ಸಿದ್ದರಾಮಯ್ಯರ ಘೋಷಣೆ; ಕಾಂಗ್ರೆಸ್‌ನೊಳಗಿನ ಅಸಹನೆ

Update: 2018-10-19 18:31 GMT

‘‘ಇನ್ನು ಮುಂದೆ ನಾನು ಯಾವುದೇ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ’’ ಎಂದಿದ್ದಾರೆ ಮಾಜಿ ಮುಖ್ಯಮಂತ್ರಿ, ಕಾಂಗ್ರೆಸ್ ಮುಖಂಡ ಸಿದ್ದರಾಮಯ್ಯ. ಇಂತಹದೇ ಹೇಳಿಕೆಯನ್ನು ಕಳೆದ ಅವಧಿಯಲ್ಲಿ ಮುಖ್ಯಮಂತ್ರಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಸಂದರ್ಭದಲ್ಲೂ ಅವರು ನೀಡಿದ್ದರು. ಕಾಂಗ್ರೆಸ್ ಎಂದರೆ ಸಿದ್ದರಾಮಯ್ಯ ಎನ್ನುವಂತಹ ಸನ್ನಿವೇಶ ನಿರ್ಮಾಣವಾಗಿದ್ದಾಗ, ಸಿದ್ದರಾಮಯ್ಯರನ್ನು ಮಣಿಸಲು ಕಾಂಗ್ರೆಸ್‌ನೊಳಗೆ ‘ದಲಿತ ಮುಖ್ಯಮಂತ್ರಿ’ಯ ಬೇಡಿಕೆ ಸೃಷ್ಟಿಯಾಯಿತು. ಈ ಸೃಷ್ಟಿಯ ಹಿಂದೆ, ಸಿದ್ದರಾಮಯ್ಯರನ್ನು ಮುಖ್ಯಮಂತ್ರಿ ಸ್ಥಾನದಿಂದ ಇಳಿಸುವ ಉದ್ದೇಶ ಇತ್ತೇ ಹೊರತು, ದಲಿತನೊಬ್ಬನನ್ನು ಮುಖ್ಯಮಂತ್ರಿಯಾಗಿಸುವ ಪ್ರಾಮಾಣಿಕ ಕಾಳಜಿ ಇದ್ದಿರಲಿಲ್ಲ. ಸಿದ್ದರಾಮಯ್ಯ ಇರುವವರೆಗೆ ಮುಖ್ಯಮಂತ್ರಿ ಹುದ್ದೆ ಇನ್ನೊಬ್ಬರಿಗೆ ಸಿಗಲಾರದು ಎನ್ನುವ ಆತಂಕ ಮೂಲ ಕಾಂಗ್ರೆಸಿಗರದ್ದಾಗಿತ್ತು. ಈ ಸಂದರ್ಭದಲ್ಲಿ ಮೂಲ ಕಾಂಗ್ರೆಸಿಗರ ಆತಂಕ ನಿವಾರಿಸಲು ‘‘ಇನ್ನು ನಾನು ಚುನಾವಣೆಗೆ ಸ್ಪರ್ಧಿಸುವುದಿಲ್ಲ’’ ಎಂಬ ಘೋಷಣೆಯನ್ನು ಮಾಡಿದ್ದರು. ಆ ಘೋಷಣೆಯಲ್ಲಿ ಹಲವು ಸಂದೇಶಗಳಿದ್ದವು. ‘‘ಈ ಬಾರಿ ನಾನು ಐದು ವರ್ಷ ಮುಖ್ಯಮಂತ್ರಿಯಾಗಿ ಮುಂದುವರಿಯಲು ಅವಕಾಶ ನೀಡಿ. ಮುಂದಿನ ಬಾರಿ ನೀವು ಮುಖ್ಯಮಂತ್ರಿಯಾಗಿ’’ ಎಂಬ ಮನವಿ ಅದಾಗಿತ್ತು. ಸಿದ್ದರಾಮಯ್ಯ ಹೇಳಿಕೆ ಭಿನ್ನಮತವನ್ನು ಸಣ್ಣದಾಗಿ ತಣಿಸಿತ್ತು. ‘‘ಸಿದ್ದರಾಮಯ್ಯ ಸ್ಪರ್ಧಿಸುವುದಿಲ್ಲವಾದುದರಿಂದ ಮುಂದಿನ ಬಾರಿ ದಲಿತರಿಗೇ ಮುಖ್ಯಮಂತ್ರಿಯಾಗಲು ಅವಕಾಶ’’ ಎಂಬ ಭರವಸೆ ಪರಮೇಶ್ವರ್ ಬಣಕ್ಕೂ ದೊರಕಿತು. ಆದರೆ ದೊರಕಿದ ಅಪಾರ ಜನಪ್ರಿಯತೆ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಅವರನ್ನು ಸ್ಪರ್ಧಿಸುವಂತೆ ಮಾಡಿತು.

