ಒಬ್ಬಂಟಿಗಳಿಗೆ ಮುಚ್ಚಿದ ನಂದಿ ಬೆಟ್ಟದ ಬಾಗಿಲು

Update: 2018-10-17 03:48 GMT

ಬೆಂಗಳೂರು, ಅ.17: ರಾಜ್ಯ ರಾಜಧಾನಿಯಿಂದ ಕೇವಲ 60 ಕಿಲೋಮೀಟರ್ ದೂರ ಪ್ರಸಿದ್ಧ ಗಿರಿಧಾಮಕ್ಕೆ ಏಕಾಂತ ಬಯಸಿ ನೀವು ಒಬ್ಬಂಟಿಯಾಗಿ ಹೋಗಲು ನಿರ್ಧರಿಸಿದ್ದರೆ ನಿಮಗೊಂದು ಕೆಟ್ಟ ಸುದ್ದಿ ಕಾದಿದೆ. ಬೆಟ್ಟದಲ್ಲಿ ಆತ್ಮಹತ್ಯೆ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಒಬ್ಬಂಟಿಗಳಿಗೆ ಬೆಟ್ಟ ಪ್ರವೇಶವನ್ನು ನಿಷೇಧಿಸಿ ಚಿಕ್ಕಬಳ್ಳಾಪುರ ಜಿಲ್ಲಾಡಳಿತ ಆದೇಶ ಹೊರಡಿಸಿದೆ.

ಅಧಿಕಾರಿಗಳು ಹೇಳುವಂತೆ, ಬಹುತೇಕ ಆತ್ಮಹತ್ಯೆ ಸಂತ್ರಸ್ತರು ಇಲ್ಲಿಗೆ ಏಕಾಂಗಿಯಾಗಿ ಬಂದು, ಈ ಪ್ರಸಿದ್ಧ ವಿಹಾರಧಾಮದ ಆಕರ್ಷಕ ಬಿಂದುವಾದ ಟಿಪ್ಪು ಡ್ರಾಪ್‌ನಿಂದ ಹಾರಿ ಅತ್ಮಹತ್ಯೆಗೆ ಶರಣಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಒಬ್ಬಂಟಿಗಳಾಗಿ ಬರುವ ಜನರನ್ನು ಶುಲ್ಕ ಕೌಂಟರ್‌ನಲ್ಲಿ ತಡೆದು ವಾಪಸ್ ಕಳುಹಿಸಲಾಗುವುದು ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

ಟಿಪ್ಪು ಸುಲ್ತಾನ್ ಆಡಳಿತದ ಅವಧಿಯಲ್ಲಿ, ಮರಣ ದಂಡನೆ ಶಿಕ್ಷೆಗೆ ಗುರಿಯಾದವರನ್ನು ಇಲ್ಲಿಗೆ ಕರೆತಂದು ಪ್ರಪಾತಕ್ಕೆ ತಳ್ಳಲಾಗುತ್ತಿತ್ತು. ಈ ಜಾಗದಲ್ಲಿ ಪ್ರಸಕ್ತ ವರ್ಷ ಕೂಡಾ ಹಲವು ಆತ್ಮಹತ್ಯೆ ಪ್ರಕರಣಗಳು ವರದಿಯಾಗಿದ್ದವು.

ಆತ್ಮಹತ್ಯೆ ಸಂತ್ರಸ್ತರ ಆತ್ಮಹತ್ಯೆ ವಿಧಾನವನ್ನು ಅಧ್ಯಯನ ಮಾಡಿದ ಬಳಿಕ ಈ ನಿರ್ಧಾರಕ್ಕೆ ಬರಲಾಗಿದೆ ಎಂದು ಜಿಲ್ಲಾಧಿಕಾರಿ ಅನಿರುದ್ಧ್ ಶ್ರವಣ್ ಪಿ. ಹೇಳಿದ್ದಾರೆ. "ನಾವು ನಿಷೇಧಕ್ಕೆ ಪರವಾಗಿ ಇಲ್ಲ. ಆದರೆ ಆತ್ಮಹತ್ಯೆ ಮಾಡಿಕೊಳ್ಳಲು ಜನ ಇಲ್ಲಿಗೆ ಆಗಮಿಸುವುದಕ್ಕೆ ನಮ್ಮ ವಿರೋಧವಿದೆ. ಟಿಪ್ಪು ಡ್ರಾಪ್ ಬಳಿ ಒಬ್ಬ ಕಾವಲುಗಾರನನ್ನು ಖಾಯಂ ನಿಯೋಜಿಸಲಾಗಿದೆ. ಇಷ್ಟಾಗಿಯೂ ಪ್ರಪಾತಕ್ಕೆ ಹಾರುವ ಪ್ರಕರಣಗಳು ವರದಿಯಾಗುತ್ತಿವೆ" ಎಂದು ಅವರು ವಿವರಿಸಿದ್ದಾರೆ. ಕಳೆದ ತಿಂಗಳು ಜಿಲ್ಲಾಡಳಿತ, ಈ ವಿಹಾರಧಾಮವನ್ನು ಪ್ರವಾಸಿತಾಣವಾಗಿ ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ನಂದಿ ಸಂತೆಯನ್ನು ಆಯೋಜಿಸಿತ್ತು. ಆದರೆ ಪ್ರವಾಸಿಗಳಿಗೆ ಸರ್ಕಾರದ ಈ ಕ್ರಮ ಪಥ್ಯವಾಗಿಲ್ಲ.

"ವಾರಾಂತ್ಯದಲ್ಲಿ ನಾನು ಬೈಕ್‌ನಲ್ಲಿ ಸುತ್ತಮುತ್ತಲ ಪ್ರದೇಶಗಳಿಗೆ ಭೇಟಿ ನೀಡುತ್ತೇನೆ. ಇದರಲ್ಲಿ ನಂದಿಬೆಟ್ಟವೂ ಒಂದು. ಜನ ಆತ್ಮಹತ್ಯೆಗಾಗಿ ಬರುತ್ತಾರೆ ಎಂದಾದರೆ ಭದ್ರತಾ ವ್ಯವಸ್ಥೆ ಹೆಚ್ಚಿಸಬೇಕು. ವಿಶ್ವದ ಎಲ್ಲೂ ಇಂಥ ನಿಯಮಾವಳಿ ಇಲ್ಲ" ಎಂದು ಏಕಾಂತವನ್ನು ಇಷ್ಟಪಡುವ ಸಾಫ್ಟ್‌ವೇರ್ ಇಂಜಿನಿಯರ್ ವಿನೋದ್ ಹೇಳುತ್ತಾರೆ. ಎಂಜಿನಿಯರಿಂಗ್ ಘಟಕವೊಂದರ ನಿರ್ದೇಶಕ ಯಂಗ್ಚೆನ್ ಟಿಬೆಟ್ ಡೋಲ್ಕರ್ ಕೂಡಾ ಇದೇ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News