ಆರು ತಿಂಗಳಿನಿಂದ ವೇತನ ನೀಡದೇ ವಂಚನೆ: ಕಾರ್ಮಿಕರ ಆರೋಪ

Update: 2018-10-17 14:14 GMT

ಬೆಂಗಳೂರು, ಅ.17: ಪೀಣ್ಯ ಎರಡನೇ ಹಂತದಲ್ಲಿರುವ ನಜೀರ್ ಅಹಮದ್ ಮಾಲಕತ್ವದ ಸ್ಕಾಟ್ ಗಾರ್ಮೆಂಟ್ಸ್‌ನಲ್ಲಿ ದುಡಿಯುತ್ತಿರುವ ಕಾರ್ಮಿಕರಿಗೆ ಕಳೆದ ಆರು ತಿಂಗಳಿನಿಂದ ವೇತನ ನೀಡದೇ ವಂಚಿಸಲಾಗುತ್ತಿದೆ ಎಂದು ಕಾರ್ಮಿಕರು ಆರೋಪಿಸಿದ್ದಾರೆ.

ಸ್ಕಾಟ್ ಗಾರ್ಮೆಂಟ್ಸ್‌ನಲ್ಲಿ ಸುಮಾರು ಒಂದು ಸಾವಿರ ಕಾರ್ಮಿಕರಿದ್ದು, ಅದರಲ್ಲಿ 100 ರಿಂದ 120 ಜನರು ನೌಕರರಿದ್ದು, ಉಳಿದವರು ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿದ್ದಾರೆ. ಆದರೆ, ಕಂಪನಿಯು ಆರ್ಥಿಕ ಸಂಕಷ್ಟದಲ್ಲಿದೆ ಎಂಬ ನೆಪವೊಡ್ಡಿ ವೇತನ ನೀಡದೇ ವಂಚಿಸಲಾಗುತ್ತಿದೆ. ಇದನ್ನು ಖಂಡಿಸಿ ಕಳೆದ 12 ದಿನಗಳಿಂದ ಕಾರ್ಖಾನೆ ಎದುರು ಅನಿರ್ದಿಷ್ಟಾವಧಿ ಧರಣಿ ನಡೆಸುತ್ತಿದ್ದರೂ ಇದುವರೆಗೂ ಒಂದು ಸಣ್ಣ ಪ್ರತಿಕ್ರಿಯೆ ನೀಡುತ್ತಿಲ್ಲ ಎಂದು ಕಾರ್ಮಿಕರು ಆರೋಪಿಸಿದ್ದಾರೆ.

ಹತ್ತಾರು ವರ್ಷಗಳಿಂದ ದುಡಿಯುತ್ತಿರುವ ಕಾರ್ಮಿಕರಿಗೆ ಕಾರ್ಖಾನೆಯು ಯಾವುದೇ ರೀತಿಯ ಪಿಎಫ್, ಇಎಸ್‌ಐ ಹಣ ಪಾವತಿಸಿಲ್ಲ. ಅಲ್ಲದೆ, ಗ್ರಾಚ್ಯುಟಿ, ಬೋನಸ್ ಹಣವನ್ನು ನೀಡಿಲ್ಲ. ಇಲ್ಲಿ ಕೆಲಸ ಮಾಡುತ್ತಿರುವ ನೌಕರರ ವೇತನ ಹಾಗೂ ಮತ್ತಿತರ ಸೌಲಭ್ಯಗಳ ಭತ್ತೆ ಸೇರಿದಂತೆ 60 ಸಾವಿರದಿಂದ ಐದು ಲಕ್ಷದವರೆಗೂ ಹಣ ಬಾಕಿ ಉಳಿಸಿಕೊಂಡಿದ್ದಾರೆ ಎಂದು ಕಾರ್ಮಿಕರು ತಿಳಿಸಿದ್ದಾರೆ.

ಕಾರ್ಮಿಕರಿಗೆ ತಿಂಗಳಿಗೆ ಸರಿಯಾದ ವೇತನ ಸಿಗದೇ ಮನೆಯ ಆರ್ಥಿಕ ಪರಿಸ್ಥಿತಿಯನ್ನು ಎದುರಿಸಲು ತೀವ್ರ ಸಂಕಷ್ಟಕ್ಕೀಡಾಗಿದ್ದಾರೆ. ಈ ಹಿಂದೆ ಪ್ರತಿಭಟನೆ ಮಾಡಿದ ಸಂದರ್ಭದಲ್ಲಿ ಕಾರ್ಮಿಕ ಇಲಾಖೆಯ ಕಮಿಷನರ್ ಹಾಗೂ ಪೊಲೀಸ್ ಇಲಾಖೆಯ ಅಧಿಕಾರಿಗಳು ವೇತನ ಕೊಡಿಸುವ ಭರವಸೆ ನೀಡಿದ್ದರು. ಆದರೆ, ಇದುವರೆಗೂ ಅವರು ಯಾವ ಕ್ರಮ ಕೈಗೊಂಡಿಲ್ಲ ಎಂದು ಪ್ರತಿಭಟನಾನಿರತರು ದೂರಿದರು.

ಕಾರ್ಖಾನೆ ಮುಂಭಾಗ ಧರಣಿ ಮಾಡುತ್ತಿದ್ದ ಸಂದರ್ಭದಲ್ಲಿ ಕಾರ್ಖಾನೆ ಮಾಲಕ ಅ.10 ರೊಳಗೆ ವೇತನ ನೀಡಲಾಗುತ್ತದೆ ಎಂದು ಭರವಸೆ ನೀಡಿದ್ದರು. ಆದರೆ, ಅ.17 ಬಂದರೂ ಯಾವುದೇ ಪ್ರತಿಕ್ರಿಯೆ ನೀಡುತ್ತಿಲ್ಲ. ಕಂಪನಿ ನಷ್ಟದಲ್ಲಿದೆ ಎಂದು ಹೇಳುತ್ತಿರುವ ಮಾಲಕ ನಜೀರ್ ಅಹಮದ್ ಕುಟುಂಬ ಸಮೇತ ವಿದೇಶ ಪ್ರವಾಸಕ್ಕೆ ಹೋಗಿರುವುದು ಎಷ್ಟು ಸರಿ ಎಂದು ಕಾರ್ಮಿಕರು ಆಕ್ರೋಶ ವ್ಯಕ್ತಪಡಿಸಿದರು.

ಕೂಡಲೇ ಕಾರ್ಖಾನೆಯ ಮಾಲಕರು ಎಲ್ಲ ಕಾರ್ಮಿಕರಿಗೂ ಬಾಕಿ ಉಳಿಸಿಕೊಂಡಿರುವ ವೇತನವನ್ನು ನೀಡಬೇಕು. ಜತೆಗೆ, ಕಾರ್ಮಿಕರ ಖಾತೆಗೆ ಜಮಾ ಮಾಡದೇ ಉಳಿಸಿಕೊಂಡಿರುವ ಪಿಎಫ್, ಇಎಸ್‌ಐ ನೀಡಬೇಕು ಹಾಗೂ ಗ್ರಾಚ್ಯುಟಿ, ಬೋನಸ್ ಹಣವನ್ನು ಪಾವತಿ ಮಾಡಬೇಕು ಎಂದು ಅವರು ಒತ್ತಾಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News