ಒಂದು ವೇಳೆ ಕಾಂಗ್ರೆಸ್‌ಗೆ ಬಹುಮತ ಬಂದರೆ ಮತ್ತೆ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿಯಾಗುವುದು ನಿಶ್ಚಯವಾಗಿತ್ತು. ಕಾಂಗ್ರೆಸ್ ಗೆದ್ದರೂ, ತಾವು ಸಿದ್ದರಾಮಯ್ಯರ ಮೂಗಿನ ನೇರಕ್ಕೇ ಕೆಲಸ ಮಾಡಬೇಕಾಗುತ್ತದೆ ಎನ್ನುವ ಕಾರಣಕ್ಕಾಗಿ ಮೂಲ ಕಾಂಗ್ರೆಸಿಗರು ಸಿದ್ದರಾಮಯ್ಯ ಚುನಾವಣೆಯಲ್ಲಿ ಗೆಲ್ಲದಂತೆ ನೋಡಿಕೊಂಡರು. ಚಾಮುಂಡೇಶ್ವರಿಯಲ್ಲಿ ಸಿದ್ದರಾಮಯ್ಯ ಸೋಲಿನ ಹಿಂದೆ ವಿರೋಧ ಪಕ್ಷಕ್ಕಿಂತ, ಕಾಂಗ್ರೆಸ್‌ನೊಳಗಿನ ಮುಖಂಡರ ಪಾತ್ರವೇ ದೊಡ್ಡದಿತ್ತು. ಬಾದಾಮಿಯಲ್ಲಿ ಸಣ್ಣ ಅಂತರದಲ್ಲಿ ಸಿದ್ದರಾಮಯ್ಯ ಗೆದ್ದರು. ಬಹುಶಃ ಅಲ್ಲಿಯೂ ಸೋತಿದ್ದರೆ ಇಂದು ಸಿದ್ದರಾಮಯ್ಯ ಕಾಂಗ್ರೆಸ್ ಪುಟದಿಂದ ಇಲ್ಲವಾಗಿ ಬಿಡುತ್ತಿದ್ದರು.

ಇದೀಗ ಮತ್ತೆ ಸಿದ್ದರಾಮಯ್ಯ ‘ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ’’ ಎಂದು ಘೋಷಿಸಿದ್ದಾರೆ. ಈ ಬಾರಿಯ ಘೋಷಣೆ, ರಾಜಕೀಯ ವಾಸ್ತವಗಳನ್ನು ಒಪ್ಪಿಕೊಂಡ ಬಳಿಕ ಹೊರಬಿದ್ದಿರುವಂತಹದು. ಈ ಘೋಷಣೆಯ ಮೂಲಕ ಪಕ್ಷದೊಳಗಿರುವ ಹಲವು ನಾಯಕರುಗಳಿಗೆ ಸಂದೇಶ ನೀಡಿದ್ದಾರೆ. ತನ್ನ ಸ್ಪರ್ಧಿಗಳಿಗೆ ನೀಡಿರುವ ಸವಾಲು ಮಾತ್ರವಲ್ಲ, ಮುಂದಿನ ದಿನಗಳಲ್ಲಿ ತನ್ನ ರಾಜಕೀಯ ನಡೆಯನ್ನು ಸೂಕ್ಷ್ಮವಾಗಿ ಬಹಿರಂಗಪಡಿಸಿದ್ದಾರೆ. ಎರಡೂ ಕ್ಷೇತ್ರಗಳಲ್ಲಿ ತನ್ನನ್ನು ಸೋಲಿಸಲು ಸರ್ವ ಪ್ರಯತ್ನ ನಡೆಸಿದ ಕಾಂಗ್ರೆಸ್‌ನೊಳಗಿನವರೇ ಆಗಿರುವ ಮುಖಂಡರ ಕುರಿತಂತೆ ಅವರು ಇನ್ನೂ ಅಸಮಾಧಾನಗಳನ್ನು ಉಳಿಸಿಕೊಂಡಿದ್ದಾರೆ. ಅದನ್ನು ಈಗಾಗಲೇ ಹಲವು ಬಾರಿ ಪ್ರಕಟಪಡಿಸಿದ್ದಾರೆ. ಹಾಗೆಯೇ, ತನ್ನನ್ನು ಸಂಪೂರ್ಣ ನಿರ್ಲಕ್ಷಿಸಿ ಮೈತ್ರಿ ಸರಕಾರ ರಚನೆಗೆ ಮುಂದಾದಾಗ, ತನ್ನ ವರ್ಚಸ್ಸಿನ ಬಿಸಿಯನ್ನೂ ಮುಟ್ಟಿಸಿದ್ದಾರೆ. ಸಿದ್ದರಾಮಯ್ಯರನ್ನು ಸಂಪೂರ್ಣವಾಗಿ ಹೊರಗಿಟ್ಟು ಕಾಂಗ್ರೆಸನ್ನು ಮುಂದೆ ಒಯ್ಯುವುದು ಕಷ್ಟ ಎನ್ನುವುದು ಉಳಿದ ನಾಯಕರಿಗೂ ಮನವರಿಕೆಯಾಗಿದೆ.

ಬಹುಶಃ, ಕಳೆದ ಚುನಾವಣೆಯಲ್ಲಿ ತನಗೆ ಮುಖಭಂಗ ಉಂಟು ಮಾಡಿದ ಕಾಂಗ್ರೆಸ್‌ನೊಳಗಿನ ನಾಯಕರಿಗೆ ಪಾಠ ಕಲಿಸಿಯೇ ರಾಜಕೀಯ ನಿವೃತ್ತಿಯಾಗಲು ಅವರು ನಿರ್ಧರಿಸಿದಂತಿದೆ. ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎನ್ನುವ ಘೋಷಣೆ ‘‘ಅಧಿಕಾರದಿಂದ ದೂರ ಉಳಿಯಲಿದ್ದೇನೆ’’ ಎಂಬ ಸಂದೇಶವೂ ಹೌದು. ಅವರು ಕಾಂಗ್ರೆಸ್‌ನೊಳಗೇ ‘ಕಿಂಗ್ ಮೇಕರ್’ ಆಗಲು ಹೊರಟಿದ್ದಾರೆ. ಅಂದರೆ ಡಿಕೆಶಿ ವಿರೋಧಿ ಗುಂಪುಗಳು ಇದೀಗ ನಿರಾಳವಾಗಿ ಸಿದ್ದರಾಮಯ್ಯರನ್ನು ಆಶ್ರಯಿಸಬಹುದಾಗಿದೆ. ಭವಿಷ್ಯದಲ್ಲಿ ತಾನು ಮುಖ್ಯಮಂತ್ರಿಯಾಗದಿದ್ದರೂ ಪರವಾಗಿಲ್ಲ, ತನ್ನ ಎದುರಾಳಿ ಮುಖ್ಯಮಂತ್ರಿಯಾಗುವುದಕ್ಕೆ ಆಸ್ಪದ ನೀಡಲಾರೆ ಎಂಬ ಮನಸ್ಥಿತಿಯನ್ನು ಸದ್ಯಕ್ಕೆ ಸಿದ್ದರಾಮಯ್ಯ ಹೊಂದಿದಂತಿದೆ. ಯಾಕೆಂದರೆ, ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದಷ್ಟೇ ಸಿದ್ದರಾಮಯ್ಯ ಹೇಳಿದ್ದಾರೆ, ರಾಜಕೀಯದಿಂದ ದೂರ ಸರಿಯುವೆ ಎಂದು ಹೇಳಿಲ್ಲ. ಇದೇ ಹೊತ್ತಿನಲ್ಲಿ ‘ಲಿಂಗಾಯತ ಪ್ರತ್ಯೇಕ ಧರ್ಮ’ ಆಂದೋಲನವನ್ನು ಕಾಂಗ್ರೆಸ್ ಬೆಂಬಲಿಸಿದ್ದು ಸೋಲಿಗೆ ಕಾರಣವಾಯಿತು ಎನ್ನುವಂತಹ ಬೇಜವಾಬ್ದಾರಿ ಹೇಳಿಕೆಯನ್ನು ಡಿಕೆಶಿಯವರು ಆಡಿದ್ದಾರೆ.

