ಬೆಂಗಳೂರು: ವಿಜಯದಶಮಿ ನಂತರ ಒತ್ತುವರಿ ತೆರವು ಕಾರ್ಯಾಚರಣೆಗೆ ಸಿದ್ಧತೆ

Update: 2018-10-17 14:57 GMT

ಬೆಂಗಳೂರು, ಅ.17: ಬಿಬಿಎಂಪಿ ವ್ಯಾಪ್ತಿಯಲ್ಲಿನ ರಾಜಕಾಲುವೆಗಳ ಒತ್ತುವರಿ ತೆರವು ಕಾರ್ಯಾಚರಣೆಯನ್ನು ವಿಜಯದಶಮಿ ನಂತರ ಕೈಗೆತ್ತಿಕೊಳ್ಳಲು ಪಾಲಿಕೆ ಹಾಗೂ ನಗರ ಜಿಲ್ಲಾಡಳಿತ ಸಿದ್ಧತೆ ನಡೆಸಿದೆ. ಈಗಾಗಲೇ ಒತ್ತುವರಿಗೊಂಡಿರುವ ಕಟ್ಟಡಗಳನ್ನು ಗುರುತಿಸುವ ಕಾರ್ಯವನ್ನು ಜಿಲ್ಲಾಡಳಿತ ಮಾಡಿದ್ದು, ಮುಂದಿನ ವಾರದಿಂದ ತೆರವು ಕಾರ್ಯಾಚರಣೆ ಕೈಗೊಳ್ಳಲಾಗುತ್ತದೆ ಎಂದು ಜಿಲ್ಲಾಧಿಕಾರಿ ಬಿ.ಎಂ.ವಿಜಯಶಂಕರ್ ಮಾಹಿತಿ ನೀಡಿದ್ದಾರೆ.

ಈಗಾಗಲೇ ಒತ್ತುವರಿ ತೆರವಿಗೆ ಭೂಮಾಪಕರು ಗುರುತು ಹಾಕಿದರೂ ಅದನ್ನು ಒತ್ತುವರಿದಾರರು ಅಳಿಸಿ ಹಾಕುತ್ತಿರುವ ಆರೋಪವಿರುವ ಕಾರಣ ಸರ್ವೆ ಕಾರ್ಯ ನಡೆಸಿದ ಭೂಮಾಪಕರ ಸಮ್ಮುಖದಲ್ಲಿಯೆ ಒತ್ತುವರಿ ತೆರವು ಕಾರ್ಯಾಚರಣೆ ನಡೆಸಲು ತೀರ್ಮಾನಿಸಲಾಗಿದೆ ಎಂದು ತಿಳಿಸಿದರು.

ರಾಜಕಾಲುವೆಗಳ ಒತ್ತುವರಿ ತೆರವು ಕಾರ್ಯಾಚರಣೆ ಸಂಬಂಧ ಇತ್ತೀಚೆಗೆ ಸರಕಾರದ ಮುಖ್ಯ ಕಾರ್ಯದರ್ಶಿ ವಿಜಯಭಾಸ್ಕರ್ ಸಮ್ಮುಖದಲ್ಲಿ ನಡೆದ ಸಭೆಯಲ್ಲಿ ಪಾಲಿಕೆ ಆಯುಕ್ತ ಮಂಜುನಾಥಪ್ರಸಾದ್, ಕಾರ್ಯಾಚರಣೆ ಸಂದರ್ಭದಲ್ಲಿ ಭೂಮಾಪಕರು ಹಾಜರಿರಲು ಸೂಚನೆ ನೀಡುವಂತೆ ಕೋರಿದ್ದಾರೆ.

ಕಾರ್ಯಾಚರಣೆ ವೇಳೆ ಭೂಮಾಪಕರು ಹಾಜರಿದ್ದರೆ ತೆರವು ಕಾರ್ಯ ಸುಲಭವಾಗುತ್ತದೆ. ಈ ಹಿನ್ನೆಲೆಯಲ್ಲಿ ಕಂದಾಯ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡುವಂತೆ ಕೋರಿದ್ದರು. ಸಭೆಯಲ್ಲಿ ಜಿಲ್ಲಾಧಿಕಾರಿ ವಿಜಯಶಂಕರ್ ಹಾಜರಿದ್ದರು. ಸಭೆಯಲ್ಲಿ ಕೈಗೊಂಡ ತೀರ್ಮಾನದಂತೆ ಮುಂದಿನ ವಾರ ತೆರವು ಕಾರ್ಯಾಚರಣೆ ಆರಂಭಗೊಳ್ಳುವ ಸಾಧ್ಯತೆಯಿದೆ.

800ಕ್ಕೂ ಹೆಚ್ಚು ಸ್ಥಳಗಳಲ್ಲಿ ಒತ್ತುವರಿ ತೆರವು ಕಾರ್ಯಾಚರಣೆ ನಡೆಯಬೇಕಿದೆ. 2016ರ ಜುಲೈನಲ್ಲಿ ತೆರವು ಕಾರ್ಯಾಚರಣೆ ಕೈಗೊಂಡಿದ್ದ ಬಿಬಿಎಂಪಿ ಅರ್ಧಕ್ಕೆ ನಿಲ್ಲಿಸಿತ್ತು. ಮಧ್ಯಮ, ಬಡ ವರ್ಗದವರ ಮನೆಗಳನ್ನು ಮಾತ್ರವೇ ತೆರವು ಮಾಡಲಾಗಿತ್ತು ಎಂಬ ಆರೋಪವೂ ಕೇಳಿಬಂದಿತ್ತು.

