ಕಬ್ಬಿನ ತ್ಯಾಜ್ಯ ಗದ್ದೆಯಲ್ಲಿಯೆ ಕರಗಿಸಿ: ಡಾ.ಆರ್.ಕೆ.ಸಿಂಗ್

Update: 2018-10-17 15:00 GMT

ಬೆಂಗಳೂರು, ಅ.17: ಕಬ್ಬಿನ ತರಗನ್ನು ಸುಡದೆ ಕಬ್ಬಿನ ಗದ್ದೆಯಲ್ಲಿಯೇ ಕರಗಿಸುವುದರಿಂದ ಶೇ.10ರಿಂದ 15ರಷ್ಟು ಇಳುವರಿಯನ್ನು ಹೆಚ್ಚಿಗೆ ಪಡೆಯಬಹುದು ಹಾಗೂ ಮಣ್ಣಿನ ಫಲವತ್ತತೆಯನ್ನು ಕಾಪಾಡಬಹುದು ಎಂದು ಭಾರತೀಯ ಕೃಷಿ ಅನುಸಂಧಾನ ಪರಿಷತ್‌ನ ನಿರ್ದೇಶಕ ಡಾ.ಆರ್.ಕೆ.ಸಿಂಗ್ ತಿಳಿಸಿದರು.

ಬುಧವಾರ ಕೃಷಿ ವಿಶ್ವವಿದ್ಯಾನಿಲಯ, ಬೆಂಗಳೂರು ಮತ್ತು ಭಾರತೀಯ ಕೃಷಿ ಅನುಸಂಧಾನ ಪರಿಷತ್ ನಗರದ ಜೆಕೆವಿಕೆಯಲ್ಲಿ ಆಯೋಜಿಸಿದ್ದ 32ನೆ ಕಬ್ಬಿನ ದ್ವೈರ್ವಾಷಿಕ ಕಾರ್ಯಗಾರವನ್ನು ಉದ್ಘಾಟಿಸಿ ಮಾತನಾಡಿದ ಅವರು, ಕಬ್ಬಿನಿಂದ ತಯಾರಿಸಿದ ಎಥಾನಾಲ್‌ಅನ್ನು ಡೀಸೆಲ್‌ನೊಂದಿಗೆ ಶೇ.10ರಷ್ಟು ಬೆರಸಿ ಉಪಯೋಗಿಸಿದರೆ ದೇಶಿ ವಿನಿಮಯವನ್ನು ಉಳಿಸುವುದರ ಜೊತೆಗೆ ರೈತರಿಗೆ ಸಾಕಷ್ಟು ಅನುಕೂಲವಾಗಲಿದೆ ಎಂದು ತಿಳಿಸಿದರು.

ಭಾರತದಲ್ಲಿ ಕಬ್ಬಿನ ಸಂಶೋಧನೆಯಲ್ಲಿ ಹೊಸ ಹೊಸ ತಳಿಗಳ ಬಿಡುಗಡೆ ಮತ್ತು ಉತ್ತಮ ಬೇಸಾಯ ಕ್ರಮಗಳಿಂದ ಕಳೆದ ವರ್ಷ 33 ಮಿಲಿಯನ್ ಟನ್ ಸಕ್ಕರೆಯನ್ನು ಉತ್ಪಾದಿಸಲಾಗಿದೆ, ಇದು ಒಂದು ಸಾರ್ವಕಾಲಿನ ದಾಖಲೆ. ಕರ್ನಾಟಕ ಮತ್ತು ತುಳುನಾಡಿನಲ್ಲಿ ಬರಗಾಲವಿದ್ದರೂ ಅತ್ಯಧಿಕ ಸಕ್ಕರೆಯನ್ನು ಉತ್ಪಾದಿಸಲಾಯಿತು, ಇದಕ್ಕಾಗಿ ರೈತರು ಮತ್ತು ವಿಜ್ಞಾನಿಗಳನ್ನು ಅಭಿನಂದಿಸುತ್ತೇನೆ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕೃಷಿ ವಿಶ್ವವಿದ್ಯಾನಿಲಯ ಕುಲಪತಿ ಡಾ.ಎಸ್. ರಾಜೇಂದ್ರ ಪ್ರಸಾದ್ ಮಾತನಾಡಿ, ಭಾರತವು ವಿಶ್ವದಲ್ಲೇ ಸಕ್ಕರೆ ಉತ್ಪಾದನೆಯಲ್ಲಿ ಬ್ರೆಜಿಲ್ ದೇಶದ ನಂತರ ಎರಡನೆ ಸ್ಥಾನವನ್ನು ಪಡೆದಿರುತ್ತದೆ. ಪ್ರಪಂಚದ ಸಕ್ಕರೆ ಉತ್ಪಾದನೆಗೆ ಇದರ ಕೊಡುಗೆ ಶೇ.16 ರಷ್ಟು ಕರ್ನಾಟಕದಲ್ಲಿ ರೈತರು ಕಬ್ಬಿನ ಜೊತೆ ಅಂತರ ಬೆಳೆಯಾಗಿ ದ್ವಿದಳ ಧಾನ್ಯಗಳಾದ ತಿಂಗಳ ಹುರುಳಿ ಮತ್ತು ಸೋಯಾ ಅವರೆಯನ್ನು ಬೆಳೆದು ಲಾಭಗಳಿಸುತ್ತಿದ್ದಾರೆ ಎಂದು ತಿಳಿಸಿದರು.