ಪರೋಕ್ಷವಾಗಿ ಈ ಹೇಳಿಕೆ, ಸಿದ್ದರಾಮಯ್ಯರನ್ನು ಗುರಿಯಾಗಿಸಿ ನೀಡಿದ್ದಾಗಿದೆ. ಈ ಮೂಲಕ, ಲಿಂಗಾಯತ ಪ್ರತ್ಯೇಕ ಧರ್ಮವನ್ನು ಕಾಂಗ್ರೆಸ್ ಕಳೆದ ಚುನಾವಣೆಯಲ್ಲಿ ರಾಜಕೀಯವಾಗಿ ಬಳಸಿಕೊಳ್ಳಲು ಯತ್ನಿಸಿತ್ತು ಎನ್ನುವುದನ್ನು ಅವರು ಒಪ್ಪಿಕೊಂಡಂತಾಗಿದೆ. ಈ ಹಿಂದೆ ಯಾವುದೇ ಲಿಂಗಾಯತ ಧರ್ಮ ಚಳವಳಿಗೆ ಬೆಂಬಲ ನೀಡದೇ ಇದ್ದಾಗಲೂ ಎರಡೆರಡು ಬಾರಿ ಕಾಂಗ್ರೆಸ್ ಮಕಾಡೆ ಮಲಗಿತ್ತು. ಈ ಬಾರಿ ಕಾಂಗ್ರೆಸ್ ನೆಲಕಚ್ಚಲು ಪಕ್ಷದೊಳಗಿನ ಒಳಸಂಚುಗಳೂ ಕಾರಣವಾಗಿದ್ದವು. ಜೊತೆಗೆ ಹಿಂದುತ್ವದ ಅಲೆಯೂ ತನ್ನ ಕೊಡುಗೆಯನ್ನು ನೀಡಿತ್ತು. ಬಿಜೆಪಿ ಚೆಲ್ಲಿದ ಹಣವೂ ಕಾಂಗ್ರೆಸ್ ಪಕ್ಷವನ್ನು ಅಸಹಾಯಕವಾಗಿಸಿತ್ತು. ಲಿಂಗಾಯತ ಪ್ರತ್ಯೇಕ ಧರ್ಮ ಒಂದು ರಾಜಕೀಯೇತರ ಚಳವಳಿ. ಅದಕ್ಕೆ ಹಲವು ದಶಕಗಳ ಇತಿಹಾಸವಿದೆ. ಲಿಂಗಾಯತ ಧರ್ಮದ ಬಗ್ಗೆಯಾಗಲಿ, ಬಸವಣ್ಣನ ಚಳವಳಿಯ ಬಗ್ಗೆಯಾಗಲಿ ಎಳ್ಳಷ್ಟೂ ತಿಳಿದುಕೊಂಡಿರದ ಡಿಕೆಶಿಯಂತಹ ನಾಯಕರು, ಆ ಕುರಿತಂತೆ ಹೇಳಿಕೆ ಕೊಟ್ಟು ಕಾಂಗ್ರೆಸ್ ಪಕ್ಷಕ್ಕೆ ಇನ್ನಷ್ಟು ಹಾನಿಯನ್ನು ಉಂಟು ಮಾಡಿದ್ದಾರೆ.

