ಬೆಂಗಳೂರು ವಿವಿ ಸಂವಹನ ವಿಭಾಗಕ್ಕೆ ಅಗತ್ಯ ಸೌಲಭ್ಯ: ಕುಲಪತಿ ಪ್ರೊ.ವೇಣುಗೋಪಾಲ್

Update: 2018-10-17 15:17 GMT

ಬೆಂಗಳೂರು, ಅ.17: ಬೆಂಗಳೂರು ವಿವಿ ಸಂವಹನ ವಿಭಾಗಕ್ಕೆ ಅಗತ್ಯವಾದ ಎಲ್ಲ ರೀತಿಯ ಸೌಲಭ್ಯಗಳನ್ನು ಒದಗಿಸಲಾಗುವುದು. ಪತ್ರಿಕೋದ್ಯಮ ವಿದ್ಯಾರ್ಥಿಗಳು ಶ್ರಮ ವಹಿಸಿ ಓದುವ ಮೂಲಕ ಜವಾಬ್ದಾರಿಯುತ ಪತ್ರಕರ್ತರಾಗಿ ಬೆಳೆಯಬೇಕೆಂದು ಕುಲಪತಿ ಪ್ರೊ.ವೇಣುಗೋಪಾಲ್ ತಿಳಿಸಿದರು.

ಬೆಂಗಳೂರು ವಿಶ್ವವಿದ್ಯಾಲಯದ ಜ್ಞಾನಭಾರತಿ ಆವರಣ ಸಂವಹನ ವಿಭಾಗದಲ್ಲಿ ಆಯೋಜಿಸಿದ್ದ ಸಂವಹನ ಕೂಟದ ಉದ್ಘಾಟಣೆ ಹಾಗೂ ಕಿರಿಯ ವಿದ್ಯಾರ್ಥಿಗಳಿಗೆ ಸ್ವಾಗತ ಸಮಾರಂಭ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪತ್ರಿಕಾ ರಂಗಕ್ಕೆ ಮಹತ್ವದ ಸ್ಥಾನವಿದೆ. ಹೀಗಾಗಿ ವಿದ್ಯಾರ್ಥಿಗಳು ಪತ್ರಿಕಾ ಕ್ಷೇತ್ರದ ಮೌಲ್ಯಗಳನ್ನು ಎತ್ತಿ ಹಿಡಿಯುವಂತಹ ಕೆಲಸವಾಗಬೇಕೆಂದು ತಿಳಿಸಿದರು.

ಮಾಧ್ಯಮ ಅಕಾಡೆಮಿ ಅಧ್ಯಕ್ಷ ಎಂ.ಸಿದ್ಧರಾಜು ಮಾತನಾಡಿ, ದೃಶ್ಯ ಮತ್ತು ಪತ್ರಿಕಾ ಮಾಧ್ಯಮಗಳ ಬಂಡವಾಳದಾರರು ಮಾರುಕಟ್ಟೆ ವ್ಯವಸ್ಥೆಗೆ ಜೋತು ಬಿದ್ದಿದ್ದಾರೆ. ಹೀಗಾಗಿ ಸುದ್ದಿಗಳ ಗುಣಮಟ್ಟ ಕಡಿಮೆಯಾಗುತ್ತಿದೆ. ಆದರೂ ಪತ್ರಕರ್ತರ ವೃತ್ತಿ ನಿಷ್ಠೆಯಿಂದಾಗಿ ಪತ್ರಿಕಾ ಕ್ಷೇತ್ರ ಮುನ್ನೆಡೆಯುತ್ತಿದೆ ಎಂದು ತಿಳಿಸಿದರು.

ಇತ್ತೀಚಿನ ದಿನಗಳಲ್ಲಿ ದೃಶ್ಯ ಮಾಧ್ಯಮಗಳು ಬ್ರೇಕಿಂಗ್ ನ್ಯೂಸ್‌ಗೆ ಹೆಚ್ಚಿನ ಮಹತ್ವವನ್ನು ಕೊಟ್ಟು, ಸುದ್ದಿಯ ಗುಣಮಟ್ಟ ಕಡಿಮೆಯಾಗುತ್ತಿದೆ. ಇದರಿಂದ ಪತ್ರಕರ್ತರಿಗೆ ಒತ್ತಡ ಹೆಚ್ಚಾಗಿದೆ. ಆದರೆ, ಇದೆಲ್ಲವನ್ನು ಮೀರಿ ಪತ್ರಿಕಾ ಕ್ಷೇತ್ರ ತನ್ನದೆ ಮೌಲ್ಯವನ್ನು ಹೊಂದಿದ್ದು, ವಿದ್ಯಾರ್ಥಿಗಳು ಹೊಸ ಸವಾಲುಗಳನ್ನು ಎದುರಿಸಲು ಸಿದ್ಧರಾಗಿರಬೇಕೆಂದು ಅವರು ಹೇಳಿದರು.

ಕುಲಸಚಿವ ಪ್ರೊ.ಬಿ.ಕೆ.ರವಿ ಮಾತನಾಡಿ, ಇಡೀ ಭಾರತದಲ್ಲಿ ಬೆಂಗಳೂರು ವಿಶ್ವವಿದ್ಯಾಲಯದ ಸಂವಹನ ವಿಭಾಗ ತನ್ನದೆ ಆದ ಛಾಪನ್ನು ಮೂಡಿಸಿದೆ. ಪತ್ರಿಕೋದ್ಯಮದ ವಿದ್ಯಾರ್ಥಿಗಳು ಸದಾ ಅಧ್ಯಯನಶೀಲರಾಗಿರಬೇಕು. ಸಾಮಾಜಿಕ ಸ್ವಾಸ್ಥವನ್ನು ಕಾಪಾಡುವಂತೆ ತಮ್ಮ ವೃತ್ತಿ ಬದುಕನ್ನು ನಿರ್ಮಾಣ ಮಾಡಿಕೊಳ್ಳಬೇಕೆಂದು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News