ಕಬ್ಬಿನಲ್ಲಿ ಒಂದು ಕಣ್ಣಿನ ಪೈರನ್ನು ನಾಟಿಮಾಡುವುದರಿಂದ ರೈತರು ಕಬ್ಬಿನ ಬಿತ್ತನೆಯ ಪ್ರಮಾಣವನ್ನು ಕಡಿತಗೊಳಿಸಿ ಉಳಿತಾಯದ ಜೊತೆಗೆ ಸಕಾಲದಲ್ಲಿ ಬಿತ್ತನೆ ಮಾಡಲು ಸಹಕಾರಿಯಾಗುತ್ತದೆ. ಕರ್ನಾಟಕ ಸರಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಇಸ್ರೇಲ್ ತಂತ್ರಜ್ಞಾನವನ್ನು ಕಬ್ಬಿನಲ್ಲಿ ಅಳವಡಿಸಲು ಈಗಾಗಲೇ ಕೃಷಿ ವಿಶ್ವವಿದ್ಯಾನಿಲಯ, ಬೆಂಗಳೂರು ಯೋಜನೆಯನ್ನು ರೂಪಿಸಿದೆ ಎಂದು ಅವರು ಹೇಳಿದರು.

ಮಂಡ್ಯದ ಕೆಲವು ಪ್ರಗತಿಪರ ರೈತರು ಈಗಾಗಲೇ ಕಬ್ಬಿನಲ್ಲಿ ಹನಿ ನೀರಾವರಿಯನ್ನು ಅಳವಡಿಸಿಕೊಂಡು ಶೇ.25 ರಿಂದ 30 ಪ್ರಮಾಣದಲ್ಲಿ ನೀರನ್ನು ಉಳಿಸುತ್ತಿದ್ದಾರೆ. ಈ ತಂತ್ರಜ್ಞಾನವನ್ನು ಇತರೆ ರೈತರು ಅಳವಡಿಸಿಕೊಳ್ಳಬೇಕು. ಕಬ್ಬಿನಲ್ಲಿ ಮೌಲ್ಯವರ್ಧನೆಯ ಬಗ್ಗೆ ಹೆಚ್ಚಿನ ಸಂಶೋಧನೆಯ ಅವಶ್ಯಕತೆ ಇದೆ ಎಂದು ಅವರು ಹೇಳಿದರು.

ಭಾರತೀಯ ಕಬ್ಬು ಸಂಶೋಧನಾ ಸಂಸ್ಥೆಯ ನಿರ್ದೇಶಕ ಡಾ.ಎ.ಡಿ.ಪಾಥಕ್, ಲಕ್ನೋ ಮತ್ತು ಕಬ್ಬು ತಳಿ ಅಭಿವೃದ್ಧಿ ಸಂಸ್ಥೆಯ ನಿರ್ದೇಶಕ ಡಾ.ಬಕ್ಷೀರಾಮ್, ಜಿಕೆವಿಕೆಯ ಸಂಶೋಧನಾ ನಿರ್ದೇಶಕ ಡಾ.ವೈ.ಜಿ. ಷಡಕ್ಷರಿ ಮತ್ತಿತರರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News