ಒಂದೆಡೆ ಕಾಂಗ್ರೆಸ್ ಈಗಾಗಲೇ ಲಿಂಗಾಯತ ಸ್ವತಂತ್ರ ಧರ್ಮದ ಹಿನ್ನೆಲೆಯಲ್ಲಿ ವೀರಶೈವರ ವೈರವನ್ನು ಕಟ್ಟಿಕೊಂಡಾಗಿದೆ. ವೀರಶೈವರಲ್ಲಿ ಬಹುಸಂಖ್ಯಾತರು ಆರೆಸ್ಸೆಸ್ ಮತ್ತು ಬಿಜೆಪಿಯ ಹಿಂಬಾಲಕರು. ಇದೀಗ ಕಾಂಗ್ರೆಸ್‌ನ ಇಬ್ಬಗೆಯ ನೀತಿಯಿಂದಾಗಿ ಲಿಂಗಾಯತರೂ ಕಾಂಗ್ರೆಸ್ ಕಡೆಗೆ ಅನುಮಾನದಿಂದ ನೋಡುವಂತಾಗಿದೆ. ಲಿಂಗಾಯತ ಸ್ವತಂತ್ರ ಧರ್ಮ ಚಳವಳಿ ಕಾಂಗ್ರೆಸ್‌ನಿಂದ ಅಂತರವನ್ನು ಕಾಪಾಡಿಕೊಂಡು ಇನ್ನಷ್ಟು ಬೆಳೆಯುವ ಅಗತ್ಯವಿದೆ ಎನ್ನುವುದನ್ನು ಡಿಕೆಶಿ ಹೇಳಿಕೆಯಿಂದಲಾದರೂ ಲಿಂಗಾಯತ ನಾಯಕರಿಗೆ ಮನವರಿಕೆಯಾಗಬೇಕು. ಸಿದ್ದರಾಮಯ್ಯ ಅವರಿಗೆ ಈ ನೆಲದ ಇತಿಹಾಸದ ಅರಿವಿದೆ. ಅವರು ಹಣ ಬಲ, ಗೂಂಡಾಗಿರಿಯಿಂದ ತನ್ನ ರಾಜಕೀಯ ಬದುಕನ್ನು ರೂಪಿಸಿಕೊಂಡವರಲ್ಲ. ಸೋತರೂ, ಗೆದ್ದರೂ ಅವರಿಗೆ ಕರ್ನಾಟಕ ರಾಜಕೀಯ ಇತಿಹಾಸದಲ್ಲಿ ಒಂದು ಸ್ಥಾನ ಇದ್ದೇ ಇದೆ. ಈ ನಿಟ್ಟಿನಲ್ಲಿ ಅವರು ಚುನಾವಣೆಗೆ ನಿಲ್ಲದೇ ಇದ್ದರೂ, ಕಾಂಗ್ರೆಸ್‌ನೊಳಗಿರುವ ಹಣ, ಗೂಂಡಾಗಿರಿ, ಅಪರಾಧಿ ಹಿನ್ನೆಲೆಯಿರುವ ರಾಜಕಾರಣಿಗಳಿಗೆ ಪರ್ಯಾಯವಾಗಿ, ವೌಲ್ಯಾಧಾರಿತ ರಾಜಕೀಯಕ್ಕೆ ಮರು ಜೀವ ಕೊಡಲು ಸಾಧ್ಯವಿದೆ. ‘ಚುನಾವಣೆಗೆ ನಿಲ್ಲುವುದಿಲ್ಲ’ ಎನ್ನುವ ಘೋಷಣೆ ಅವರನ್ನು ಪಕ್ಷದೊಳಗೆ ಇನ್ನಷ್ಟು ನಿರಾಳವಾಗಿ ಕಾರ್ಯನಿರ್ವಹಿಸುವುದಕ್ಕೆ ಅವಕಾಶ ಮಾಡಿಕೊಡಲಿದೆ. ಆ ಅವಕಾಶವನ್ನು ಬಳಸಿಕೊಂಡು ಹೊಸ ಮುತ್ಸದ್ದಿ ನಾಯಕರನ್ನು ನಾಡಿಗೆ ಕೊಡುವ ಕಡೆಗೆ ಅವರು ಗಮನ ಹರಿಸಬೇಕು. ಇದರಿಂದ ನಾಡಿಗೂ, ಕಾಂಗ್ರೆಸ್ ಪಕ್ಷಕ್ಕೂ ಒಳಿತಾಗಲಿದೆ. ಈ ನಿಟ್ಟಿನಲ್ಲಿ ಕಾಂಗ್ರೆಸ್ ಹೈಕಮಾಂಡ್, ಸಿದ್ದರಾಮಯ್ಯ ಅವರ ರಾಜಕೀಯ ಅನುಭವಗಳನ್ನು ಗರಿಷ್ಠ ಮಟ್ಟದಲ್ಲಿ ಬಳಸಿಕೊಳ್ಳಲು ಮುಂದಾಗಬೇಕಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News