ಮುಝಫರ್‌ಪುರ ಆಶ್ರಯಧಾಮ ಪ್ರಕರಣ: ಹಣ ಅಕ್ರಮ ಸಾಗಣೆ ಪ್ರಕರಣ ದಾಖಲಿಸಿದ ಇಡಿ

Update: 2018-10-17 14:49 GMT

ಹೊಸದಿಲ್ಲಿ, ಅ.17: ಮುಝಫರ್‌ಪುರ ಆಶ್ರಯಧಾಮದಲ್ಲಿ ಅಪ್ರಾಪ್ತ ವಯಸ್ಸಿನ ಬಾಲಕಿಯರ ಮೇಲೆ ನಡೆದಿದ್ದ ಅತ್ಯಾಚಾರ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯವು(ಇಡಿ) ಹಣ ಅಕ್ರಮ ಸಾಗಣೆ ಪ್ರಕರಣ ದಾಖಲಿಸಿಕೊಂಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸಿಬಿಐ ದಾಖಲಿಸಿದ ಎಫ್‌ಐಆರ್ ಗಮನಿಸಿ ಈ ಕ್ರಮ ಕೈಗೊಳ್ಳಲಾಗಿದೆ .ಶೀಘ್ರವೇ ಆಶ್ರಯಧಾಮದ ಮಾಲಕ, ಪ್ರಮುಖ ಆರೋಪಿ ಬೃಜೇಶ್ ಠಾಕೂರ್ ಸೇರಿದಂತೆ ಆರೋಪಿಗಳಿಗೆ ಸಮನ್ಸ್ ಜಾರಿಗೊಳಿಸಲಾಗುವುದು ಎಂದು ಎಂದು ಇಡಿ ಅಧಿಕಾರಿಗಳು ತಿಳಿಸಿದ್ದಾರೆ. ಈ ಆಶ್ರಯಧಾಮದಲ್ಲಿ ನಡೆಯುತ್ತಿದ್ದ ಕ್ರಿಮಿನಲ್ ಚಟುವಟಿಕೆಯ ಮೂಲಕ ಅಕ್ರಮ ಹಣ ಸಂಪಾದಿಸಲಾಗುತ್ತಿತ್ತೇ ಎಂಬ ಬಗ್ಗೆ ತನಿಖೆ ನಡೆಸಲಾಗುವುದು ಎಂದು ಇಡಿ ಅಧಿಕಾರಿಗಳು ತಿಳಿಸಿದ್ದಾರೆ.

ರಾಜ್ಯ ಸರಕಾರದಿಂದ ಅನುದಾನ ಪಡೆಯುತ್ತಿರುವ ಎನ್‌ಜಿಒ ಸಂಸ್ಥೆ ನಡೆಸುತ್ತಿರುವ ಬೃಜೇಶ್ ಠಾಕೂರ್ ಮಾಲಕತ್ವದ ಈ ಆಶ್ರಯಧಾಮದಲ್ಲಿದ್ದ 30 ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ ನಡೆದಿರುವ ಬಗ್ಗೆ ದೂರು ದಾಖಲಾಗಿದೆ. ಕಳೆದ ಮೇ 31ರಂದು ಠಾಕೂರ್ ಸೇರಿದಂತೆ 11 ಮಂದಿಯನ್ನು ಬಂಧಿಸಿ ಎಫ್‌ಐಆರ್ ದಾಖಲಿಸಲಾಗಿದೆ. ಬಳಿಕ ತನಿಖೆಯನ್ನು ಸಿಬಿಐಗೆ ವಹಿಸಲಾಗಿತ್ತು. ಆಶ್ರಯಧಾಮದಲ್ಲಿದ್ದ 42 ಬಾಲಕಿಯರನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ್ದು ಇವರಲ್ಲಿ 34 ಮಂದಿಯ ಮೇಲೆ ಅತ್ಯಾಚಾರ ನಡೆದಿರುವುದು ದೃಢಪಟ್ಟಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News