ಅಮೃತಸರ ರೈಲು ದುರಂತ: ಮೃತಪಟ್ಟವರ ಸಂಖ್ಯೆ 61ಕ್ಕೆ ಏರಿಕೆ

Update: 2018-10-20 16:06 GMT

ಅಮೃತಸರ, ಅ. 20: ದಸರಾ ಆಚರಣೆ ಹಿನ್ನೆಲೆಯಲ್ಲಿ ಶುಕ್ರವಾರ ರಾವಣ ದಹನವನ್ನು ರೈಲ್ವೆ ಹಳಿ ಮೇಲೆ ನಿಂತು ವೀಕ್ಷಿಸುತ್ತಿದ್ದ ಜನರ ಮೇಲೆ ವಿರುದ್ಧ ದಿಕ್ಕಿನಲ್ಲಿ ಸಂಚರಿಸುತ್ತಿದ್ದ ಎರಡು ರೈಲುಗಳು ಹರಿದು ಸಂಭವಿಸಿದ ದುರಂತದಲ್ಲಿ ಮೃತಪಟ್ಟವರ ಸಂಖ್ಯೆ 61ಕ್ಕೆ ಏರಿಕೆಯಾಗಿದೆ.

ಗಾಯಗೊಂಡವರ ಸಂಖ್ಯೆ 74ಕ್ಕೆ ಏರಿಕೆಯಾಗಿದೆ. ಶುಕ್ರವಾರ ಸಂಜೆ ಸುಮಾರು 7.15ಕ್ಕೆ ರಾವಣ ದಹನ ವೀಕ್ಷಣೆಗೆ ಅಮೃತಸರ-ಜಲಾಂಧರ್‌ನ ಎರಡು ರೈಲ್ವೇ ಹಳಿಯಿಂದ 70 ಮೀಟರ್ ದೂರದ ಜೋಡಾ ಫಾಟಕ್‌ನ ಮಾನವ ಸಹಿತ ಕ್ರಾಸಿಂಗ್ ಸಮೀಪದ ಮೈದಾನದಲ್ಲಿ ಸಾವಿರಾರು ಜನರು ಸೇರಿದ್ದರು. ರಾವಣ ದಹನಕ್ಕಿಂತ ಮುನ್ನ ನಡೆದ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಸಚಿವ ಹಾಗೂ ಅಮೃತಸರ ಪೂರ್ವದ ಶಾಸಕ ನವಜೋತ್ ಸಿಂಗ್ ಸಿಧು ಅವರ ಪತ್ನಿ ನವಜೋತ್ ಕೌರ್ ಸಿಧು ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದರು. ಈ ಕ್ರಾಸಿಂಗ್ ಅಮೃತಸರ ರೈಲ್ವೆ ನಿಲ್ದಾಣದಿಂದ 3 ಕಿ.ಮೀ. ದೂರದಲ್ಲಿದೆ. ವಾಹನಗಳ ಸಂಚಾರದ ಹಿನ್ನೆಲೆಯಲ್ಲಿ ಇದನ್ನು ಮುಚ್ಚಲಾಗಿತ್ತು. ಆದರೆ, ಜನರು ಮೈದಾನದಿಂದ ರೈಲ್ವೇ ಹಳಿ ಇರುವ ಸ್ಥಳದ ವರಗೆ ಹರಡಿದ್ದರು. ಹಲವರು ರೈಲು ಹಳಿ ಮೇಲೆ ನಿಂತಿದ್ದರು.

