ಶೋಭಾ ಕರಂದ್ಲಾಜೆ ವಿರುದ್ಧ ಕಾಂಗ್ರೆಸ್ ಪ್ರತಿಭಟನೆ

Update: 2018-10-20 14:32 GMT

ಬೆಂಗಳೂರು, ಅ.20: ಪ್ರಚಾರ ಪಡೆಯುವ ಸಲುವಾಗಿ ಸಂಸದೆ ಶೋಭಾ ಕರಂದ್ಲಾಜೆ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಟೀಕೆ ಮಾಡುತ್ತಿದ್ದಾರೆ ಎಂದು ಆರೋಪಿಸಿ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

ಶನಿವಾರ ನಗರದ ಮೌರ್ಯ ವೃತ್ತದ ಗಾಂಧಿ ಪ್ರತಿಮೆ ಎದುರು ಬಳಿಕ ಬೆಂಗಳೂರು ಕೇಂದ್ರ ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ನೇತೃತ್ವದಲ್ಲಿ ಜಮಾಯಿಸಿದ ಕಾಂಗ್ರೆಸ್ ಕಾರ್ಯಕರ್ತರು, ಶೋಭಾ ಕರಂದ್ಲಾಜೆ ಕ್ಷಮೆಯಾಚಿಸಬೇಕು ಎಂದು ಒತ್ತಾಯಿಸಿದರು.

ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಕಾಂಗ್ರೆಸ್ ಮುಖಂಡ ಎಸ್. ಮನೋಹರ್, ಬಿಜೆಪಿ ಸಂಸದೆ ಶೋಭಾ, ಪ್ರಚಾರಕ್ಕಾಗಿ ಹಿರಿಯರ ವಿರುದ್ದ ಕೀಳುಮಟ್ಟದ ಭಾಷೆ ಬಳಸುತ್ತಿದ್ದಾರೆ. ಶೋಭಾ ಅವರನ್ನು ಬಿಜೆಪಿ ಪಕ್ಷದ ನಾಯಕರು ಅವರ ಸರಕಾರವಿದ್ದಾಗ ಸಚಿವ ಸ್ಥಾನದಿಂದ ಕೆಳಗೆ ಇಳಿಸಿರುವುದನ್ನ ನೆನಪು ಮಾಡಿಕೊಳ್ಳಬೇಕು ಎಂದು ತಿಳಿಸಿದರು.

ಬಿ.ಎಸ್.ಯಡಿಯೂರಪ್ಪ ಅವರು ರಾಜಕೀಯ ಹಿನ್ನಡೆಯಾಗಿ ಕೆಜೆಪಿ ಪಕ್ಷ ಕಟ್ಟಲು ಶೋಭಾ ಅವರೇ ಕಾರಣವೆಂಬುದು ಜಗಜ್ಜಾಹೀರಾಗಿದೆ. ಐದು ವರ್ಷಗಳ ಕಾಲ ಹಸಿವು ಮುಕ್ತ ಮತ್ತು ಪಾರದರ್ಶಕ ಆಡಳಿತ, ಭ್ರಷ್ಟ ಮುಕ್ತ ಆಡಳಿತ ನೀಡಿದ ರಾಜ್ಯದ ಜನಪ್ರಿಯ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಹಾವು ಎಂದೆಲ್ಲಾ ಟೀಕೆ ಮಾಡುವುದು ಸರಿಯಲ್ಲ ಎಂದು ಹೇಳಿದರು.

ರಾಜ್ಯದಲ್ಲಿ ಉಪಚುನಾವಣೆ ನಡೆಯುವ ವೇಳೆ ಕಾನೂನು ಸುವ್ಯವಸ್ತೆ ಕದಡಲು ಟಿಪ್ಪು ಜಯಂತಿ ವಿಷಯವನ್ನು ಪ್ರಸ್ತಾಪಿಸಿ ಕೋಮು ಗಲಭೆ ನಡೆಯಲು ಪ್ರಚೋದನ ಹೇಳಿಕೆ ನೀಡಿರುತ್ತಾರೆ. ಸಮ್ಮಿಶ್ರ ಸರಕಾರ ರೈತರ ಸಾಲಮನ್ನ ಮಾಡಿರುವುದನ್ನ ಸಹಿಸದೆ ಸರಕಾರದ ವಿರುದ್ದ ಆಧಾರರಹಿತ ಹೇಳಿಕೆ ನೀಡುವುದು ಕಾಯಕವಾಗಿದೆ. ಅಸಂಸದೀಯ ಪದಬಳಕೆ ಮಾಡುವ ಶೋಭಾರವರು ಮೊದಲು ತಮ್ಮ ಪಕ್ಷದಲ್ಲಿರುವ ಹಾವು, ಚೇಳುಗಳ ಬಗ್ಗೆ ಮಾತಾಡಲಿ ಎಂದು ವಾಗ್ದಾಳಿ ನಡೆಸಿದರು.

ಪ್ರತಿಭಟನೆಯಲ್ಲಿ ಕಾಂಗ್ರೆಸ್ ಮುಖಂಡರಾದ ಜನಾರ್ಧನ್, ಸಲೀಂ, ಹೇಮರಾಜು, ಪರಿಸರ ರಾಮಕೃಷ್ಣ , ರಾಜು, ರವಿಶೇಖರ್ ಸೇರಿದಂತೆ ಪ್ರಮುಖರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News