ಅಮೃತಸರ ರೈಲು ಅವಘಡ: ಮೃತರ ಸಂಖ್ಯೆ 50ಕ್ಕೇರಿಕೆ

Update: 2018-10-19 17:47 GMT

ಹೊಸದಿಲ್ಲಿ, ಅ. 19: ದಸರಾ ಆಚರಣೆಯ ಸಂದರ್ಭ ರಾವಣ ದಹನವನ್ನು ರೈಲ್ವೆ ಹಳಿಯಲ್ಲಿ ನಿಂತು ವೀಕ್ಷಿಸುತ್ತಿದ್ದ ಜನರ ಮೇಲೆ ರೈಲು ಹರಿದು ಕನಿಷ್ಠ 50 ಮಂದಿ ಸಾವನ್ನಪ್ಪಿದ ದಾರುಣ ಘಟನೆ ಅಮೃತಸರದಲ್ಲಿ ಶುಕ್ರವಾರ ಸಂಜೆ ಸಂಭವಿಸಿದೆ.

ಜೌರಾ ಫಟಾಕ್‌ನಲ್ಲಿರುವ ರೈಲ್ವೆ ಹಳಿಯ ಸಮೀಪ ನಿಲ್ಲಿಸಲಾಗಿದ್ದ ರಾವಣನ ಪ್ರತಿಕೃತಿಗೆ ಬೆಂಕಿ ಹಚ್ಚಲಾಗಿತ್ತು. ಈ ಸಂದರ್ಭ ಪ್ರತಿಕೃತಿ ಒಳಗಿದ್ದ ಸಿಡಿಮದ್ದು ಸ್ಫೋಟಿಸಿದವು. ಇದರಿಂದ ಬೆದರಿದ ಜನಸಂದಣಿ ರೈಲು ಹಳಿಯತ್ತ ಸರಿಯಿತು. ಸಿಡಿಮದ್ದಿನ ಸ್ಫೋಟದ ಸದ್ದಿಗೆ ರೈಲು ಬರುವುದಾಗಲಿ, ಅದರ ಸದ್ದಾಗಲಿ ಜನರಿಗೆ ಅರಿವಿಗೆ ಬರಲಿಲ್ಲ ಎಂದು ಮೂಲಗಳು ತಿಳಿಸಿವೆ.

ಜೌರಾ ಫಟಾಕ್‌ನ ಧೋಬಿ ಘಾಟ್‌ನಲ್ಲಿ ಸಂಜೆ 6.45ಕ್ಕೆ ಈ ದುರ್ಘಟನೆ ಸಂಭವಿಸಿದೆ. ರೈಲು ಜಲಾಂದರ್‌ನಿಂದ ಅಮೃತಸರದತ್ತ ಸಂಚರಿಸುತ್ತಿತ್ತು.

‘‘ಘಟನೆಯಲ್ಲಿ 50ಕ್ಕೂ ಅಧಿಕ ಜನರು ಗಾಯಗೊಂಡಿದ್ದಾರೆ. ನಾವು ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲಿಸಿದ್ದೇವೆ’’ ಎಂದು ಅಮೃತಸರದ ಪೊಲೀಸ್ ಆಯುಕ್ತ ಎಸ್.ಎಸ್. ಶ್ರೀವಾತ್ಸವ್ ಹೇಳಿದ್ದಾರೆ.

ಮೃತಪಟ್ಟವರಲ್ಲಿ ಮಕ್ಕಳು ಕೂಡ ಸೇರಿದ್ದಾರೆ. ಘಟನೆ ಸಂಭವಿಸುವಾಗ ಸುಮಾರು 700 ಮಂದಿ ಸ್ಥಳದಲ್ಲಿ ಇದ್ದರು ಎಂದು ಪತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಜಿಲ್ಲಾಡಳಿತ ಹಾಗೂ ದಸರಾ ಸಮಿತಿ ತಪ್ಪೆಸಗಿದೆ. ರೈಲು ನಿಲ್ಲುತ್ತದೆ ಅಥವಾ ನಿಧಾನವಾಗುತ್ತದೆ ಎಂಬ ಬಗ್ಗೆ ಅವರಿಗೆ ಸ್ಪಷ್ಟ ಮಾಹಿತಿ ಇರಬೇಕಿತ್ತು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

 ದಸರಾ ಸಂದರ್ಭ ಫಾಟಕ್ ಸಮೀಪ ರೈಲು ಸಂಚಾರ ನಿಧಾನಗೊಳಿಸಿ ಎಂದು ರೈಲ್ವೆ ಪ್ರಾಧಿಕಾರಕ್ಕೆ ಮನವಿ ಮಾಡುವಂತೆ ನಾವು ಹಲವು ಬಾರಿ ಅಧಿಕಾರಿಗಳು ಹಾಗೂ ಸ್ಥಳೀಯ ನಾಯಕರಿಗೆ ತಿಳಿಸಿದ್ದೆವು. ಆದರೆ, ಅವರು ನಮ್ಮ ಮಾತನ್ನು ಕೇಳಲಿಲ್ಲ ಎಂದು ಸ್ಥಳೀಯ ನಿವಾಸಿಯೊಬ್ಬರು ತಿಳಿಸಿದ್ದಾರೆ.

ಮೃತ ಪಟ್ಟವರ ಕುಟುಂಬದ ಸದಸ್ಯರಿಗೆ ತಲಾ 5 ಲಕ್ಷ ರೂ. ಪರಿಹಾರ ಧನ ನೀಡಲಾಗುವುದು ಹಾಗೂ ಗಾಯಗೊಂಡವರಿಗೆ ಸರಕಾರಿ ಹಾಗೂ ಖಾಸಗಿ ಆಸ್ಪತ್ರೆಯಲ್ಲಿ ಉಚಿತ ಚಿಕಿತ್ಸೆ ನೀಡಲಾಗುವುದು ಎಂದು ಪಂಜಾಬ್ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಹೇಳಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಗೃಹ ಸಚಿವ ರಾಜ್‌ನಾಥ್ ಸಿಂಗ್ ಸಾಧ್ಯವಿರುವ ಎಲ್ಲ ನೆರವು ಒದಗಿಸುವುದಾಗಿ ಭರವಸೆ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News