ಪರವಾನಿಗೆ ನೀಡಿಲ್ಲ: ನಗರಾಡಳಿತ

ಇಲ್ಲಿನ ದೋಬಿ ಘಾಟ್ ಮೈದಾನದಲ್ಲಿ ದಸರಾ ಉತ್ಸವ ನಡೆಸಲು ಪರವಾನಿಗೆ ನೀಡಿರಲಿಲ್ಲ ಎಂದು ಅಮೃತಸರ ನಗರಾಡಳಿತ ಶನಿವಾರ ಹೇಳಿದೆ. ‘‘ದಸರಾ ಕಾರ್ಯಕ್ರಮ ಆಯೋಜಿಸಲು ಯಾರೂ ಪರವಾನಿಗೆ ನೀಡಿಲ್ಲ. ಪರವಾನಿಗೆಗಾಗಿ ಯಾರೊಬ್ಬರೂ ಅಮೃತಸರ ನಗರಾಡಳಿತ ಕಚೇರಿಯಲ್ಲಿ ಅರ್ಜಿ ಸಲ್ಲಿಸಿಲ್ಲ’’ ಎಂದು ಅಮೃತಸರ ನಗರಾಡಳಿತದ ಆಯುಕ್ತ ಸೋನಾಲಿ ಗಿರಿ ತಿಳಿಸಿದ್ದಾರೆ.

ಹಲವು ಕುಟುಂಬಗಳ ನಾಶ

ರಾವಣ ಪ್ರತಿಕೃತಿಯ ಒಳಗಿದ್ದ ಸುಡುಮದ್ದುಗಳು ಸಿಡಿದ ಸದ್ದಿನಿಂದ ರೈಲು ಆಗಮನದ ಸದ್ದು ಕೇಳಿಸದೇ ಇದ್ದುದರಿಂದ ಜೌರಾ ಫತಾಕ್ (ಲೆವೆಲ್ ಕ್ರಾಸಿಂಗ್) ನಲ್ಲಿ ಸಂಭವಿಸಿದ ರೈಲು ಅಪಘಾತಕ್ಕೆ ಹಲವು ಕುಟುಂಬಗಳು ಬಲಿಯಾಗಿವೆ. ‘‘ನಮಗೆ ರೈಲು ಬರುವ ಸದ್ದು ಕೇಳಲಿಲ್ಲ. ಆಗ ಕತ್ತಲಿತ್ತು ಹಾಗೂ ಪ್ರತಿಯೊಬ್ಬರು ರಾವಣ ದಹನ ನೋಡುತ್ತಿದ್ದರು. ಇದ್ದಕ್ಕಿದ್ದಂತೆ ರೈಲು ಬಂತು.’’ ಎಂದು ಸಮೀಪದಲ್ಲೇ ವಾಸಿಸುತ್ತಿರುವ ವಲಸೆ ಕಾರ್ಮಿಕ ಮಿಂಟೂ ಹೇಳಿದ್ದಾರೆ. ಈ ಘಟನೆಯಲ್ಲಿ ಸಾವನ್ನಪ್ಪಿದ ಹೆಚ್ಚಿನ ಜನರು ವಲಸೆ ಕಾರ್ಮಿಕರು. ‘‘ಹಲವು ಕುಟುಂಬಗಳು ನಾಶವಾಗಿವೆ’’ ಎಂದು ಅವರು ಹೇಳಿದ್ದಾರೆ.

ರೈಲು ಸಂಚಾರ ಸ್ಥಗಿತ

ರೈಲ್ವೆ ಶನಿವಾರ ಜಲಾಂಧರ್ ಅಮೃತಸರ ನಡುವೆ ಸಂಚರಿಸುವ 37 ರೈಲುಗಳ ಸಂಚಾರವನ್ನು ರದ್ದುಪಡಿಸಿದೆ. 16 ರೈಲುಗಳ ಸಂಚಾರ ಮಾರ್ಗವನ್ನು ತಿರುಗಿಸಿದೆ. 10 ಮೈಲ್/ಎಕ್ಸ್‌ಪ್ರೆಸ್ ರೈಲು ಹಾಗೂ 27 ಪ್ಯಾಸೆಂಜರ್ ರೈಲುಗಳ ಸಂಚಾರವನ್ನು ರದ್ದುಪಡಿಸಲಾಗಿದೆ. 16 ರೈಲುಗಳ ಮಾರ್ಗವನ್ನು ಬದಲಿಸಲಾಗಿದೆ ಎಂದು ಉತ್ತರ ರೈಲ್ವೆಯ ವಕ್ತಾರ ದೀಪಕ್ ಕುಮಾರ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News