ರಾಷ್ಟ್ರೀಯ ಪೊಲೀಸ್ ಸ್ಮಾರಕ, ಪೊಲೀಸ್ ವಸ್ತು ಸಂಗ್ರಹಾಲಯ ದೇಶಕ್ಕೆ ಸಮರ್ಪಣೆ

Update: 2018-10-21 05:50 GMT

ಹೊಸದಿಲ್ಲಿ, ಅ.21: ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ ಪೊಲೀಸ್ ಸಿಬ್ಬಂದಿಗಳ ಗೌರವ ಪ್ರತೀಕವಾದ ರಾಷ್ಟ್ರೀಯ ಪೊಲೀಸ್ ಸ್ಮಾರಕ ಮತ್ತು ಪೊಲೀಸ್ ವಸ್ತು ಸಂಗ್ರಹಾಲಯವನ್ನು ದಿಲ್ಲಿಯ ಚಾಣಕ್ಯಪುರಿಯಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ರವಿವಾರ ಬೆಳಗ್ಗೆ ರಾಷ್ಟ್ರಕ್ಕೆ ಸಮರ್ಪಿಸಿದರು.

ರಾಷ್ಟ್ರೀಯ ಪೊಲೀಸ್ ಸ್ಮಾರಕವನ್ನು ಉದ್ಧಾಟಿಸಿದ ಪ್ರಧಾನಿ ಮೋದಿ ಅವರು "ಸ್ವಾತಂತ್ರ್ಯ ದೊರೆತ ಬಳಿಕ 34,844  ಪೊಲೀಸರು ಕರ್ತವ್ಯದಲ್ಲಿರುವಾಗಲೇ ಪ್ರಾಣ ತ್ಯಾಗ ಮಾಡಿದ್ದಾರೆ. 424 ಪೊಲೀಸರು ಈ ವರ್ಷ ಹುತಾತ್ಮರಾಗಿದ್ದಾರೆ.  ಕಾಶ್ಮೀರ, ಪಂಜಾಬ್‌, ಅಸ್ಸಾಂ, ನಾಗಾಲ್ಯಾಂಡ್‌, ಮಣಿಪುರ, ಮಿಜೋರಾಂ ಮತ್ತು ನಕ್ಸಲೀಯರ ಹಾವಳಿಯ ಪ್ರದೇಶಗಳಲ್ಲಿ ಕರ್ತವ್ಯ ನಿರ್ವಹಿಸುವಾಗ  ಬಲಿಯಾಗಿದ್ದಾರೆ, ಅಪರಾಧ ತಡೆ ಮತ್ತು ಕಾನೂನು ಸುವ್ಯವಸ್ಥೆ ಕಾಪಾಡುವ ವೇಳೆ ಆನೇಕ ಮಂದಿ ಪೊಲೀಸರು ಪ್ರಾಣತ್ಯಾಗ ಮಾಡಿದ್ದಾರೆ"  ಎಂದು ಪ್ರಧಾನಿ ಮೋದಿ ವಿವರಿಸಿದರು

ದೇಶಕ್ಕಾಗಿ  ಪೊಲೀಸರು, ಪ್ಯಾರಾ ಮಿಲಿಟರಿ  ಫೋರ್ಸ್  ಮತ್ತು ಎನ್ ಡಿಆರ್ ಎಫ್ ಸಿಬ್ಬಂದಿಗಳು ನೀಡಿದ ಕೊಡುಗೆಯನ್ನು ಸ್ಮರಿಸಿದರು. ರಾಷ್ಟ್ರೀಯ ಪೊಲೀಸ್ ಸ್ಮಾರಕ ನಿರ್ಮಾಣಕ್ಕೆ  ಸ್ವಾತಂತ್ರ್ಯ ದೊರೆತು 70 ವರ್ಷ ಗಳ ಕಾಲ ಕಾಯಬೇಕಾಯಿತು. ಯಾಕೆ ಇಷ್ಟು ತಡವಾಗಿದೆ ಎಂದು ನಾವು ಆತ್ಮಾವಲೋಕನ ಮಾಡಬೇಕಾಗಿದೆ ಎಂದರು.

ದಿಲ್ಲಿಯ ಚಾಣಕ್ಯಪುರಿಯಲ್ಲಿ ಶಾಂತಿಪಥದ ಉತ್ತರ ಭಾಗದಲ್ಲಿ 6.12 ಎಕರೆ ವಿಸ್ತೀರ್ಣದ ಜಾಗದಲ್ಲಿ ನಿರ್ಮಿಸಲಾಗಿರುವ ರಾಷ್ಟ್ರೀಯ ಪೊಲೀಸ್ ಸ್ಮಾರಕ 30 ಅಡಿ ಎತ್ತರದ ಏಕಶಿಲಾ ಗ್ರಾನೈಟ್ ಸ್ತಂಭವಾಗಿದೆ.238 ಟನ್‌ ತೂಕದ ಸ್ತಂಭದಲ್ಲಿರುವ ಬಣ್ಣ ಪೊಲೀಸರ ಪರಮೊಚ್ಚ ತ್ಯಾಗದ ಮಹತ್ವವನ್ನು  ಮತ್ತು ಗೌರವವನ್ನು ಸಾರುತ್ತದೆ.

ಶಿಲ್ಪದ ತಳಭಾಗದಲ್ಲಿ ನಿರ್ಮಿಸಲಾದ 60 ಅಡಿ ಉದ್ದದ ನದಿಯು ಪೊಲೀಸ್‌ ಸಿಬ್ಬಂದಿಗಳು ಶಾಂತಿ ಮತ್ತು ಸಾರ್ವಜನಿಕ ವ್ಯವಸ್ಥೆಯ ಪಾಲನೆಗಾಗಿ ನಿರಂತರ ಸ್ವಯಂ ಸೇವೆಯ ಸಂಕೇತವಾಗಿದೆ. ಗ್ರಾನೈಟ್ ನಲ್ಲಿ  34,844 ಪೊಲೀಸ್ ಹುತಾತ್ಮರ ಹೆಸರನ್ನು ಕೆತ್ತಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News