ದೆಹಲಿಯಲ್ಲಿ ಮತ್ತೆ ಉಸಿರುಗಟ್ಟುವ ವಾತಾವರಣ: ವಾಯು ಗುಣಮಟ್ಟ ಮತ್ತಷ್ಟು ಕುಸಿತ

Update: 2018-10-21 06:05 GMT

ಹೊಸದಿಲ್ಲಿ,ಅ.21: ರಾಜಧಾನಿ ದೆಹಲಿಯಲ್ಲಿ ಕಳೆದ ರಾತ್ರಿ ವಾಯು ಗುಣಮಟ್ಟ ತೀರಾ ಕಳಪೆ ಮಟ್ಟಕ್ಕೆ ಕುಸಿದಿದ್ದು, ಅಪಾಯಕಾರಿ ಮಾಲಿನ್ಯಕಾರಕ ಕಣಗಳ ಪ್ರಮಾಣ ಮಿತಿಮೀರಿದೆ. ಪರಿಸರಸ್ನೇಹಿ ವಿಧಾನದಲ್ಲಿ ಹಬ್ಬ ಆಚರಿಸುವಂತೆ ಅಧಿಕಾರಿಗಳು ಮನವಿ ಮಾಡಿಕೊಂಡಿದ್ದರೂ, ದಸರಾ ಹಬ್ಬದ ಸಂದರ್ಭದಲ್ಲಿ ಪಟಾಕಿ ಸಿಡಿಸಿದ್ದು ಮಾಲಿನ್ಯ ಪ್ರಮಾಣ ಗಣನೀಯವಾಗಿ ಹೆಚ್ಚಲು ಕಾರಣ ಎಂದು ಹೇಳಲಾಗಿದೆ.

ಶನಿವಾರ ಸಂಜೆ ಮಾಲಿನ್ಯ ಪ್ರಮಾಣ ಅಧಿಕವಾಗಿದ್ದರಿಂದ ವಾತಾವರಣದಲ್ಲಿ ಮಬ್ಬು ಕವಿದಿತ್ತು. ಈ ಆತಂಕಕಾರಿ ಪರಿಸ್ಥಿತಿ ನಿರ್ಮಾಣಕ್ಕೆ ಹಲವು ಕಾರಣಗಳಿದ್ದು, ವಾಹನಗಳ ಮಾಲಿನ್ಯ ಮತ್ತು ನಿರ್ಮಾಣ ಚಟುವಟಿಕೆಗಳು, ಹವಾಮಾನದ ಅಂಶವಾದ ಗಾಳಿ ಬೀಸುವ ದಿಕ್ಕಿನ ಬದಲಾವಣೆ ಮತ್ತು ಬೆಳೆ ದಂಟುಗಳನ್ನು ಸುಡುತ್ತಿರುವುದು ಪ್ರಮುಖ ಕಾರಣಗಳು ಎಂದು ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳು ಹೇಳಿದ್ದಾರೆ.

ಮಾಲಿನ್ಯ ತಡೆಗೆ ಸರ್ಕಾರ ತುರ್ತು ಕ್ರಮಗಳನ್ನು ಘೋಷಿಸಿದ ಬೆನ್ನಲ್ಲೇ ಮಾಲಿನ್ಯ ಪ್ರಮಾಣ ಮತ್ತಷ್ಟು ಹೆಚ್ಚಿದೆ. ವಾಯು ಗುಣಮಟ್ಟ ತೀರಾ ಕಳಪೆ ವರ್ಗಕ್ಕೆ ಕುಸಿದಿದೆ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಇದನ್ನು ತಡೆಯುವ ನಿಟ್ಟಿನಲ್ಲಿ ವಾಹನ ನಿಲುಗಡೆ ಶುಲ್ಕವನ್ನು ನಾಲ್ಕು ಪಟ್ಟು ಹೆಚ್ಚಿಸಿ, ಮೆಟ್ರೋ ಹಾಗೂ ಬಸ್ ಸೇವೆಯನ್ನು ವಿಸ್ತರಿಸಲಾಗುವುದು ಎಂದು ಸ್ಪಷ್ಟಪಡಿಸಿದ್ದಾರೆ. ಜತೆಗೆ ರಸ್ತೆಗಳಿಗೆ ನೀರು ಚಿಮುಕಿಸುವುದು ಹಾಗೂ ಅಧಿಕ ದೂಳು ಉತ್ಪಾದನೆಯಾಗುವ ಭಾಗಗಳನ್ನು ಗುರುತಿಸುವುದು ಕೂಡಾ ನಿಯಂತ್ರಣ ಕ್ರಮದಲ್ಲಿ ಸೇರಿದೆ ಎಂದು ವಿವರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News