ಉರ್ದು ಕವಿ ಹಶೀಮ್ ಮೇಲೆ ಹಲ್ಲೆ, ಆ್ಯಸಿಡ್ ದಾಳಿ

Update: 2018-10-21 03:42 GMT

ಆಗ್ರಾ, ಅ. 21: ಯುವತಿಯೊಬ್ಬಳಿಗೆ ಲೈಂಗಿಕ ಕಿರುಕುಳ ನೀಡಿದ ಯುವಕರ ಜತೆ ಸಂಘರ್ಷಕ್ಕೆ ಇಳಿದ ಖ್ಯಾತ ಉರ್ದು ಸಾಹಿತಿ ಹಶೀಮ್ ಫಿರೋಝಾಬಾದಿ ಅವರನ್ನು ಗುಂಪು ಥಳಿಸಿ ಅವರ ಮೇಲೆ ಆ್ಯಸಿಡ್ ಎರಚಿರುವ ಘಟನೆ ಶನಿವಾರ ನಡೆದಿದೆ.

ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದ್ದು, ಫಿರೋಝಾಬಾದಿ ಅವರತ್ತ ಎಸೆದಿರುವ ರಾಸಾಯನಿಕವನ್ನು ದೃಢಪಡಿಸಲಾಗುತ್ತಿದೆ ಎಂದು ರಸೂಲ್‌ಪುರ ಪೊಲೀಸರು ಹೇಳಿದ್ದಾರೆ.

"ಶುಕ್ರವಾರ ಸ್ಥಳೀಯ ವ್ಯಕ್ತಿಯೊಬ್ಬರು, ತಮ್ಮ ಮಗಳ ಮೇಲೆ ಲೈಂಗಿಕ ಕಿರುಕುಳ ನಡೆದ ಬಗ್ಗೆ ದೂರು ನೀಡಿದರು. ಮಗಳ ಮೊಬೈಲ್ ಸಂಖ್ಯೆಯನ್ನು ಪಡೆದುಕೊಂಡ ಯುವಕರು, ಆಕೆ ಕೋಚಿಂಗ್ ಕ್ಲಾಸ್‌ಗೆ ಹೋಗುವ ವೇಳೆ ಕಿರುಕುಳ ನೀಡುತ್ತಿದ್ದರು. ಈ ಬಗ್ಗೆ ಪೊಲೀಸರಿಗೆ ದೂರು ನೀಡುವಂತೆ ನಾನು ಸಲಹೆ ಮಾಡಿದೆ. ಆದರೆ ಅದಕ್ಕೆ ಅವರು ಒಪ್ಪಲಿಲ್ಲ. ಈ ಹಿನ್ನೆಲೆಯಲ್ಲಿ ಆರೋಪಿಗಳನ್ನು ಕರೆದು ಅವರಿಗೆ ಬುದ್ಧಿವಾದ ಹೇಳಲು ಮುಂದಾದೆ. ಅದಕ್ಕೆ ಅವರು ಗಮನ ಕೊಡಲಿಲ್ಲ" ಎಂದು ಹಶೀಮ್ ದೂರವಾಣಿ ಮೂಲಕ ವಿವರಿಸಿದರು.

"ಆರೋಪಿಗಳ ಬಳಿಗೆ ಶುಕ್ರವಾರ ರಾತ್ರಿ ತೆರಳಿ, ಅವರ ಮನವೊಲಿಸಲು ಪ್ರಯತ್ನಿಸಿದೆ. ಆದರೆ ಆರೋಪಿಗಳು ಹಾಗೂ ಅವರ ಸಹೋದರರು ನನ್ನ ಮೇಲೆ ದಾಳಿ ಮಾಡಿದರು. ನನ್ನತ್ತ ಆ್ಯಸಿಡ್ ಸುರಿದರು. ಮುಖ ಹಾಗೂ ಕೈಗೆ ಇದರಿಂದ ಸುಟ್ಟ ಗಾಯಗಳಾಗಿವೆ" ಎಂದು ಹೇಳಿದ್ದಾರೆ.

ರಹಿ ನಗರದ ನಿವಾಸಿಯಾಗಿರುವ ಫಿರೋಝಾಬಾದಿ, ಸೈಫ್, ಮುಸಾಫ್, ಸಕ್ಲೇನ್ ಸುನ್ನಿ ಮತ್ತು ಅಚ್ಚೇ ಎಂಬುವವರ ವಿರುದ್ಧ ದೂರು ನೀಡಿದ್ದಾರೆ. ಆರೋಪಿಗಳು ಪರಾರಿಯಾಗಿದ್ದಾರೆ. ಈ ಘಟನೆಯನ್ನು ಪ್ರಮುಖ ಸಾಹಿತಿಗಳು ಖಂಡಿಸಿದ್ದಾರೆ. ಬುದ್ಧಿವಾದ ಹೇಳಲು ಹೋದ ಕವಿಯ ಮೇಲೆ ಹಲ್ಲೆ ನಡೆದಿರುವುದು ಖಂಡನೀಯ. ತಕ್ಷಣ ಆರೋಪಿಗಳನ್ನು ಪತ್ತೆ ಮಾಡಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಹಿರಿಯ ಕವಿ ಅಮೀರ್ ಅಕ್ಬರಾಬಾದಿ ಆಗ್ರಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News