ಅಫ್ಘಾನ್-ಅಮೆರಿಕ ಭದ್ರತಾ ಸಭೆಯಲ್ಲಿ ಗುಂಡುಹಾರಾಟ: ಪೊಲೀಸ್ ವರಿಷ್ಠ ಮೃತ್ಯು

Update: 2018-10-19 16:50 GMT

ಕಂದಹಾರ್,ಅ.18: ಅಫ್ಘಾನಿಸ್ತಾನದ ಕಂದಹಾರ್‌ನಲ್ಲಿ ಅಮೆರಿಕದ ಕಮಾಂಡರ್ ಜನರಲ್ ಸ್ಕಾಟ್ ಮಿಲ್ಲರ್ ಗುರುವಾರ ಭಾಗವಹಿಸಿದ್ದ ಉನ್ನತ ಮಟ್ಟದ ಭದ್ರತಾ ಸಭೆಯಲ್ಲಿ ಬಂದೂಕುಧಾರಿಯೊಬ್ಬ ಗುಂಡು ಹಾರಿಸಿದ್ದು, ಘಟನೆಯಲ್ಲಿ ಅಫ್ಘಾನಿಸ್ತಾನದ  ಭದ್ರತಾ ಮುಖ್ಯಸ್ಥ ಜನರಲ್ ಅಬ್ದುಲ್ ರಾಝಿಕ್ ಹಾಗೂ ಓರ್ವ ಪತ್ರಕರ್ತ ಸಾವನ್ನಪ್ಪಿದ್ದಾರೆ.

 ಈ ಭಯೋತ್ಪಾದಕ ದಾಳಿಯ ಹೊಣೆಯನ್ನು ತಾಲಿಬಾನ್ ವಹಿಸಿಕೊಂಡಿದೆ. ಅಫ್ಘಾನಿಸ್ತಾನದ ಸಂಸದೀಯ ಚುನಾವಣೆಗೆ ಎರಡು ದಿನಗಳಿರುವಂತೆಯೇ ಈ ದಾಳಿ ನಡೆದಿದೆ. ಬಂಡುಕೋರರ ವಿರುದ್ಧ ಬಲವಾದ ಸಮರವನ್ನು ಘೋಷಿಸಿರುವ ಕಂದಹಾರ್ ಪೊಲೀಸ್ ವರಿಷ್ಠ ಜನರಲ್ ಅಬ್ದುಲ್ ರಾಝಿಕ್ ಅವರನ್ನು ಗುರಿಯಾಗಿಸಿ ತಾನು ಈ ದಾಳಿ ನಡೆಸಿದ್ದೇನಂದು ಅದು ಹೇಳಿದೆ.

ದಾಳಿಯಲ್ಲಿ ರಾಝಿಕ್ ಸ್ಥಳದಲ್ಲೇ ಸಾವನ್ನಪ್ಪಿದ್ದು, ಅವರ ಏಳು ಮಂದಿ ಅಂಗರಕ್ಷಕರಿಗೆ ಗಂಭೀರವಾದ ಗಾಯಗಳಾಗಿವೆ. ಸಭೆಯಿಂದ ನಿರ್ಗಮಿಸುತ್ತಿದ್ದ ಸಂದರ್ಭದಲ್ಲಿ ಗುಂಡಿನ ದಾಳಿ ನಡೆದಿರುವುದಾಗಿ ಮೂಲಗಳು ತಿಳಿಸಿವೆ. ಘಟನೆಯಲ್ಲಿ ಮಿಲ್ಲರ್ ಅವರಿಗೆ ಗಾಯಗಳಾಗಿಲ್ಲವೆಂದು ನ್ಯಾಟೊದ ರೆಸೊಲ್ಯೂಟ್ ಸಪೋರ್ಟ್ ಮಿಶನ್‌ನ ವಕ್ತಾರ ಕರ್ನಲ್ ಕ್ನಟ್ ಪೀಟರ್ಸ್ ತಿಳಿಸಿದ್ದಾರೆ. ಆನಂತರ ನಡೆದ ಗುಂಡಿನ ಚಕಮಕಿಯಲ್ಲಿ ಓರ್ವ ಸೈನಿಕ, ನಾಗರಿಕ ಹಾಗೂ ಗುತ್ತಿಗೆದಾರ ಸೇರಿದಂತೆ ಮೂವರು ಅಮೆರಿಕನ್ ನಾಗರಕರು ಗಾಯಗೊಂಡಿದ್ದು, ಅವರನ್ನು ಸ್ಥಳದಿಂದ ತೆರವುಗೊಳಿಸಲಾಗಿದೆಯೆಂದು ಮೂಲಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News