ಸಚಿವ ಅಕ್ಬರ್ ವಿರುದ್ಧ ಸಾಕ್ಷ್ಯ ನುಡಿಯಲು ಮುಂದಾದ 20 ಪತ್ರಕರ್ತೆಯರು

Update: 2018-10-17 03:28 GMT

ಹೊಸದಿಲ್ಲಿ, ಅ.17: ವಿದೇಶಾಂಗ ವ್ಯವಹಾರಗಳ ಖಾತೆ ಸಚಿವ ಎಂ.ಜೆ.ಅಕ್ಬರ್, ತಮ್ಮ ಮೇಲೆ ಲೈಂಗಿಕ ಕಿರುಕುಳ ಆರೋಪ ಮಾಡಿದ ಪತ್ರಕರ್ತೆ ಪ್ರಿಯಾ ರಮಣಿ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿದ ಮರುದಿನವೇ 20 ಮಹಿಳಾ ಪತ್ರಕರ್ತರು ತಮ್ಮ ಸಹೋದ್ಯೋಗಿ ಬೆಂಬಲಕ್ಕೆ ನಿಂತಿದ್ದಾರೆ. ಅಕ್ಬರ್ ವಿರುದ್ಧ ಸಾಕ್ಷ್ಯ ನುಡಿಯಲು ಅವಕಾಶ ನೀಡುವಂತೆ ನ್ಯಾಯಾಲಯಕ್ಕೆ ಮನವಿ ಮಾಡಿದ್ದಾರೆ.

"ಮಾನನಷ್ಟ ಮೊಕದ್ದಮೆ ವಿಚಾರಣೆ ನಡೆಸುವ ನ್ಯಾಯಾಲಯ, ಲೈಂಗಿಕ ಕಿರುಕುಳಕ್ಕೆ ಸಂಬಂಧಿಸಿದಂತೆ ನಮ್ಮ ಸಾಕ್ಷ್ಯವನ್ನು ಕೂಡಾ ಪರಿಗಣಿಸಬೇಕು. ನಮ್ಮಲ್ಲಿ ಕೆಲವರ ವಿರುದ್ಧವೂ ಅರ್ಜಿದಾರರು ಲೈಂಗಿಕ ದೌರ್ಜನ್ಯ ಎಸಗಿದ್ದಾರೆ. ಇತರ ಸಹಿ ಮಾಡಿರುವ ಕೆಲವರು ಇದಕ್ಕೆ ಸಾಕ್ಷಿ" ಎಂದು 1990ರ ದಶಕದಲ್ಲಿ "ದ ಏಷ್ಯನ್ ಏಜ್" ಪತ್ರಿಕೆಯಲ್ಲಿ ಅಕ್ಬರ್ ಜತೆ ಕೆಲಸ ಮಾಡುತ್ತಿದ್ದ 20 ಮಹಿಳೆಯರು ಹೇಳಿಕೆ ನೀಡಿದ್ದಾರೆ.

ಹಲವು ಮಾಧ್ಯಮ ಸಂಸ್ಥೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಮಹಿಳೆಯರು ಮಾಜಿ ಸಂಪಾದಕರ ವಿರುದ್ಧ ಲೈಂಗಿಕ ಕಿರುಕುಳ ಮತ್ತು ಅಸಭ್ಯ ನಡವಳಿಕೆ ಬಗ್ಗೆ ದೂರು ನೀಡಿದ್ದಾರೆ. ಮೀ ಟೂ ಸಾಮಾಜಿಕ ಜಾಲತಾಣ ಅಭಿಯಾನದಿಂದ ಈ ಲೈಂಗಿಕ ದುರ್ನಡತೆ ಆರೋಪಗಳು ಹುಟ್ಟಿಕೊಂಡಿದ್ದವು.

"ಅಕ್ಬರ್ ಅವರ ಸ್ತ್ರೀದ್ವೇಷ ಸಂಸ್ಕೃತಿ, ಅವರ ಹುದ್ದೆಯ ಅರ್ಹತೆ ಮತ್ತು ಲೈಂಗಿಕ ಲಾಲಸೆಯಿಂದ ದೌರ್ಜನ್ಯ ಎಸಗುತ್ತಿದ್ದರು" ಎಂದು ಆಪಾದಿಸಲಾಗಿದೆ.

ಮಂಗಳವಾರವಷ್ಟೇ ಮತ್ತೊಬ್ಬ ಪತ್ರಕರ್ತೆ ತುಶಿತಾ ಪಟೇಲ್ ಅಕ್ಬರ್ ವಿರುದ್ಧ ದೂರು ನೀಡಿದ್ದು, ಹೋಟೆಲ್ ಕೊಠಡಿಗೆ ಕೆಲಸದ ನೆಪದಲ್ಲಿ ಕರೆಸಿಕೊಂಡು ಒಳ ಉಡುಪಿನಲ್ಲೇ ಬಾಗಿಲು ತೆರೆದಿದ್ದರು. ಆಗ ಟ್ರೈನಿ ಪತ್ರಕರ್ತೆಯಾಗಿದ್ದ ನನಗೆ 22 ವರ್ಷ. ಹೈದರಾಬಾದ್‌ನಲ್ಲಿ ಅಕ್ಬರ್ ಸಂಪಾದಕರಾಗಿದ್ದ ಪತ್ರಿಕೆಯಲ್ಲಿ ಕೆಲಸ ಮಾಡುವಾಗ ಎರಡು ಬಾರಿ ಅಸಭ್ಯವಾಗಿ ಲೈಂಗಿಕ ಚೇಷ್ಟೆ ಮಾಡಿದ್ದರು ಎಂದು ಆಪಾದಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News