"ಬಿಬಿಎಂಪಿ ಕಾಲೇಜಿನಲ್ಲಿ ಕಂಪ್ಯೂಟರ್ ಸೈನ್ಸ್ ಕೋರ್ಸ್ ಇದೆ, ಕಂಪ್ಯೂಟರ್‌ಗಳಿಲ್ಲ"

Update: 2018-10-17 15:27 GMT

ಬೆಂಗಳೂರು, ಅ. 17: ಬಿಬಿಎಂಪಿಯ ಶಾಲಾ-ಕಾಲೇಜುಗಳಲ್ಲಿ ಕಂಪ್ಯೂಟರ್ ಸೈನ್ಸ್ ಕೋರ್ಸ್ ಇದ್ದರೂ ಕಂಪ್ಯೂಟರ್ ಗಳಿಲ್ಲ, ಮೂಲಭೂತ ಸೌಕರ್ಯಗಳಿಲ್ಲ ಎಂದು ಬಿಬಿಎಂಪಿ ಶಾಲಾ-ಕಾಲೇಜಿನ ಪ್ರಾಂಶುಪಾಲರು ಬೇಸರ ವ್ಯಕ್ತಪಡಿಸಿದರು.

ಬುಧವಾರ ನಗರದಲ್ಲಿ ಬಿಬಿಎಂಪಿ ರೋಷಿಣಿ ಯೋಜನೆಯಡಿ ಏರ್ಪಡಿಸಲಾಗಿದ್ದ ಸವಾಲುಗಳು ಮತ್ತು ಬದಲಾವಣೆ ಕುರಿತ ಕಾರ್ಯಾಗಾರದಲ್ಲಿ ಶಿಕ್ಷಣ ತಜ್ಞರ ಮುಂದೆ ಮಾತನಾಡಿದ ಅವರು, ಕಂಪ್ಯೂಟರ್ ಕೋರ್ಸ್ ಇದೆ. ಆದರೆ ಕಂಪ್ಯೂಟರೇ ಇಲ್ಲ. ಹೇಗೆ ಪಾಠ ಮಾಡುವುದು. ಪಠ್ಯ ಪುಸ್ತಕಗಳು ಇಲ್ಲ, ವಿದ್ಯಾರ್ಥಿಗಳು 100 ಅಂಕದ ಪರೀಕ್ಷೆಯನ್ನು ಹೇಗೆ ಎದುರಿಸಬೇಕು ಎಂದು ರೋಷಿಣಿ ಮುಖ್ಯಸ್ಥರ ಮುಂದೆ ಅಳಲು ತೋಡಿಕೊಂಡರು.

ಬಹುತೇಕ ಶಾಲೆಗಳಲ್ಲಿ ಸ್ವಚ್ಛತೆ ಎಂಬುದೇ ಇಲ್ಲ, ಕಿಟಕಿಗಳು, ಬಾಗಿಲುಗಳು ಇಲ್ಲ, ಕುಡಿಯುವ ನೀರಿನ ಸೌಲಭ್ಯದ ಕೊರತೆಯಿದೆ ಎಂದು ಸಮಸ್ಯೆಗಳನ್ನು ಚರ್ಚಿಸಿದರು. ಹಾಗೂ ಹೊರಗುತ್ತಿಗೆ ಆಧಾರದಲ್ಲಿ ಶಿಕ್ಷಕರನ್ನು ನೇಮಕ ಮಾಡಿಕೊಳ್ಳುವ ಪದ್ಧತಿಯನ್ನು ರದ್ದುಪಡಿಸಿ, ನೇರವಾಗಿ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಬೇಕು ಎಂದು ಮನವಿ ಮಾಡಿದರು.

ಹೊರಗುತ್ತಿಗೆ ಶಿಕ್ಷಕರೇ ಆಧಾರ: ಬಿಬಿಎಂಪಿ ವ್ಯಾಪ್ತಿಯಲ್ಲಿ 150ಕ್ಕೂ ಅಧಿಕ ಸರಕಾರಿ ಶಾಲಾ- ಕಾಲೇಜುಗಳಿವೆ. ಆದರೆ ಎಲ್ಲಾ ಶಾಲೆಗಳು ಶಿಕ್ಷಕರ ಸಮಸ್ಯೆ ಎದುರಿಸುತ್ತಿವೆ. ಪ್ರೌಢಶಾಲೆಯಲ್ಲಿ 400ಕ್ಕೂ ಅಧಿಕ ಶಿಕ್ಷಕರಿದ್ದು, 350ಕ್ಕೂ ಅಧಿಕ ಶಿಕ್ಷಕರು ಹೊರಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿದ್ದಾರೆ. ಕೇವಲ 50 ಖಾಯಂ ಶಿಕ್ಷಕರಿದ್ದಾರೆ. ಪಿಯು ಕಾಲೇಜುಗಳಲ್ಲಿ 80 ಶಿಕ್ಷಕರಿದ್ದು, 35ಕ್ಕೂ ಅಧಿಕ ಹೊರಗುತ್ತಿಗೆ ಶಿಕ್ಷಕರು. ಪ್ರಾಥಮಿಕ ಶಾಲೆಯಲ್ಲಿ 250ಕ್ಕೂ ಅಧಿಕ ಶಿಕ್ಷಕರಿದ್ದು, ಶೇ. 50ರಷ್ಟು ಹೊರಗುತ್ತಿಗೆ ಶಿಕ್ಷಕರಿದ್ದಾರೆ ಎಂದು ಕಾರ್ಯಾಗಾರದಲ್ಲಿ ಚರ್ಚಿಸಿದರು.

ಶಿಕ್ಷಕರ ನೇಮಕವಿಲ್ಲ: ಪಾಲಿಕೆ ವ್ಯಾಪ್ತಿಯ ಶಾಲಾ- ಕಾಲೇಜುಗಳಿಗೆ 1999ರಲ್ಲಿ ನೇಮಕ ಪ್ರಕ್ರಿಯೆ ನಡೆದಿದ್ದು, ಇಲ್ಲಿಯವರೆಗೂ ಶಿಕ್ಷಕರ ನೇಮಕಾತಿ ನಡೆದಿಲ್ಲ. ಸಿಲಿಕಾನ್ ಸಿಟಿ ಎಂದು ಹೆಸರು ಪಡೆದ ಬೆಂಗಳೂರಿನ ಸರಕಾರಿ ಶಾಲೆಗಳಿಗೆ ಬಿಬಿಎಂಪಿ, ರಾಜ್ಯ ಸರಕಾರ ಶಿಕ್ಷಕರನ್ನು ಸೇಮಿಸುವಲ್ಲಿ ಅಸಡ್ಡೆ ತೋರಿದೆ ಎಂದರು.

ರೋಷಿನಿ ಯೋಜನೆಯಿಂದ ಬಿಬಿಎಂಪಿ ವ್ಯಾಪ್ತಿಯ ಸರಕಾರಿ ಶಾಲಾ-ಕಾಲೇಜುಗಳು ಉತ್ತಮ ದರ್ಜೆಗೆ ಏರಲಿವೆ. ಗುಣಮಟ್ಟದ ಶಿಕ್ಷಣ ನೀಡಬೇಕಾದರೆ, ಶಾಲಾ ವಾತಾವರಣವೂ ಮುಖ್ಯವಾಗುತ್ತದೆ.

-ತಂಗದೊರೈ, ರೋಷಿಣಿ ಮುಖ್ಯಸ್ಥರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News