಶದಲ್ಲಿದೆ. ಆ ಜಾಗವನ್ನೆ ಬಿಎಂಆರ್‌ಸಿಎಲ್ ಮೆಟ್ರೊ ಮಾರ್ಗ ನಿರ್ಮಾಣಕ್ಕಾಗಿ ಉಪಯೋಗಿಸಿಕೊಳ್ಳಲಿದೆ.

ಜಕ್ಕೂರು ಬಳಿ ಎಲಿವೇಟೆಡ್: ಜಕ್ಕೂರಿನಿಂದ ರಾಷ್ಟ್ರಿಯ ಹೆದ್ದಾರಿ 44ರ (ಬಳ್ಳಾರಿ ರಸ್ತೆ) ಪಕ್ಕದಲ್ಲಿಯೆ ಈ ಮೆಟ್ರೊ ಮಾರ್ಗ ಸಾಗುತ್ತದೆ. ಈ ಹಿಂದೆ ವಿಮಾನ ನಿಲ್ದಾಣಕ್ಕೆ ಮೇಲು ಸೇತುವೆ ನಿರ್ಮಾಣ ಸಂದರ್ಭದಲ್ಲಿಯೆ ವಿರೋಧ ವ್ಯಕ್ತಪಡಿಸಲಾಗಿತ್ತು. ಹೊಸ ಮೆಟ್ರೊ ಮಾರ್ಗ ಈಗಿರುವ ಮೆಲುಸೇತುವೆಗಿಂತ ಕೆಳಮಟ್ಟದಲ್ಲಿ ಸಾಗಲಿದೆ. ಯಲಹಂಕ ವಾಯುನೆಲೆಯ ಬಳಿ ಎಲಿವೇಟೆಡ್ ಬದಲು ಭೂಮಟ್ಟದಲ್ಲೆ ಮೆಟ್ರೊ ಮಾರ್ಗ ಸಾಗಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News