ವಿದೇಶಕ್ಕಿಂತ ಎಚ್‌ಎಎಲ್ ನಿರ್ಮಿತ ಜೆಟ್ ದುಬಾರಿ: ರಕ್ಷಣಾ ಸಚಿವಾಲಯ

Update: 2018-10-19 14:17 GMT

ಹೊಸದಿಲ್ಲಿ, ಅ. 19: ವಿದೇಶಿ ಪರವಾನಿಗೆ ಅಡಿ ಬೆಂಗಳೂರು ಮೂಲದ ಸರಕಾರಿ ಸ್ವಾಮ್ಯದ ಹಿಂದೂಸ್ತಾನ ಏರೋನಾಟಿಕ್ ಲಿಮಿಟೆಡ್ (ಎಚ್‌ಎಎಲ್) ಉತ್ಪಾದಿಸುವ ಜೆಟ್‌ನ ಬೆಲೆ ವಿದೇಶದ ಒರಿಜಿನಲ್ ಇಕ್ವಿಪ್‌ಮೆಂಟ್ ಮ್ಯಾನುಫ್ಯಾಕ್ಚರರ್ (ಒಇಎಂ) ಉತ್ಪಾದಿಸುವ ಇದೇ ಜೆಟ್‌ಗಿಂತ ದುಬಾರಿ ಎಂದು ರಕ್ಷಣಾ ಸಚಿವಾಲಯದ ಇತ್ತೀಚೆನ ವರದಿಯಲ್ಲಿ ಬೆಳಕಿಗೆ ಬಂದಿದೆ.

 36 ರಫೇಲ್ ಯುದ್ಧ ವಿಮಾನ ಖರೀದಿ ಒಪ್ಪಂದದಲ್ಲಿ ರಾಷ್ಟ್ರ ಸ್ವಾಮಿತ್ವದ ಎಚ್‌ಎಎಲ್ ಅನ್ನು ಒಳಗೊಳಿಸದೇ ಇರುವ ಬಗ್ಗೆ ಮೋದಿ ಸರಕಾರ ಹಾಗೂ ವಿಪಕ್ಷಗಳ ನಡುವೆ ತೀವ್ರ ವಾಗ್ವಾದ ನಡೆಯುತ್ತಿರುವ ಸಂದರ್ಭದಲ್ಲೇ ಈ ಬೆಳವಣಿಗೆ ನಡೆದಿದೆ.

ರಕ್ಷಣಾ ಉತ್ಪಾದನೆಯ ವಿಭಾಗ ದಾಖಲೆಗಳನ್ನು ಅಧ್ಯಯನ ನಡೆಸುತ್ತಿದೆ ಎಂದು ಸಚಿವಾಲಯದ ಅನಾಮಧೇಯ ಮೂಲಗಳು ತಿಳಿಸಿವೆ.

 ಎಚ್‌ಎಎಲ್ ನಿರ್ಮಿಸುವ ಭಾರತೀಯ ವಾಯು ಪಡೆಯ ಸುಖೋಯ್-30 ಎಂಕೆಐ ಬೆಲೆ ಅದರ ರಷ್ಯದ ಸಹೋದ್ಯೋಗಿ ಜೆಎಸ್‌ಸಿ ಸುಖೋಯ್ ಕಂಪೆನಿ ನಿರ್ಮಿಸುವ ಇದೇ ಜೆಟ್‌ನ ಬೆಲೆಗಿಂತ 150 ಕೋ. ರೂ. ಅಧಿಕ ಎಂದು ಮರು ಪರಿಶೀಲನಾ ದಾಖಲೆಯಲ್ಲಿ ತಿಳಿದುಬಂದಿದೆ. ರಶ್ಯನ್ ಅವೃತ್ತಿಯ ಸುಖೋಯ್ ಜೆಟ್‌ಗೆ 269.77 ಕೋ. ರೂ. ಆದರೆ, ರಶ್ಯಾದ ಪರವಾನಿಗೆಯಲ್ಲಿ ಭಾರತದಲ್ಲಿ ನಿರ್ಮಿಸುವ ಇದೇ ಜೆಟ್‌ಗೆ 417.69 ಕೋ. ರೂ. ಆಗುತ್ತದೆ ಎಂದಿದೆ.

ಒಇಎಂನಿಂದ ನೇರ ಖರೀದಿಗೆ ಹೋಲಿಸಿದರೆ ಎಚ್‌ಎಎಲ್ ಉತ್ಪಾದಿಸುವ ವಿಮಾನಕ್ಕೆ ಹೆಚ್ಚಿನ ಬೆಲೆ ನೀಡಬೇಕಾಗುತ್ತದೆ ಎಂದು ದಾಖಲೆ ಹೇಳಿದೆ.