ರಾಜಕಾಲುವೆ ಚಿತ್ರಣ: 80 ಮಿ.ಮಿ. ಮಳೆ ಆದರೂ ಸರಾಗವಾಗಿ ನೀರು ಹರಿಯುವ ಸಾಮರ್ಥ್ಯದೊಂದಿಗೆ ರಾಜಕಾಲುವೆಗಳನ್ನು ನಿರ್ಮಿಸಲಾಗಿತ್ತು. ಆದರೆ, ಒತ್ತುವರಿ ಕಾರಣದಿಂದಾಗಿ ರಾಜಕಾಲುವೆಗಳು ಮೂಲ ಸ್ವರೂಪವನ್ನು ಕಳೆದುಕೊಂಡಿದ್ದು, ಪ್ರತಿ ಬಾರಿ ಮಳೆ ಬಂದಾಗಲೂ ಅನಾಹುತಗಳಿಗೆ ಕಾರಣವಾಗುತ್ತಿವೆ. 842 ಕಿ.ಮಿ. ವ್ಯಾಪ್ತಿಯಲ್ಲಿ ಒಟ್ಟು 633 ರಾಜಕಾಲುವೆಗಳಿದ್ದು, 142 ಕಿ.ಮಿ. ವ್ಯಾಪ್ತಿಯಲ್ಲಿ ಪ್ರಾಥಮಿಕ ಹಾಗೂ 426 ಕಿ.ಮಿ. ವ್ಯಾಪ್ತಿಯಲ್ಲಿ ಸೆಕೆಂಡರಿ ಕಾಲುವೆಗಳಿವೆ. ಒಟ್ಟು 1,953 ಕಡೆಗಳಲ್ಲಿ ಒತ್ತುವರಿಗೊಂಡಿದ್ದು, 1,255 ಕಡೆಗಳಲ್ಲಿ ಒತ್ತುವರಿಯನ್ನು ತೆರವುಗೊಳಿಸುವುದಾಗಿ ಬಿಬಿಎಂಪಿ ಹೇಳಿತ್ತು. ಸರಿಯಾಗಿ ಸರ್ವೆಗಳು ಲಭ್ಯವಿಲ್ಲದಿದ್ದರಿಂದ 2017 ರಲ್ಲಿ ಕಾರ್ಯಾಚರಣೆ ನಡೆದಿರಲಿಲ್ಲ. ಈ ಬಾರಿ ತೆರವು ಕಾರ್ಯಾಚರಣೆಗೆ ಸಿದ್ಧತೆ ನಡೆಸಿದ್ದು, ಎಷ್ಟರ ಮಟ್ಟಿಗೆ ತೆರವು ಸಾಧ್ಯವಾಗುತ್ತದೆ ಎಂಬುದನ್ನು ಕಾದು ನೋಡಬೇಕು.

ಕೆರೆಗಳ ಅಭಿವೃದ್ಧಿಗೆ ಸಮನ್ವಯ ಸಮಿತಿ: ನಗರದಲ್ಲಿರುವ ಕೆರೆಗಳ ಅಭಿವೃದ್ಧಿಗೆ ಸ್ಥಳೀಯ ಪ್ರಾಧಿಕಾರಗಳ ಸಮನ್ವಯ ಸಮಿತಿ ರಚಿಸಲಾಗಿದೆ. ಜತೆಗೆ, ಕ್ರಿಯಾ ಯೋಜನೆಯನ್ನು ಸಿದ್ಧಪಡಿಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

ಇತ್ತಿಚೆಗೆ ಆನೇಕಲ್ ಬಳಿಯ ಕೆಲವು ಹಳ್ಳಿಗಳಲ್ಲಿ ನಾವು ಗ್ರಾಮ ವಾಸ್ತವ್ಯ ಮಾಡಿದ ಸಂದರ್ಭದಲ್ಲಿ ಕೆರೆಗಳ ವಿಚಾರವಾಗಿ ಹೆಚ್ಚು ಆರೋಪಗಳು ಕೇಳಿಬಂದಿದ್ದವು. ಈ ಹಿನ್ನೆಲೆಯಲ್ಲಿ ವಿವಿಧ ಪ್ರಾಧಿಕಾರಗಳನ್ನು ಒಳಗೊಂಡ ಸಮಿತಿಗಳನ್ನು ರಚಿಸಲಾಗಿದೆ 10 ರಿಂದ 12 ಕೆರೆಗಳು ಕಲುಷಿತವಾಗಿವೆ. ಅವುಗಳನ್ನು ಸ್ವಚ್ಛಗೊಳಿಸುವುದು ಮಾತ್ರವಲ್ಲದೆ ಅವುಗಳ ಅಭಿವೃದ್ಧಿಗೂ ಆದ್ಯತೆ ನೀಡಲಾಗುವುದು. ಈ ಸಂಬಂಧ ಮಾಲಿನ್ಯ ನಿಯಂತ್ರಣ ಮಂಡಳಿ, ಬಿಬಿಎಂಪಿ, ಬಿಡಿಎ ಹಾಗೂ ಸಣ್ಣ ನೀರಾವರಿ ಸೇರಿ ಹಲವು ಇಲಾಖೆಗಳೊಂದಿಗೆ ಎರಡು ಹಂತದಲ್ಲಿ ಸಭೆ ನಡೆಸಿ ಚರ್ಚಿಸಲಾಗಿದೆ. ಜತೆಗೆ, ಕ್ರಿಯಾ ಯೊಜನೆಯನ್ನು ಸಿದ್ಧಪಡಿಸುವಂತೆ ಸೂಚಿಸಲಾಗಿದೆ ಎಂದು ಮಾಹಿತಿ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News