ದಯಮಾಡಿ ಶಬರಿಮಲೆಗೆ ಬರಬೇಡಿ: ಮಹಿಳೆಯರಿಗೆ ಮುಖ್ಯ ಅರ್ಚಕರಿಂದ ಮನವಿ

Update: 2018-10-19 16:13 GMT

ತಿರುವನಂತಪುರಂ,ಅ.19: 10ರಿಂದ 50ರ ಒಳಗಿನ ವಯಸ್ಸಿನ ಮಹಿಳೆಯರು ಶಬರಿಮಲೆ ದೇಗುಲಕ್ಕೆ ಆಗಮಿಸದಂತೆ ದೇಗುಲದ ಮುಖ್ಯ ಅರ್ಚಕ ಕಂಡರು ರಾಜೀವರು ಮಹಿಳಾ ಭಕ್ತರಲ್ಲಿ ಮನವಿ ಮಾಡಿದ್ದಾರೆ.

ಮಹಿಳೆಯರು ಅಯ್ಯಪ್ಪ ಸ್ವಾಮಿಯ ದೇಗುಲಕ್ಕೆ ಆಗಮಿಸಿದರೆ ಬಾಗಿಲು ಮುಚ್ಚುವುದಾಗಿ ಅರ್ಚಕರು ಬೆದರಿಕೆ ಹಾಕಿದ್ದಾರೆ ಎಂಬ ವರದಿಯನ್ನು ತಳ್ಳಿಹಾಕಿದ ರಾಜೀವರು ಈ ಹೇಳಿಕೆಯನ್ನು ನೀಡಿದ್ದಾರೆ. “ಶಬರಿಮಲೆಯಲ್ಲಿ ನಾವು ಮಹಿಳೆಯರಿಗೆ ಗೌರವ ನೀಡುತ್ತೇವೆ. ಬೆಟ್ಟದ ದೇಗುಲದ ಎರಡನೇ ಮುಖ್ಯ ದೇವರೇ ಮಲ್ಲಿಕಪುರತಮ್ಮನ್, ಆಕೆ ಒಬ್ಬ ಸ್ತ್ರೀದೇವತೆ. ನಾವು ಸರ್ವೋಚ್ಚ ನ್ಯಾಯಾಲಯದ ತೀರ್ಪನ್ನು ಗೌರವಿಸುತ್ತೇವೆ. ಆದರೆ ಭಕ್ತರ ಭಾವನೆಯನ್ನು ಮತ್ತು ದೇಗುಲದ ಸಂಪ್ರದಾಯವನ್ನು ಗಣನೆಗೆ ತೆಗೆದುಕೊಂಡು ಋತುಮತಿ ವಯಸ್ಸಿನ ಮಹಿಳೆಯರು ಅಯ್ಯಪ್ಪ ಸನ್ನಿಧಾನಕ್ಕೆ ಆಗಮಿಸಬಾರದೆಂದು ನಾನು ಮನವಿ ಮಾಡುತ್ತೇನೆ” ಎಂದು ಅರ್ಚಕರು ತಿಳಿಸಿದ್ದಾರೆ. ಅಯ್ಯಪ್ಪ ಸ್ವಾಮಿಯ ವೃಂದಾವನದಂತಿರುವ ಪ್ರದೇಶವನ್ನು ರಣರಂಗವಾಗಿ ಬದಲಾಯಿಸದಂತೆ ಅವರು ಜನರಲ್ಲಿ ವಿನಂತಿಸಿಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News