ಸಿಬಿಐ ನಂ.2 ಅಧಿಕಾರಿ ಈಗ ಲಂಚ ಪ್ರಕರಣದಲ್ಲಿ ನಂ.1 ಆರೋಪಿ!

Update: 2018-10-21 07:07 GMT
ರಾಕೇಶ್ ಆಸ್ಥಾನಾ

ಹೊಸದಿಲ್ಲಿ,ಅ.21: ಕೇಂದ್ರ ತನಿಖಾ ಸಂಸ್ಥೆಯ ಎರಡನೇ ಅತ್ಯುನ್ನತ ಹುದ್ದೆಯಲ್ಲಿರುವ ವಿಶೇಷ ನಿರ್ದೇಶಕ ರಾಕೇಶ್ ಆಸ್ಥಾನಾ ಅವರನ್ನು ಲಂಚ ಪ್ರಕರಣವೊಂದರಲ್ಲಿ ಪ್ರಮುಖ ಆರೋಪಿಯಾಗಿ ಸಿಬಿಐ ಘೋಷಿಸುವ ಮೂಲಕ ದೇಶದ ಅತ್ಯುನ್ನತ ತನಿಖಾ ಸಂಸ್ಥೆಯಲ್ಲಿ ನಡೆಯುತ್ತಿರುವ ಮುಸುಕಿನ ಗುದ್ದಾಟ ಬೀದಿಗೆ ಬಂದಿದೆ.

ಎಫ್‍ಐಆರ್‍ನಲ್ಲಿ ಭಾರತದ ವಿದೇಶಾಂಗ ಗುಪ್ತಚರ ಸಂಸ್ಥೆ (ಆರ್ & ಎಡಬ್ಲ್ಯು) ವಿಶೇಷ ನಿರ್ದೇಶಕ ಸಮಂತ್ ಕುಮಾರ್ ಗೋಯಲ್ ಅವರ ಹೆಸರನ್ನೂ ಉಲ್ಲೇಖಿಸಲಾಗಿದೆ. ಆದರೆ ಅವರನ್ನು ಆರೋಪಿಯನ್ನಾಗಿ ಪರಿಗಣಿಸಿಲ್ಲ. ಕಳೆದ ಮಂಗಳವಾರ ಸಿಬಿಐ ಈ ಎಫ್‍ಐಆರ್ ಸಲ್ಲಿಸಿದೆ. ಮೊಯಿನ್ ಖುರೇಶಿ ಲಂಚ ಪ್ರಕರಣದಲ್ಲಿ ವಿಚಾರಣೆ ಎದುರಿಸುತ್ತಿರುವ ಉದ್ಯಮಿಯೊಬ್ಬರಿಂದ ಲಂಚ ಪಡೆದ ಆರೋಪದಲ್ಲಿ ರಾಕೇಶ್ ವಿರುದ್ಧ ಎಫ್‍ಐಆರ್ ಸಲ್ಲಿಸಲಾಗಿದೆ. ಮೊಯಿನ್ ಖುರೇಶಿ ಪ್ರಕರಣದ ಬಗ್ಗೆ ರಾಕೇಶ್ ನೇತೃತ್ವದ ವಿಶೇಷ ತನಿಖಾ ತಂಡ ತನಿಖೆ ನಡೆಸುತ್ತಿತ್ತು.

ಟೆಲಿಫೋನ್ ಇಂಟರ್‍ಸೆಪ್ಟ್, ವಾಟ್ಸ್ ಆ್ಯಪ್ ಸಂದೇಶ, ಹಣದ ವಿವರ ಮತ್ತು ಹೇಳಿಕೆಯನ್ನು ಮ್ಯಾಜಿಸ್ಟ್ರೇಟ್ ಮುಂದೆ ಸೆಕ್ಷನ್ 164ರಡಿ ಸಲ್ಲಿಸಿದೆ ಎಂದು ಮೂಲಗಳು ತಿಳಿಸಿವೆ. ಈ ಬಗ್ಗೆ ರಾಕೇಶ್ ಆಸ್ಥಾನಾ ಅವರ ಪ್ರತಿಕ್ರಿಯೆ ಕೇಳಿ ಕಳುಹಿಸಿದ ಸಂದೇಶಕ್ಕೆ ಉತ್ತರ ಬಂದಿಲ್ಲ.

ಕಳೆದ ಸೆಪ್ಟೆಂಬರ್ 21ರಂದು ರಾಕೇಶ್ ವಿರುದ್ಧದ ಆರು ಭ್ರಷ್ಟಾಚಾರ ಪ್ರಕರಣಗಳ ತನಿಖೆಗೆ ಸಿಬಿಐ, ಕೇಂದ್ರ ವಿಚಕ್ಷಣಾ ಆಯೋಗಕ್ಕೆ ಮನವಿ ಸಲ್ಲಿಸುವ ಮೂಲಕ ನಿರ್ದೇಶಕರು ಹಾಗೂ ವಿಶೇಷ ನಿರ್ದೇಶಕರ ನಡುವಿನ ವೈಮನಸ್ಯ ಬಹಿರಂಗವಾಗಿತ್ತು. ಸಿಬಿಐ ನಿರ್ದೇಶಕ ಅಲೋಕ್ ವರ್ಮಾ ವಿರುದ್ಧ ಇಲ್ಲಸಲ್ಲದ ಆರೋಪ ಮಾಡುವ ಮೂಲಕ ಆಸ್ಥಾನ, ಸಂಸ್ಥೆಯ ಹೆಸರಿಗೆ ಮಸಿ ಬಳಿಯುತ್ತಿದ್ದಾರೆ ಎಂದೂ ಸಿಬಿಐ ಆರೋಪಿಸಿತ್ತು.

ಈ ಬಗ್ಗೆ ಆಸ್ಥಾನ ಸರ್ಕಾರಕ್ಕೆ ಪತ್ರ ಬರೆದು, ತಮ್ಮ ಕಾರ್ಯದಲ್ಲಿ ಹಾಗೂ ತನಿಖೆಯಲ್ಲಿ ನಿರ್ದೇಶಕರು ಹಸ್ತಕ್ಷೇಪ ಮಾಡುತ್ತಿದ್ದಾರೆ ಎಂದು ದೂರಿದ್ದರು.

ದುಬೈ ಮೂಲದ ಮಧ್ಯವರ್ತಿ ಮನೋಜ್ ಪ್ರಸಾದ್ ಬಂಧನದ ಬಳಿಕ ಸಿಬಿಐ, ಆಸ್ಥಾನ ವಿರುದ್ಧ ತಿರುಗಿ ಬಿದ್ದಿದೆ. ಹೈದರಾಬಾದ್ ಮೂಲದ ಉದ್ಯಮಿ ಸನಾ ಸತೀಶ್ ಎಂಬುವವರು ನೀಡಿದ ದೂರಿನ ಮೇರೆಗೆ ಮನೋಜ್‍ನನ್ನು ಬಂಧಿಸಲಾಗಿತ್ತು. ಖುರೇಶಿ ಲಂಚ ಹಗರಣದಲ್ಲಿ ಸತೀಶ್ ಅವರ ಪಾತ್ರದ ಬಗ್ಗೆ ಆಸ್ಥಾನಾ ನೇತೃತ್ವದ ವಿಶೇಷ ತನಿಖಾ ತಂಡ ತನಿಖೆ ನಡೆಸುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News