ಇದೇ ರೀತಿ ಬ್ರಿಟಿಶ್ ನಿರ್ಮಾಣದ ಹಾವ್ಕ್ ತರಬೇತು ವಿಮಾನ ಹಾಗೂ ಭಾರತದಲ್ಲಿ ನಿರ್ಮಾಣವಾದ ಅದೇ ವಿಮಾನದ ನಡುವೆ ಹೆಚ್ಚಿನ ಬೆಲೆಯ ಅಂತರ ಇದೆ. 2004ರಲ್ಲಿ ಇಂತಹ 62 ಜೆಟ್‌ಗಳಲ್ಲಿ 24ನ್ನು ಭಾರತ ಖರೀದಿಸಿತ್ತು. ಉಳಿದ ಜೆಟ್‌ಗಳನ್ನು ಎಚ್‌ಎಎಲ್ ನಿರ್ಮಿಸಿತ್ತು.

ಬ್ರಿಟಿಶ್ ನಿರ್ಮಾಣದ ಹಾವ್ಕ್ಸ್‌ನ ಬೆಲೆ 78 ಕೋ. ರೂ. ಎಚ್‌ಎಎಲ್ ನಿರ್ಮಾಣದ ಅದೇ ವಿಮಾನದ ಬೆಲೆ 88 ಕೋ. ರೂ. ಭಾರತದಲ್ಲಿ ನಿರ್ಮಾಣ ವೆಚ್ಚ 2010 ಹಾಗೂ 2016ರಲ್ಲಿ ಕ್ರಮವಾಗಿ 98 ಕೋ. ರೂ. ಹಾಗೂ 153 ಕೋ. ರೂ.ಗೆ ಏರಿಕೆ ಆಗಿದೆ.

ಮಿತಿಮೀರಿದ ಸಮಯದ ವ್ಯಯ ಹಾಗೂ ಕಡಿಮೆ ದಕ್ಷತೆ ಈ ವಿಮಾನಗಳ ಬೆಲೆ ಹೆಚ್ಚಲು ಕಾರಣವಾಗಿದೆ ಎಂದು ವರದಿ ಹೇಳಿದೆ.

2005ರಿಂದ ವೆಚ್ಚದಲ್ಲಿ ಏರಿಕೆಯಾಗಿರುವುದು ಸಾಮಾನ್ಯ ವಿಷಯ. ನಾವು ಪ್ರತಿಯೊಂದು ಉತ್ಪನ್ನದ ಸಾಗರೋತ್ತರ ಖರೀದಿಯ ಜೊತೆಗೆ ಅದರ ಬೆಲೆಯನ್ನು ಗಣನೆಗೆ ತೆಗೆದುಕೊಳ್ಳಬೇಕಾಗುತ್ತದೆ. ಎಚ್‌ಎಎಲ್ ದೇಶದ ಹಿತಾಸಕ್ತಿಗಾಗಿ ನಿರ್ಮಿಸುವ ವಾತಾವರಣವನ್ನು ಮತ್ತು ದೇಶೀಯ ಲಾಭವನ್ನು ಪರಿಗಣನೆಗೆ ತೆಗೆದುಕೊಳ್ಳುತ್ತದೆ. ಪ್ರಮುಖವಾಗಿ ಸಣ್ಣ ಪ್ರಮಾಣದ ಬೇಡಿಕೆಗಳು ಎಚ್‌ಎಎಲ್‌ಗೆ ಹೆಚ್ಚಿನ ಆರ್ಥಿಕ ಲಾಭ ತಂದು ಕೊಡುತ್ತಿದೆ. ಇದರ ಜೊತೆಗೆ ಇತರ ಸಂಸ್ಥೆಗಳು ನಮ್ಮ ಜೊತೆಗೆ ಭಾಗಿಯಾಗಿರುವು ದರಿಂದ ಒಟ್ಟಾರ ಕಚ್ಚಾ ವಸ್ತುಗಳು, ಬಿಡಿಭಾಗಗಳ ಪೂರೈಕೆಯಲ್ಲಿ ಉಂಟಾಗುವ ವಿಳಂಬ ಹಾಗೂ ಇತರ ವೆಚ್ಚಗಳು ದರ ಏರಿಕೆಗೆ ಕಾರಣವಾಗುತ್ತದೆ.

ಹಿಂದೂಸ್ತಾನ ಏರೋನಾಟಿಕಲ್ ಲಿಮಿಟೆಡ್

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News