ಅನುದಾನಿತ ವಿದ್ಯಾಸಂಸ್ಥೆಗಳ ನಿವೃತ್ತ ನೌಕರರ ಪಿಂಚಣಿಗೆ ಬಿ.ಎಸ್.ಯಡಿಯೂರಪ್ಪ ಆಗ್ರಹ

Update: 2018-10-17 12:41 GMT

ಬೆಂಗಳೂರು, ಅ. 17: ಲಕ್ಷಾಂತರ ವಿದ್ಯಾರ್ಥಿಗಳ ಭವಿಷ್ಯ ರೂಪಿಸುವ ಅನುದಾನಿತ ವಿದ್ಯಾಸಂಸ್ಥೆಗಳ ನೌಕರರ ಭವಿಷ್ಯ ಪಿಂಚಣಿ ಸಿಗದೆ ಅತಂತ್ರವಾಗಿದ್ದು, ಕೂಡಲೇ ರಾಜ್ಯ ಸರಕಾರ ಸೂಕ್ತ ಕ್ರಮ ಕೈಗೊಳ್ಳುವಂತೆ ವಿರೋಧ ಪಕ್ಷದ ನಾಯಕ ಬಿ.ಎಸ್.ಯಡಿಯೂರಪ್ಪ ಆಗ್ರಹಿಸಿದ್ದಾರೆ.

ಬುಧವಾರ ನಗರದ ಸ್ವಾತಂತ್ರ ಉದ್ಯಾನವನದಲ್ಲಿ ಕರ್ನಾಟಕ ರಾಜ್ಯ ಅನುದಾನಿತ ವಿದ್ಯಾಸಂಸ್ಥೆಗಳ ಪಿಂಚಣಿ ನೌಕರರ ಸಂಘವು ನಡೆಸುತ್ತಿರುವ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿ, ಹೋರಾಟಗಾರರೊಂದಿಗೆ ಸಮಾಲೋಚನೆ ನಡೆಸಿ ಮಾತನಾಡಿದ ಅವರು, ಉಪಚುನಾವಣೆಯ ನಂತರ ಈ ಬಗ್ಗೆ ಗಮನಹರಿಸಿ, ನೌಕರರ ಬೇಡಿಕೆಗಳನ್ನು ಈಡೇರಿಸುವ ಸಲುವಾಗಿ ಪ್ರಾಮಾಣಿಕ ಯತ್ನ ನಡೆಸಲಾಗುವುದು ಎಂದು ತಿಳಿಸಿದರು.

ಇತ್ತೀಚೆಗೆ ನಿವೃತ್ತರಾದ 1500ಕ್ಕೂ ಹೆಚ್ಚು ನೌಕರರಿಗೆ ಕೊನೆ ತಿಂಗಳ ಸಂಬಳ ಬಿಟ್ಟರೆ ಹೆಚ್ಚಿನ ಯಾವುದೇ ಪರಿಹಾರವೂ ದೊರೆತಿಲ್ಲ. ಇದು ನೌಕರರಿಗೆ ಸಿಗಬೇಕಾದ ಸಹಜ ನ್ಯಾಯಕ್ಕೆ ವಿರುದ್ಧವಾಗಿದೆ. ಹೀಗಾಗಿ, ರಾಜ್ಯ ಸರಕಾರ ನಿವೃತ್ತ ನೌಕರರಿಗೆ ಪಿಂಚಣಿ ನೀಡುವ ಮೂಲಕ ಅವರು ನೆಮ್ಮದಿಯ ಜೀವನ ನಡೆಸಲು ಅನುವು ಮಾಡಿಕೊಡಬೇಕೆಂದು ಒತ್ತಾಯಿಸಿದರು.

ಬಿಜೆಪಿ ಅಧಿಕಾರಾವಧಿಯಲ್ಲಿ ಎಸ್ಸಿ-ಎಸ್ಟಿ, ಅಲ್ಪಸಂಖ್ಯಾತ ಎನ್ನುವ ತಾರತಮ್ಯವಿಲ್ಲದೆ 1987ರಿಂದ 1993ರವರೆಗಿನ 15ಸಾವಿರ ನೌಕರರಿಗೆ ವೇತನ ಅನುದಾನ ಒದಗಿಸಲಾಯಿತು. ಹಾಗೂ 1995ರವರೆಗೂ ಅನುದಾನಿತ ಶಿಕ್ಷಣ ಸಂಸ್ಥೆಗಳ ನೌಕರರನ್ನು ಅನುದಾನದ ವ್ಯಾಪ್ತಿಗೆ ಒಳಪಡಿಸಲಾಯಿತು. ಆದರೆ, ನೂತನ ಪಿಂಚಣಿ ಯೋಜನೆಯ ಅನುಷ್ಠಾನದಿಂದ 40ಸಾವಿರ ನೌಕರರು ಪಿಂಚಣಿ ಸೌಲಭ್ಯವಿಲ್ಲದೇ ಬೀದಿಗೆ ಬೀಳುವಂತಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News