ದಸರಾ ಆಚರಣೆ: ಬೆಂಗಳೂರು ನಗರದ ಎಲ್ಲೆಂದರಲ್ಲಿ ಎಸೆದ ಕಸ; ವಿಲೇವಾರಿಗೆ ಸಂಕಷ್ಟ

Update: 2018-10-19 16:37 GMT

ಬೆಂಗಳೂರು, ಅ.19: ದಸರಾ, ಆಯುಧಪೂಜೆ ಹಾಗೂ ವಿಜಯದಶಮಿ ಅಂಗವಾಗಿ ನಗರದ ಎಲ್ಲೆಡೆ ಭರ್ಜರಿ ವ್ಯಾಪಾರ ನಡೆದಿದೆ. ಆದರೆ, ವ್ಯಾಪಾರದ ನಂತರ ನಗರದ ಬಹುತೇಕ ಮಾರುಕಟ್ಟೆಗಳು ಸೇರಿದಂಥೆ ಎಲ್ಲೆಂದರಲ್ಲಿ ಕಸ ಎಸೆದಿದ್ದು, ವಿಲೇವಾರಿಗೆ ಅಡ್ಡಿಯುಂಟಾಗಿದೆ.

ದಸರಾ ಅಂಗವಾಗಿ ಎಲ್ಲೆಡೆಯಿಂದ ಬಂದ ಕುಂಬಳಕಾಯಿ, ಹೂ, ಬಾಳೆಕಂಬ ವ್ಯಾಪಾರ ಮಾಡಿದ ಮಾರಾಟಗಾರರು ಉಳಿದದ್ದನ್ನು ಅಲ್ಲೇ ಬಿಟ್ಟು ಹೋಗಿದ್ದಾರೆ. ಚಾಮರಾಜಪೇಟೆ, ಮೆಜೆಸ್ಟಿಕ್, ಕೆ.ಆರ್. ಮಾರುಕಟ್ಟೆ, ಜಯನಗರ, ರಾಜಾಜಿನಗರ ಸೇರಿದಂತೆ ವಿವಿದೆಡೆ ವ್ಯಾಪಾರಿಗಳು ವ್ಯಾಪಾರ ಸ್ಥಳದಲ್ಲಿ ರಾಶಿಗಟ್ಟಲೆ ಕಸ ಬಿಟ್ಟಿದ್ದಾರೆ. ಹಬ್ಬದ ದಿನವಾದ್ದರಿಂದ ಪೌರಕಾರ್ಮಿಕರು ಕಸ ವಿಲೇವಾರಿ ಮಾಡಿದರೂ, ನಗರಾದ್ಯಂತ ಇನ್ನೂ ಕಸ ಬಿದ್ದಿದೆ.

ಪ್ರತಿ ಮುಖ್ಯರಸ್ತೆ ಬದಿ ಬಾಳೆಕಂಬ, ಹೂವಿನ ಬುಟ್ಟಿ, ಪ್ಲಾಸ್ಟಿಕ್ ಚೀಲ ಸೇರಿದಂತೆ ಇನ್ನಿತರ ವಸ್ತುಗಳು ಬಿದ್ದಿದ್ದು, ಪಾಲಿಕೆ ಇನ್ನೂ ವಿಲೇವಾರಿ ಮಾಡಿಲ್ಲ. ವ್ಯಾಪಾರಸ್ಥರೂ ಕಸದ ರಾಶಿಯನ್ನು ಹತ್ತಿರದ ಕಸದ ಬುಟ್ಟಿಯಲ್ಲಿ ಹಾಕುವಲ್ಲಿ ಆಸಕ್ತಿ ತೋರಿಸದಿರುವುದರಿಂದ ಕಸದ ರಾಶಿ ಕಂಡು ಬರುತ್ತದೆ.

ಮಳೆ ಅವಾಂತರ: ಹಬ್ಬದ ದಿನವಾದ ಗುರುವಾರ ಮಧ್ಯಾಹ್ನದಿಂದ ಮಧ್ಯರಾತ್ರಿವರೆಗೂ ನಗರದಲ್ಲಿ ಮಳೆ ಸುರಿದೆ. ಇದರಿಂದಾಗಿ ಹೆಚ್ಚಿನ ಸ್ಥಳಗಳಲ್ಲಿ ಕಸವನ್ನು ವಿಲೇವಾರಿ ಮಾಡಲು ಸಾಧ್ಯವಾಗಿಲ್ಲ. ಮತ್ತೊಂದು ಕಡೆ ಕಸದ ರಾಶಿಯೊಳಗೆ ನೀರು ಸೇರ್ಪಡೆಗೊಂಡಿರುವುದರಿಂದ ಕಸ ವಿಲೇವಾರಿಗೆ ಮಾಡಲು ಮತ್ತಷ್ಟು ತೊಂದರೆಯಾಗಿದೆ. ರಾಜಾಜಿನಗರ, ಜಯನಗರದ ಸೇರಿದಂತೆ ಬಹುತೇಕ ಸ್ಥಳಗಳಲ್ಲಿ ಕಸದ ರಾಶಿ ಇದ್ದು, ದುರ್ವಾಸನೆ ಬೀರುತ್ತಿದೆ. ಇದರಿಂದ ವಾಹನ ಸವಾರರು ತೊಂದರೆ ಅನುಭವಿಸುತ್ತಿದ್ದಾರೆ.

ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳದ ಬಿಬಿಎಂಪಿ: ಹಬ್ಬದ ಅಂಗವಾಗಿ ನಗರದಲ್ಲಿ ಹೂ, ಹಣ್ಣು, ಕುಂಬಳಕಾಯಿ, ಬಾಳೆಕಂಬ, ಮಾವಿನ ಎಲೆ ಸೇರಿದಂತೆ ಮತ್ತಿತರ ವಸ್ತುಗಳ ವ್ಯಾಪಾರ ನಡೆಯುತ್ತದೆ. ಈ ವೇಳೆ ಕಸದ ಸಮಸ್ಯೆ ಎದುರಾಗುತ್ತದೆ. ಆದರೆ, ಪಾಲಿಕೆಯು ಕಸದ ಸಮಸ್ಯೆಯನ್ನು ನಿವಾರಣೆ ಮಾಡುವ ಸಲುವಾಗಿ ಯಾವುದೇ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿಲ್ಲ. ಅದರ ಪರಿಣಾಮವಾಗಿ ನಗರದಲ್ಲಿಂದು ಗಬ್ಬುವಾಸನೆ ಬೀರುವಂತಾಗಿದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.

ನೂತನ ಮೇಯರ್ ಗಂಗಾಂಬಿಕೆ ಮಲ್ಲಿಕಾರ್ಜುನ್ ಸ್ವಚ್ಛತೆಗೆ ಆದ್ಯತೆ ನೀಡುವುದಾಗಿ ಹೇಳುತ್ತಾರೆ. ಆದರೆ ಅಧಿಕಾರಿಗಳು ಅದನ್ನು ಪಾಲಿಸಬೇಕಲ್ಲವೇ? ಪಾಲಿಕೆ ಮುನ್ನಚ್ಚರಿಕೆ ಕ್ರಮ ಕೈಗೊಂಡಿದ್ದರೆ ರಸ್ತೆಯಲ್ಲಿ ಕಸದ ರಾಶಿ ಕಂಡು ಬರುತ್ತಿರಲಿಲ್ಲ ಎಂದು ಪಾದಚಾರಿಗಳ ಅಭಿಪ್ರಾಯವಾಗಿದೆ.

ಕೆ.ಆರ್. ಮಾರುಕಟ್ಟೆಯಲ್ಲಿ ರಾಶಿ-ರಾಶಿ ಕಸ: ಪ್ರತಿ ಬಾರಿಯಂತೆ ಈ ಬಾರಿಯೂ ನಗರದ ಹೃದಯ ಭಾಗದಲ್ಲಿರುವ ಕೆ.ಆರ್.ಮಾರುಕಟ್ಟೆಯಲ್ಲಿ ತೀವ್ರವಾದ ಕಸದ ಸಮಸ್ಯೆ ಎದುರಾಗಿದೆ. ಈ ವರ್ಷ ಭರ್ಜರಿ ವ್ಯಾಪಾರವಾಗಿದೆ, ಅಷ್ಟೇ ಪ್ರಮಾಣದಲ್ಲಿ ಕಸವೂ ಉತ್ಪತ್ತಿಯಾಗಿದೆ. ಅಲ್ಲದೆ, ಮಳೆ ಬಿದ್ದಿರುವುದರಿಂದ ಕಸದ ರಾಶಿ ಹೆಚ್ಚಾಗಿ, ಕೆಟ್ಟ ವಾಸನೆ ಮೂಗಿಗೆ ಬಡಿಯುತ್ತಿದೆ. ನಗರದಾದ್ಯಂತ ಪೌರಕಾರ್ಮಿಕರೂ ವಿಲೇವಾರಿ ಮಾಡಿದರೂ, ಕಸದ ರಾಶಿಗಳು ಕಡಿಮೆಯಾಗಿಲ್ಲ.

ಸಾರ್ವಜನಿಕರ ಪಾತ್ರ: ನಗರದಲ್ಲಿ ಉತ್ಪತ್ತಿಯಾಗುವ ಕಸದ ಸಮಸ್ಯೆಯನ್ನು ಕಡಿಮೆ ಮಾಡುವಲ್ಲಿ ಬಿಬಿಎಂಪಿ ಎಷ್ಟು ಜವಾಬ್ದಾರಿ ವಹಿಸುತ್ತದೆಯೋ ಅದರಲ್ಲಿ ಅರ್ಧದಷ್ಟು ಸಾರ್ವಜನಿಕರು ಜವಾಬ್ದಾರಿಯಿರುತ್ತದೆ. ವ್ಯಾಪಾರಸ್ಥರು ತಮ್ಮ ವ್ಯಾಪಾರದ ಸ್ಥಳದಲ್ಲಿನ ಕಸವನ್ನು ಪಾಲಿಕೆ ನಿರ್ಮಿಸಿದ ಕಸದ ಬುಟ್ಟಿಗೆ ಹಾಕಬೇಕು. ಹಬ್ಬದ ಸಾಮಗ್ರಿಗಳನ್ನು ಪಡೆದ ಸಾರ್ವಜನಿಕರು ಹಬ್ಬದ ನಂತರ ಬಾಳೆಕಂಬ, ಹೂಗಳನ್ನು ಎಲ್ಲೆಂದರಲ್ಲಿ ಎಸೆಯದೆ ಕಸದ ಬುಟ್ಟಿಗೆ ಹಾಕಿ ಸಹಕರಿಸಬೇಕಿದೆ. ಆದರೆ, ಇದನ್ನು ಸರಿಯಾಗಿ ನಿರ್ವಹಣೆ ಮಾಡುವಲ್ಲಿ ವಿಫಲವಾಗಿದ್ದರಿಂದ ಕಸದ ಸಮಸ್ಯೆ ನಿರ್ಮಾಣವಾಗಿದೆ ಎಂದು ಪಾಲಿಕೆ ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News