ಒಡಿಶಾ: ಚಂಡಮಾರುತಕ್ಕೆ 52 ಮಂದಿ ಬಲಿ, 2,200 ಕೋ. ರೂ.ನಷ್ಟ

Update: 2018-10-17 14:36 GMT

ಭುವನೇಶ್ವರ, ಅ.17: ತಿತ್ಲಿ ಚಂಡಮಾರುತದ ಅಬ್ಬರಕ್ಕೆ ನಲುಗಿದ ಒಡಿಶಾದಲ್ಲಿ ಮೃತಪಟ್ಟವರ ಸಂಖ್ಯೆ 52ಕ್ಕೇರಿದ್ದು, 2,200 ಕೋಟಿ ರೂ. ನಷ್ಟ ಸಂಭವಿಸಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

ಮೃತಪಟ್ಟವರ ಸಂಬಂಧಿಕರಿಗೆ ನೀಡಲಾಗುವ ಪರಿಹಾರ ಮೊತ್ತವನ್ನು ಹೆಚ್ಚಿಸಿರುವುದಾಗಿ ಸರಕಾರ ಪ್ರಕಟಿಸಿದೆ. ಪ್ರಾಥಮಿಕ ನಷ್ಟದ ವರದಿಯ ಪ್ರಕಾರ ಮೂಲಭೂತ ಸೌಕರ್ಯ ಮತ್ತು ಕೃಷಿವಲಯದ ನಷ್ಟ ಸೇರಿದಂತೆ ಒಟ್ಟು 2,200 ಕೋಟಿ ರೂ. ನಷ್ಟ ಸಂಭವಿಸಿದೆ. ನಷ್ಟದ ಮೊತ್ತ ನಿರ್ಧರಿಸುವ ಅಂತಿಮ ವರದಿಯನ್ನು ಎರಡು ದಿನದೊಳಗೆ ಪೂರ್ಣಗೊಳಿಸಲಾಗುವುದು ಎಂದು ಸರಕಾರದ ಮುಖ್ಯ ಕಾರ್ಯದರ್ಶಿ ಆದಿತ್ಯ ಪ್ರಸಾದ್ ಪಢಿ ತಿಳಿಸಿದ್ದಾರೆ.

ಗಜಪತಿ ಜಿಲ್ಲೆಯಲ್ಲೇ 39 ಮಂದಿ ಸಾವನ್ನಪ್ಪಿದ್ದಾರೆ. ಗಂಜಾಂ ಜಿಲ್ಲೆಯಲ್ಲಿ 12 ಮಂದಿ, ಕಂಧಮಾಲ್ ಜಿಲ್ಲೆಯಲ್ಲಿ ಒಬ್ಬ ವ್ಯಕ್ತಿ ಸಾವನ್ನಪ್ಪಿದ್ದಾರೆ. ಮೃತಪಟ್ಟವರ ಕುಟುಂಬದವರಿಗೆ ನೀಡುವ ಪರಿಹಾರ ಮೊತ್ತವನ್ನು ಸರಕಾರ 4 ಲಕ್ಷ ರೂ.ನಿಂದ 10 ಲಕ್ಷ ರೂ.ಗೆ ಹೆಚ್ಚಿಸಿದೆ. ರಸ್ತೆಗಳಿಗೆ ಆಗಿರುವ ಹಾನಿಯ ಮೊತ್ತ 500 ಕೋಟಿ ರೂ, ವಿದ್ಯುತ್ ವ್ಯವಸ್ಥೆಗೆ ಆಗಿರುವ ಹಾನಿಯ ಮೊತ್ತ 133 ಕೋಟಿ ರೂ, ಮನೆಗಳಿಗೆ ಆಗಿರುವ ಹಾನಿಯ ಮೊತ್ತ 150 ಕೋಟಿ ರೂ, ಬೆಳೆನಷ್ಟ 233 ಕೋಟಿ ರೂ. ಆಗಿದೆ ಎಂದವರು ತಿಳಿಸಿದ್ದಾರೆ.

ಗರಿಷ್ಠ ಹಾನಿಗೊಳಗಾಗಿರುವ ಗಜಪತಿ, ಗಂಜಾಂ ಮತ್ತು ರಾಯಗಡ ಜಿಲ್ಲೆಯ ಜನತೆಗೆ ಪರಿಹಾರ ನೀಡಲು ರಾಜ್ಯ ಸರಕಾರ ಮಂಗಳವಾರ 102 ಕೋಟಿ ರೂ. ಬಿಡುಗಡೆಗೊಳಿಸಿದೆ. ಈ ಮಧ್ಯೆ ಗಜಪತಿ ಮತ್ತು ಗಂಜಾಂ ಜಿಲ್ಲೆಗಳಿಗೆ ಭೇಟಿ ನೀಡಿದ ಮುಖ್ಯಮಂತ್ರಿ ನವೀನ್ ಪಟ್ಣಾಯಕ್, ಬೆಟ್ಟದ ಮೇಲಿರುವ ಬಾರಾಘರ ಗ್ರಾಮವನ್ನು ಬೆಟ್ಟದ ಕೆಳಭಾಗಕ್ಕೆ ಸ್ಥಳಾಂತರಿಸುವುದಾಗಿ ತಿಳಿಸಿದರು. ‘ಬಿಜು ಪಕ್ಕಾ ಘರ್ ಯೋಜನೆ’ಯಡಿ ಗ್ರಾಮದ 76 ಕುಟುಂಬಗಳಿಗೆ ಬೆಟ್ಟದ ತಪ್ಪಲಲ್ಲಿ ಉತ್ತಮ ಮನೆಗಳನ್ನು ನಿರ್ಮಿಸಲಾಗುವುದು ಎಂದು ತಿಳಿಸಿದರು. ಇದೇ ಸಂದರ್ಭ ಅವರು ಫಲಾನುಭವಿಗಳಿಗೆ ಪಟ್ಟಾ ವಿತರಿಸಿದರು ಹಾಗೂ ಚಂಡಮಾರುತದಿಂದ ಹೆತ್ತವರನ್ನು ಕಳೆದುಕೊಂಡು ಅನಾಥರಾಗಿರುವ ಮಕ್ಕಳ ಯೋಗಕ್ಷೇಮವನ್ನು ಸರಕಾರ ನೋಡಿಕೊಳ್ಳುತ್ತದೆ ಎಂದು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News