ಯುವ ವಿದ್ಯಾರ್ಥಿಗಳಲ್ಲಿ ಪೌಷ್ಠಿಕಾಂಶದ ಕೊರತೆ: ಡಾ.ಕೆ.ನಾರಾಯಣ

Update: 2018-10-16 18:37 GMT

ಬೆಂಗಳೂರು, ಅ.16: ಆಧುನಿಕ ಜೀವನ ಶೈಲಿ ಹಾಗೂ ಆಹಾರ ಪದ್ಧತಿಯಲ್ಲಿ ಆಗುತ್ತಿರುವ ಬದಲಾವಣೆಯಿಂದಾಗಿ ಇತ್ತೀಚಿನ ವರ್ಷಗಳಲ್ಲಿ ಯುವ ವಿದ್ಯಾರ್ಥಿಗಳಲ್ಲಿ ಪೌಷ್ಠಿಕಾಂಶದ ಕೊರತೆ ಹೆಚ್ಚಾಗುತ್ತಿದೆ ಎಂದು ಯುವ ರೆಡ್‌ಕ್ರಾಸ್ ಘಟಕದ ಕಾರ್ಯಕ್ರಮಾಧಿಕಾರಿ ಡಾ.ಕೆ.ನಾರಾಯಣ ತಿಳಿಸಿದರು.
ನಗರದ ಕೆ.ಆರ್.ಪುರ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಯುವ ರೆಡ್‌ಕ್ರಾಸ್‌ಘಟಕ, ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಹಾಗೂ ಎನ್ನೆಸೆಸ್(ಸ್ವ ಆರ್ಥಿಕ ಘಟಕ)ದ ಜಂಟಿ ಆಶ್ರಯದಲ್ಲಿ ಭಾರತೀಯ ರೆಡ್‌ಕ್ರಾಸ್ ಸಂಸ್ಥೆ ವತಿಯಿಂದ ಆಯೋಜಿಸಿದ್ದ ರಕ್ತದಾನ ಶಿಬಿರದಲ್ಲಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಅವರು ಮಾತನಾಡಿದರು.

ಯುವಕ, ಯುವತಿಯರು ನಿಯಮಿತವಾಗಿ ರಕ್ತದಾನ ಮಾಡುವುದು ಆರೋಗ್ಯಕರ. ರಕ್ತದಾನದಿಂದ ದೇಹದಲ್ಲಿ ಹೊಸ ಚೈತನ್ಯ ಮೂಡುತ್ತದೆ, ಅಲ್ಲದೆ ಕ್ರೀಯಾಶೀಲತೆಯೂ ಹೆಚ್ಚುತ್ತದೆ. ಪ್ರತಿ ಮೂರು ತಿಂಗಳಿಗೊಮ್ಮೆ ರಕ್ತದಾನ ಮಾಡುವ ಅಭ್ಯಾಸ ಬೆಳೆಸಿಕೊಳ್ಳಬೇಕು ಎಂದು ಅವರು ಕರೆ ನೀಡಿದರು.
ರಕ್ತವನ್ನು ಕೃತಕವಾಗಿ ತಯಾರಿಸಲು ಸಾಧ್ಯವಿಲ್ಲ. ವಾಹನಗಳ ಸಂಖ್ಯೆ ಹೆಚ್ಚುತ್ತಿದ್ದಂತೆ ಅಪಘಾತಗಳ ಪ್ರಮಾಣವು ಹೆಚ್ಚುತ್ತಿದೆ. ರೋಗಿಗಳಿಗೆ ಪ್ರತಿನಿತ್ಯ ರಕ್ತದ ಅಗತ್ಯವಿರುತ್ತದೆ. ಆದುದರಿಂದ, ಆರೋಗ್ಯಕರವಾಗಿರುವವರು ನಿಯಮಿತವಾಗಿ ರಕ್ತದಾನ ಮಾಡುವುದರಿಂದ ಹಲವರಿಗೆ ಸಹಕಾರಿಯಾಗುತ್ತದೆ ಎಂದು ನಾರಾಯಣ ಹೇಳಿದರು.

ರಕ್ತದಾನ ಶಿಬಿರದಲ್ಲಿ 61 ಮಂದಿ ವಿದ್ಯಾರ್ಥಿಗಳು ರಕ್ತದಾನ ಮಾಡಿದರು. ಗ್ರಾಮೀಣ ಪ್ರದೇಶಗಳಿಂದ ಬಂದಂತಹ ಸುಮಾರು 400 ವಿದ್ಯಾರ್ಥಿಗಳು ಉಚಿತವಾಗಿ ರಕ್ತಗುಂಪು ತಪಾಸಣೆ ಮಾಡಿಸಿಕೊಂಡರು. ಸುಮಾರು 126 ವಿದ್ಯಾರ್ಥಿಗಳು ಪೌಷ್ಠಿಕಾಂಶ ಕೊರತೆಯಿಂದ ರಕ್ತದಾನ ಮಾಡಲು ಸಾಧ್ಯವಾಗಲಿಲ್ಲ ಎಂದು ಅವರು ತಿಳಿಸಿದರು.

ಈ ಶಿಬಿರದಲ್ಲಿ ಕಾಲೇಜಿನ ಪ್ರಾಂಶುಪಾಲ ಡಾ.ಚಂದ್ರಶೇಖರ್, ರೆಡ್‌ಕ್ರಾಸ್ ಸಂಸ್ಥೆಯ ವೈದ್ಯಾಧಿಕಾರಿಗಳಾದ ಡಾ.ನರೇಶ್‌ಬಾಬು, ಸತೀಶ್, ಶಿಬಿರದ ಸಂಚಾಲಕರಾದ ಎಂ.ಕೆ.ಲೋಕೇಶ್, ಗಣೇಶ್, ಪ್ರಾಧ್ಯಾಪಕರಾದ ಕೆ.ವಿಜಯ, ಡಾ.ಎಂ.ಸಿ.ಮಹೇಶ್‌ಕುಮಾರ್, ಕುಶಾಲಪ್ಪ, ಬಸವರಾಜ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News