ಹಜ್ ಯಾತ್ರೆ ಮಾದರಿಯಲ್ಲೆ ‘ನಾಗಪುರ ಪುಣ್ಯಭೂಮಿ’ ಪ್ರಸಿದ್ಧಿ ಪಡೆಯಲಿದೆ: ಡಾ.ಜಿ.ಪರಮೇಶ್ವರ್

Update: 2018-10-17 14:02 GMT

ಬೆಂಗಳೂರು, ಅ. 17: ಡಾ.ಬಿ.ಆರ್.ಅಂಬೇಡ್ಕರ್ ಬೌದ್ಧಧರ್ಮ ದೀಕ್ಷೆ ಪಡೆದ ಮಹಾರಾಷ್ಟ್ರದ ನಾಗಪುರ ಪುಣ್ಯಭೂಮಿ ಮುಂದಿನ ದಿನಗಳಲ್ಲಿ ಮುಸ್ಲಿಮರ ಪವಿತ್ರ ಹಜ್‌ಯಾತ್ರೆ ಮಾದರಿಯಲ್ಲೆ ಪ್ರಸಿದ್ಧಿ ಪಡೆದುಕೊಳ್ಳಲಿದೆ ಎಂದು ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಹೇಳಿದ್ದಾರೆ.

ಬುಧವಾರ ವಿಧಾನಸೌಧದ ಮುಂಭಾಗ ಡಾ.ಬಿ.ಆರ್.ಅಂಬೇಡ್ಕರ್ ಬೌದ್ಧಧರ್ಮ ದೀಕ್ಷೆ ಪಡೆದ ಈ ದಿನದ ಅಂಗವಾಗಿ ಮಹಾರಾಷ್ಟ್ರದ ನಾಗಪುರ ಪುಣ್ಯಭೂಮಿಗೆ ರಾಜ್ಯದಿಂದ ತೆರಳುತ್ತಿರುವ ಅವರ ಅನುಯಾಯಿಗಳಿಗೆ ಸರಕಾರ 23 ಐರಾವತ ಬಸ್ ವ್ಯವಸ್ಥೆ ಕಲ್ಪಿಸಿದ್ದು, ಆ ಬಸ್‌ಗಳಿಗೆ ಪರಮೇಶ್ವರ್ ಹಸಿರು ನಿಶಾನೆ ತೋರಿಸಿದರು. ಆ ಬಳಿಕ ಮಾತನಾಡಿದ ಪರಮೇಶ್ವರ್ ಅವರು, ಅಂಬೇಡ್ಕರ್ ಅವರ ತತ್ವ-ಸಿದ್ಧಾಂತಗಳನ್ನು ಇಡೀ ವಿಶ್ವವೇ ಅನುಸರಿಸುತ್ತಿದೆ. ಈ ದಿನವನ್ನು ಆಚರಿಸಲು ಒಂದು ವಾರದಲ್ಲಿಯೆ ಒಂದು ಕೋಟಿಗೂ ಹೆಚ್ಚು ಜನ ತೆರಳುವ ನಿರೀಕ್ಷೆ ಇದೆ ಎಂದು ತಿಳಿಸಿದರು.

ಅಂಬೇಡ್ಕರ್ ಅವರು ನಾಸಿಕ್‌ನಲ್ಲಿ ಬೌದ್ಧಧರ್ಮಕ್ಕೆ ದೀಕ್ಷೆ ಪಡೆದ ಈ ದಿನವನ್ನು ದೇಶದೆಲ್ಲೆಡೆ ವಿಜೃಂಭಣೆಯಿಂದ ಆಚರಿಸುತ್ತಿದ್ದಾರೆ. ಲಕ್ಷಾಂತರ ಅನುಯಾಯಿಗಳು ಈ ಪುಣ್ಯಭೂಮಿಗೆ ತೆರಳಿ ಪ್ರಾರ್ಥನೆ ಸಲ್ಲಿಸಲು ನಾಗಪುರಕ್ಕೆ ತೆರಳುತ್ತಾರೆ ಎಂದು ಪರಮೇಶ್ವರ್ ತಿಳಿಸಿದರು.

ಬೆಂಗಳೂರು ಹಾಗೂ ಕಲಬುರ್ಗಿಯಿಂದಲೂ ಸಾವಿರಾರು ಯಾತ್ರಾರ್ಥಿಗಳು ತೆರಳುತ್ತಾರೆ. ನಾಗಪುರಕ್ಕೆ ತೆರಳುವ ಅಂಬೇಡ್ಕರ್ ಅನುಯಾಯಿಗಳಿಗಾಗಿ ರಾಜ್ಯ ಸರಕಾರ ಒಟ್ಟು 23 ಐರಾವತ ವೊಲ್ವೋ ಬಸ್‌ಗಳ ವ್ಯವಸ್ಥೆ ಮಾಡಿದ್ದು, ಆ ಪೈಕಿ ಮೂರು ಬಸ್‌ಗಳು ಕಲಬುರ್ಗಿಯಿಂದ ತೆರಳಲಿವೆ ಎಂದು ಹೇಳಿದರು.

ಈ ವೇಳೆ ಸಮಾಜ ಕಲ್ಯಾಣ ಸಚಿವ ಪ್ರಿಯಾಂಕ್ ಖರ್ಗೆ, ಇ.ವೆಂಕಟಯ್ಯ, ದಲಿತ ಮುಖಂಡರಾದ ಮಾವಳ್ಳಿ ಶಂಕರ್, ವೆಂಕಟಸ್ವಾಮಿ, ಚನ್ನಕೃಷ್ಣಪ್ಪ ಸೇರಿದಂತೆ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.

‘ಪರಿಶಿಷ್ಟ ನೌಕರರ ಭಡ್ತಿ ಮೀಸಲಾತಿ ಕಾಯ್ದೆ ಜಾರಿ ಶೀಘ್ರವೇ ಆಗಬೇಕಿದೆ. ಕಾಯ್ದೆ ಜಾರಿಗೆ ನಾವೆಲ್ಲರೂ ಒತ್ತಾಯ ಮಾಡುತ್ತಿದ್ದು, ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆ ಬಾಕಿ ಇದೆ. ಅದಕ್ಕೂ ಮೊದಲೇ ಕಾಯ್ದೆ ಜಾರಿಯಾಗಬೇಕು. ಈ ಸಂಬಂಧ ಸರಕಾರದ ಮಟ್ಟದಲ್ಲಿ ಚರ್ಚೆ ನಡೆಯುತ್ತಿದೆ. ಮುಖ್ಯಮಂತ್ರಿ ಕುಮಾರಸ್ವಾಮಿ ಜತೆ ಚರ್ಚಿಸಿ ಕಾಯ್ದೆ ಜಾರಿಗೆ ತೀರ್ಮಾನ ಮಾಡಲಾಗುವುದು’

-ಡಾ.ಜಿ.ಪರಮೇಶ್ವರ್, ಉಪ ಮುಖ್ಯಮಂತ್ರಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News